ಬೆಂಗಳೂರು: ಭಾರತಕ್ಕೆ ‘ಕೊರೊನಾ’ ಸೋಂಕಿನ ಗಂಡಾಂತರ ಎದುರಾಗಿರುವ ಸಂದರ್ಭದಲ್ಲೇ ಮತ್ತೊಂದು ಆತಂಕ ಶುರುವಾಗಿದೆ. ಇತ್ತೀಚೆಗಷ್ಟೇ ಬಂಗಾಳಕೊಲ್ಲಿಯಲ್ಲಿ ‘ಅಂಫಾನ್’ ಆರ್ಭಟಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಪೂರ್ವ ಕರಾವಳಿಯಲ್ಲಿ ಅಂಫಾನ್ ಅಬ್ಬರಕ್ಕೆ ನೂರಾರು ಜನ ಬಲಿಯಾಗಿದ್ದರು. ಈಗ ಭಾರತದ ಪಶ್ಚಿಮ ಕರಾವಳಿಗೂ ರಾಕ್ಷಸ ಸುಳಿಯೊಂದು ಅಪ್ಪಳಿಸಲು ಸಿದ್ಧವಾಗಿದ್ದು, ಮಹಾನಗರಿ ಮುಂಬೈ ಗಢಗಢ ನಡುತ್ತಿದೆ.
ಭಾರತಕ್ಕೆ ಈ ವರ್ಷ ಸುಳಿಗಾಳಿಗಳ ಸಂಕಷ್ಟ ಎದುರಾದಂತೆ ಕಾಣ್ತಿದೆ. ಅಗತ್ಯವಿದ್ದಾಗ ಮಳೆ ಬೀಳದೆ, ವರುಣನ ಅವಕೃಪೆಗೆ ಒಳಗಾಗೋ ಭಾರತದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಅಂತಾ ಹೇಳಲಾಗುತ್ತಿದೆ. ಆದ್ರೆ ಮಳೆ ವಿಪರೀತ ಬಿದ್ರೆ ಅದರ ಆಟಾಟೋಪವೇ ಬೇರೆ ಇರುತ್ತೆ. ಕಳೆದ ವರ್ಷವೂ ಇದೇ ನಡೆದಿತ್ತು, ವಿಪರೀತ ಮಳೆ ಹಾಗೂ ಪ್ರವಾಹದಿಂದ ಕರ್ನಾಟಕ ಸೇರಿದಂತೆ ಭಾರತದ ಪೂರ್ವ ಕರಾವಳಿಯ ಬಹುತೇಕ ರಾಜ್ಯಗಳು ಬೆಚ್ಚಿಬಿದ್ದಿದ್ದವು. ಈಗ ಕೂಡ ಅದೇ ಸೀನ್ ರಿಪೀಟ್ ಆಗೋ ಸಾಧ್ಯತೆ ದಟ್ಟವಾಗಿದೆ.
ಮಹಾರಾಷ್ಟ್ರ, ಗುಜರಾತ್ ಕಡಲತೀರದಲ್ಲಿ ಭಾರಿ ಕಟ್ಟೆಚ್ಚರ..!
ಹೌದು ಅರಬ್ಬಿ ಸಮುದ್ರದಲ್ಲಿ ಮತ್ತೊಂದು ಸೈಕ್ಲೋನ್ ಜನ್ಮತಾಳಿದೆ. ಪೂರ್ವ ಕರಾವಳಿಗೆ ಹೋಲಿಕೆ ಮಾಡಿದ್ರೆ ಪಶ್ಚಿಮದಲ್ಲಿ ಸೈಕ್ಲೋನ್ಗಳ ಅಬ್ಬರ ಕಡಿಮೆ. ಆದ್ರೆ ಈ ಬಾರಿ ಅದೇನು ಗ್ರಹಚಾರವೋ ಏನೋ, ಮುಂಗಾರು ಆರಂಭ ಆಗುವ ಮೊದಲೇ ಸೈಕ್ಲೋನ್ ಬಂದಪ್ಪಳಿಸಲು ಸಿದ್ಧವಾಗಿದೆ. ಹೀಗಾಗಿ ಕರ್ನಾಟಕ, ಕೇರಳ, ಗೋವಾ ಕಡಲತೀರಗಳಲ್ಲಿ ಆರೇಂಜ್ ಆಲರ್ಟ್ ನೀಡಲಾಗಿದೆ. ಇಂದು ‘ನಿಸರ್ಗ’ ಸೈಕ್ಲೋನ್ ಮಹಾರಾಷ್ಟ್ರ ಹಾಗೂ ಗುಜರಾತ್ ಕಡಲತೀರಕ್ಕೆ ಅಪ್ಪಳಿಸಲಿದ್ದು, ಭಾರಿ ಪ್ರಮಾಣದ ಮಳೆಯಾಗಲಿದೆ. ಇನ್ನೂ ನಿಸರ್ಗ ಎಫೆಕ್ಟ್ನ ಅಂಕಿ, ಅಂಶವನ್ನ ನೋಡೋದಾದ್ರೆ.
‘ಸೈಕ್ಲೋನ್’ ಸಂಕಷ್ಟ..!
ಕಳೆದ ಬಾರಿ ನೆರೆಯಿಂದ ತತ್ತರಿಸಿದ್ದ ದೇವರ ನಾಡು ಕೇರಳಕ್ಕೂ ನಿಸರ್ಗಾ ಭಯ ಕಾಡುತ್ತಿದೆ. ಸೈಕ್ಲೋನ್ ಅಪ್ಪಳಿಸುವುದನ್ನ ಅರಿತು ಅಲರ್ಟ್ ಆದ ಕೇಂದ್ರ ಸರ್ಕಾರ ಅಪಾಯವಿರುವ ರಾಜ್ಯಗಳಿಗೆ ಎನ್ಡಿಆರ್ಎಫ್ ತಂಡಗಳನ್ನ ರವಾನಿಸಿದೆ. ಹಾಗೇ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿದೆ.
ಒಟ್ನಲ್ಲಿ ಇಂದು ಹಾಗೂ ನಾಳೆ ಭಾರಿ ಪ್ರಮಾಣದ ಮಳೆಯಾಗಲಿದ್ದು, ಪರಿಸ್ಥಿತಿ ಎದುರಿಸಲು ಸಿದ್ಧವಾಗಬೇಕಿದೆ. ನಿಸರ್ಗ ಸೈಕ್ಲೋನ್ ಅಬ್ಬರದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಹನಿಗಳ ಸಿಂಚನವಾಗಲಿದೆ. ನೀವು ಹೊರಗೆ ಓಡಾಡೋರಾಗಿದ್ರೆ ಯಾವುದಕ್ಕೂ ಒಂದು ಕೊಡೆಯನ್ನ ಜೊತೆಯಲ್ಲೇ ಇಟ್ಕೊಂಡಿರಿ. ಹಾಗೇ ಮಳೆ ಬರುವಾಗ ಮರಗಳ ಬಳಿ ಸುಳಿಯದೇ ಇರೋದು ಒಳ್ಳೆಯದು.
Published On - 8:23 am, Tue, 2 June 20