ತಮಿಳುನಾಡು ಮನವಿ ತಿರಸ್ಕರಿಸಿದ CWRC: ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದ ಡಿಕೆ ಶಿವಕುಮಾರ್

ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯೂಆರ್​ಸಿ ಆದೇಶ ಹೊರಸಿದ್ದು, ಕರ್ನಾಟಕ ಸರ್ಕಾರಕ್ಕೆ ಮತ್ತೆ ಹಿನ್ನಡೆ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡಿನ ಮನವಿಯನ್ನು ಸಮಿತಿ ತಿರಸ್ಕರಿಸಿದ್ದು ಸಂತಸವಾಗಿದೆ ಎಂದಿದ್ದಾರೆ.

ತಮಿಳುನಾಡು ಮನವಿ ತಿರಸ್ಕರಿಸಿದ CWRC: ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್
Image Credit source: PTI
Updated By: Rakesh Nayak Manchi

Updated on: Sep 26, 2023 | 7:11 PM

ಬೆಂಗಳೂರು, ಸೆ.26: ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ಕಾವೇರಿ ನೀರು (Cauvery Water) ಹರಿಸುವಂತೆ ಸಿಡಬ್ಲ್ಯೂಆರ್​ಸಿ (CWRC) ಆದೇಶ ಹೊರಸಿದ್ದು, ಕರ್ನಾಟಕ ಸರ್ಕಾರಕ್ಕೆ ಮತ್ತೆ ಹಿನ್ನಡೆ ಉಂಟಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar), 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡಿನ ಮನವಿಯನ್ನು ಸಮಿತಿ ತಿರಸ್ಕರಿಸಿದ್ದು ಸಂತಸವಾಗಿದೆ. ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದರು.

ತಮಿಳುನಾಡಿಗೆ ಮಾಮೂಲಿ ಎರಡು ಸಾವಿರ ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಅದರ ಜೊತೆ ಇನ್ನೊಂದು ಅಥವಾ ಎರಡು ಸಾವಿರ ಕ್ಯೂಸೆಕ್ ಹರಿಸಬೇಕಾಗುತ್ತದೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಚೆನ್ನಾಗಿದೆ. ಹೀಗಾಗಿ ಸಮಸ್ಯೆಯಿಲ್ಲ ಎಂದರು.

ಬಂದ್ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾನಿಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಸಕರು ಸೇರಿದಂತೆ ಯಾರೇ ಹಾನಿ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿದ ಅವರು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋವು, ದುಗುಡ ವ್ಯಕ್ತಪಡಿಸಿದ್ದಾರೆ. ಇವತ್ತು ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಇನ್ನು ಮುಂದೆ ಬಂದ್ ಅವಶ್ಯಕತೆ ಇಲ್ಲ. ಕೋರ್ಟ್ ಸಹ ಅನುಮತಿ ಕೊಡುವುದಿಲ್ಲ ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ, ಯಾರು ಏನಂದ್ರು?

ಖಂಡಿತ ಮೇಕೆದಾಟು ಇದಕ್ಕೆ ಪರಿಹಾರ. ರಾಜ್ಯದ ಜನತೆ ಹಾಗೂ ತಮಿಳುನಾಡು ಜನತೆಗೆ ಮನದಟ್ಟು ಮಾಡಿಕೊಡಬೇಕಿದೆ ಎಂದ ಹೇಳಿದ ಡಿಕೆ ಶಿವಕುಮಾರ್, ಎಷ್ಟಾದರೂ ಡ್ಯಾಮ್ ಕಟ್ಟಿಕೊಳ್ಳಲಿ, ನಿಮಗೆ 177 ಟಿಎಂಸಿ ನೀರು ಕೊಡಬೇಕು. ಕೊಡುತ್ತಾರೆ. ಯಾಕೆ ಅಡಚಣೆ ಮಾಡುತ್ತೀರಾ ಎಂದು ಮೊನ್ನೆ ಕೋರ್ಟ್ ತನ್ನ ಪ್ರೊಸಿಡಿಂಗ್ಸ್​ನಲ್ಲಿ ಹೇಳಿದ್ದಾಗಿ ತಿಳಿಸಿದರು.

ಮೇಕೆದಾಟನ್ನು ಕನಕಪುರದವರು ಉಪಯೋಗಿಸಿಕೊಳ್ಳುತ್ತಾರೆ ಎಂದು ಯಾರೋ ಹೇಳುತ್ತಿದ್ದರು. ಮೇಕೆದಾಟು ಇರೋದೆ ತಮಿಳುನಾಡು ಗಡಿಯಲ್ಲಿ. ಮೇಕೆದಾಟು ಮಾಡುವುದರಿಂದ ಕಬನಿ, ನೇತ್ರಾವತಿ, ಬೆಂಗಳೂರು ಕುಡಿಯುವ ನೀರಿಗೆ ಅನುಕೂಲ ಆಗಲಿದೆ. ಜೊತೆಗೆ ತಮಿಳುನಾಡುಗೂ ಅನುಕೂಲ ಆಗಲಿದ ಎಂದರು.

ರಾಜಕೀಯ ಟೀಕೆಗಳ ವಿಚಾರವಾಗಿ ಮಾತನಾಡಿದ ಡಿಸಿಎಂ, ನಾನು ಟೀಕೆ ಮಾಡಬೇಡಿ ಎಂದು ಹೇಳಲು ಆಗುತ್ತಾ? ವಿಪಕ್ಷಗಳ ಸರ್ವೈವ್ ಆಗಬೇಕಲ್ಲಾ, ಅದಕ್ಕೆ ಬೇಜಾರ್ ಮಾಡಿಕೊಳ್ಳುವುದಿಲ್ಲ. ವಿಪಕ್ಷಗಳ ಬಾಯಿ ಮುಚ್ಚಿಸಲು ನಾವು ತಯಾರಿಲ್ಲ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಹಕ್ಕಿದೆ. ಅಧಿಕಾರ ಇರುವುದಕ್ಕೆ ಮಾತಾಡುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ