ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ, ಯಾರು ಏನಂದ್ರು?
ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ. ಈ ಆದೇಶವನ್ನು ಪ್ರಶ್ನೆ ಮಾಡುತ್ತೇವೆ ಎಂದು ಕಾವೇರಿ ನೀರು ನಿಯಮದ ಎಂಡಿ ಹೇಳಿದ್ದಾರೆ.
ನವದೆಹಲಿ, ಸೆ.26: ಕಾವೇರಿ ನೀರು (Cauvery Water) ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ಹೊರಡಿಸಿದೆ. ಈ ಆದೇಶವನ್ನು ಪ್ರಶ್ನೆ ಮಾಡುತ್ತೇವೆ ಎಂದು ಕಾವೇರಿ ನೀರು ನಿಯಮದ ಎಂಡಿ ಹೇಳಿದ್ದಾರೆ. ಹಾಗಾದರೆ ಆದೇಶದ ಬಗ್ಗೆ ಯಾರು ಏನಂದ್ರು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ಪ್ರಶ್ನೆ ಮಾಡುತ್ತೇವೆ. ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೇವು. ಆದರೂ ನೀರು ಹರಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ನಾವು ಆದೇಶವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಕಾವೇರಿ ನೀರು ನಿಯಮದ ಎಂಡಿ ಮಹೇಶ್ ಹೇಳಿದ್ದಾರೆ.
ಜನತೆಯ ಹೋರಾಟಕ್ಕೆ ಬೆಲೆ: ಡಿಕೆ ಶಿವಕುಮಾರ್
ತಮಿಳುನಾಡು 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕೇಳಿತ್ತು. ಆದರೆ ಸಮಿತಿಯನ್ನು ಇದನ್ನು ತಿರಸ್ಕರಿಸಿದ್ದು ಬಹಳ ಸಂತಸವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಂತಾಗಿದೆ ಎಂದರು.
ತಮಿಳುನಾಡಿಗೆ ಮಾಮೂಲಿ ಎರಡು ಸಾವಿರ ಕ್ಯೂಸೆಕ್ ನೀರು ಹೋಗುತ್ತಿರುತ್ತದೆ. ಅದರ ಜೊತೆ ಇನ್ನೊಂದು ಅಥವಾ ಎರಡು ಸಾವಿರ ಕ್ಯೂಸೆಕ್ ಹರಿಸಬೇಕಾಗುತ್ತದೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳಹರಿವು ಚೆನ್ನಾಗಿದೆ, ಸಮಸ್ಯೆಯಿಲ್ಲ ಎಂದರು.
ಬಂದ್ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾನಿಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶಾಸಕರು ಸೇರಿದಂತೆ ಯಾರೇ ಹಾನಿ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಕರ್ನಾಟಕಕ್ಕೆ ತಪ್ಪದ ಸಂಕಷ್ಟ: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್ಸಿ ಆದೇಶ
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಮತ್ತೆ ನೀರು ಹರಿಸಬಾರದು ಎಂದು ಮುಖ್ಯಮಂತ್ರಿ ಚಂದ್ರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಫ್ರೀಡಂಪಾರ್ಕ್ನಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಸರ್ಕಾರ ಕೂಡಲೇ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಲಿ. ಯಾವುದೇ ಕಾರಣಕ್ಕೂ ನೀರು ಹರಿಸುವುದಿಲ್ಲವೆಂದು ನಿರ್ಣಯಿಸಲಿ ಎಂದರು.
ರಾಜ್ಯದ ಡ್ಯಾಮ್ಗಳಲ್ಲಿ ನೀರಿಲ್ಲ, ಹಾಗಾಗಿ ಜನರ ಹಿತಕ್ಕಾಗಿ ಸರ್ಕಾರ ನೀರು ಹರಿಸಲ್ಲ ಎಂದು ನಿರ್ಣಯ ಕೈಗೊಳ್ಳಬೇಕು. ಸುಪ್ರೀಂಕೋರ್ಟ್ ಯಾವುದೇ ಆದೇಶ ನೀಡಲಿ ಹೆದರಬೇಡಿ. ಸರ್ಕಾರ ವಜಾ ಮಾಡಲಿ ಅಥವಾ ಅಮಾನತಿನಲ್ಲಿಡಲಿ. ಯಾವುದಕ್ಕೂ ಹೆದರಬೇಡಿ. ನಿಮಗೆ ಮತ ಹಾಕಲು 6 ಕೋಟಿ ಜನರಿದ್ದೇವೆ, ಮತ್ತೆ ಆರಿಸುತ್ತೇವೆ. ರಾಜ್ಯದ ಜನರ ಹಿತರಕ್ಷಣೆಗಾಗಿ ಸರ್ಕಾರ ದೃಢ ನಿರ್ಣಯ ಕೈಗೊಳ್ಳಲಿ ಎಂದರು.
ನಾಳೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ
ಟಿವಿ9 ಜೊತೆ ಮಾತನಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸಿಡಬ್ಲ್ಯೂಆರ್ಸಿ ಸುಪ್ರೀಂ ಕೊರ್ಟ್ ಅಲ್ಲ. ಆದೇಶವನ್ನು ತಿರಸ್ಕರಿಸಿ ನೀರು ಬಿಡುವುದನ್ನು ಸರ್ಕಾರ ತಡಿಬೇಕು. ಕರ್ನಾಟಕದ ಜನರ ನೀರಿನ ದಾಹವನ್ನು ಹಿಡೇರಿಸುವ ಕೆಲಸ ಸರ್ಕಾರ ಮಾಡಬೇಕು. ಇದು ನನ್ನ ಒತ್ತಾಯ ಎಂದರು.
ಸಿಡಬ್ಲ್ಯೂಆರ್ಸಿ ನಮ್ಮ ರೈತರ ಮೇಲೆ ಮರಣ ಶಾಸನ ಬರೆದಿದೆ. ರೈತರು ಬರದಿಂದ ವ್ಯವಸಾಯ ಕಳೆದುಕೊಂಡಿದ್ದಾರೆ. ಸರ್ಕಾರ ಕನ್ನಡಿಗರ ಬೇಡಿಕೆ ಹೀಡೆರಿಸಲು ಅಧಿಕಾರ ಕಳೆದು ಕೊಳ್ಳಲು ಸಹ ಸಿದ್ಧರಾಗಿರಬೇಕು. ಆದೇಶ ಖಂಡಿಸಿ ನಾಳೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದರು.
ವಾಟಳ್ ನಾಗರಾಜ್ ಅವರು 29ಕ್ಕೆ ರಾಜ್ಯ ಬಂದ್ ಕರೆ ಕೊಟ್ಟಿದ್ದಾರೆ. ಹಂತ ಹಂತವಾಗಿ ಹೋರಾಟ ಮಾಡುವ ಮುಖಾಂತರ ರೈತರು ಬೆಂಬಲ ವ್ಯಕ್ತ ಪಡಿಸುತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿ, ಪ್ರಾಧಿಕಾರ ಹಾಗೂ ಸುಪ್ರಿಕೋರ್ಟ್ ತಿರುಗಿ ನೋಡಬೇಕು ಹಾಗೆ ಹೊರಾಟ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಕಾವೇರಿ ಕಿಚ್ಚು; ತಮಿಳುನಾಡಿನಲ್ಲಿ ಸಿದ್ದರಾಮಯ್ಯಗೆ ಶ್ರದ್ದಾಂಜಲಿ, ರಾಮನಗರದಲ್ಲಿ ಸ್ಟಾಲಿನ್ಗೆ ತಿಥಿ
ಏನೇ ಆದೇಶ ಬಂದರೂ ಒಪ್ಪದೇ ನಾಳೆಯೇ ಸುಪ್ರೀಂ ಕೋರ್ಟಿಗೆ ಹೋಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. 10 ಸಾವಿರ ಕ್ಯುಸೆಕ್ ಒಳಹರಿವು ಹೆಚ್ಚಾಗಿದೆ ಅಂತ ನೀರಾವರಿ ಸಚಿವರು ಒಂದು ಹೇಳಿಕೆ ಕೊಟ್ಟರು. ಆದೇಶ ಬರುವ ಮೊದಲೇ ಈ ರೀತಿ ಹೇಳಿಕೆ ಅವಶ್ಯಕತೆ ಏನಿತ್ತು? ಸಿಡಬ್ಲ್ಯುಆರ್ಸಿ ಮುಂದೆ ಇದರ ಪರಿಣಾಮ ಏನಾಗಲಿದೆ ಎಂದು ಆಕ್ರೋಶ ಹೊರಹಾಕಿದರು.
ಏನೇ ಆಗಲಿ ಸಿಡಬ್ಲ್ಯುಎಂಎ ಆಜ್ಞೆ ವೈಜ್ಞಾನಿಕವಾಗಿಲ್ಲ. ಗ್ರೌಂಡ್ ರಿಪೋರ್ಟ್ ಇಲ್ಲ. ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕು. ನಮ್ಮ ಈ ಪರಿಸ್ಥಿತಿ ನಿಭಾಯಿಸಲು ಕಾನೂನು ರಣನೀತಿ ಡಿಫೆನ್ಸೀವ್ ಆಗಿದೆ. ನಮ್ಮ ವಕೀಲರ ಅಸಮರ್ಥತೆ ಇಲ್ಲ. ರಾಜ್ಯ ನಾಯಕರ ನಿರ್ಲಕ್ಷ್ಯ ಇದೆ. ಈ ರೀತಿ ನಿರ್ಲಕ್ಷ್ಯ ಹೇಳಿಕೆ ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಎದುರಿಸಬಹುದು ಎಂದರು.
ಸಂಕಷ್ಟ ಸೂತ್ರ ಪಾಲಿಸಬೇಕು: ಕುರುಬೂರು ಶಾಂತಕುಮಾರ್
ಸಂಕಷ್ಟ ಸೂತ್ರ ಪಾಲಿಸಬೇಕೆಂದು ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸಮಿತಿಗೆ ವಾಸ್ತವಾಂಶ ತಿಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಮತ್ತೆ ನೀರು ಹರಿಸಬಾರದು ಎಂದರು.
ರಾಜ್ಯದ ಡ್ಯಾಮ್ಗಳಲ್ಲಿ 50 TMC ನೀರಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಮಗೆ 70 ಟಿಎಂಸಿ ನೀರು ಅವಶ್ಯಕವಾಗಿದೆ. ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಷ್ಟು ನೀರು ಸಂಗ್ರಹವಿಲ್ಲ. ಹಾಗಾಗಿ ತಮಿಳುನಾಡಿಗೆ ಮತ್ತೆ ನೀರು ಹರಿಸುವ ಸ್ಥಿತಿಯಲ್ಲಿ ನಾವಿಲ್ಲ. ಬೇಕಾದರೆ ತಮಿಳುನಾಡು ಸರ್ಕಾರ ಕರ್ನಾಟಕದ ಡ್ಯಾಂಗಳಲ್ಲಿನ ನೀರಿನ ಬಗ್ಗೆ ಪರಿಶೀಲಿಸಲಿ ಎಂದು ಟಿವಿ9 ಜೊತೆ ಮಾತನಾಡುತ್ತಾ ಹೇಳಿದರು.
ಕಾವೇರಿ ಹೋರಾಟಕ್ಕೆ ಸಿದ್ಧ ಎಂದ ನಟಿ ರಾಗಿಣಿ ದ್ವಿವೇದಿ
ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ನಮಗೆ ನೀರು ಇಲ್ಲ ತಮಿಳುನಾಡಿಗೆ ನೀರು ಬಿಡುವುದು ಹೇಗೆ? ಕಾವೇರಿ ಹೋರಾಟಕ್ಕೆ ನಾನು ಸದಾ ಸಿದ್ಧ. ರೈತರಿಗೆ ನೀರು ಮುಖ್ಯ ಅವರಿಂದ ನಮ್ಮ ಜೀವನ. ಯೋಚನೆ ಮಾಡಿ ನೀರು ಬಿಡಬೇಕು. ನಮ್ಮ ರೈತರಿಗೆ ತೊಂದರೆ ಆದರೆ ನಾವು ಹೇಗೆ ಸುಮ್ಮನೆ ಇರುವುದು? ಕರ್ನಾಟಕ ನಮ್ಮ ಮನೆ, ನಮ್ಮ ರೈತರ ಹಿತ ಮುಖ್ಯ. ಸ್ಯಾಂಡಲ್ ವುಡ್ ರೈತರ ಪರವಾಗಿ ಸದಾ ಇರಲಿದೆ ಎಂದರು.
ರೈತರ ಪರವಾಗಿ ನನ್ನ ಬೆಂಬಲ ಸಹ ಇದೆ. ಶುಕ್ರವಾರದ ಬಂದ್ಗೆ ಅಗತ್ಯ ಬಿದ್ದರೆ ನಾನು ಹೋಗಿ ಬೆಂಬಲ ಕೊಡುತ್ತೇನೆ. ಈಗಾಗಲೆ ಸಾಕಷ್ಟು ಜನ ಚಿತ್ರರಂಗದವರು ಬೆಂಬಲ ನೀಡಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Tue, 26 September 23