ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತೌಕ್ತೆ ಚಂಡಮಾರುತದ ಪರಿಣಾಮದಿಂದ ರಾಜ್ಯ ಹಲವು ಕಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಇಂದು (ಮೇ 15) ಮತ್ತು ನಾಳೆ (ಮೇ 16) ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಿರುವಾಗಲೇ ತೌಕ್ತೆ ಚಂಡಮಾರುತದ ಪರಿಣಾಮ ಮಂಗಳೂರು ಹೊರವಲಯದ ಸೋಮೇಶ್ವರ ಕಡಲತೀರದ ಹಿಂದೂ ರುದ್ರಭೂಮಿ ಸಮುದ್ರಪಾಲಾಗಿದೆ. ನಿನ್ನೆ ಸಮುದ್ರದ ಅಲೆಗಳ ಅಬ್ಬರಕ್ಕೆ ಸ್ಮಶಾನದ ತಡೆಗೋಡೆ ಕುಸಿದಿತ್ತು. ಆದರೆ ಇಂದು ಅಲೆಗಳ ಅಬ್ಬರಕ್ಕೆ ಸಂಪೂರ್ಣ ಜಲಾವೃತವಾಗಿದೆ. ಸದ್ಯ ಮೊಬೈಲ್ ಕ್ಯಾಮಾರದಲ್ಲಿ ಸೆರೆಹಿಡಿದ ಸ್ಮಶಾನದ ಗೊಡೆ ಕುಸಿತದ ವಿಡಿಯೋ ವೈರಲ್ ಆಗಿದೆ.
ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಳುಗಿದ ಮಲ್ಪೆ ಸಮುದ್ರ ಪ್ರದೇಶ
ಉಡುಪಿಯ ಮಲ್ಪೆ ಬೀಚ್ ಸುತ್ತಮುತ್ತಲೂ ಆತಂಕ ಸೃಷ್ಟಿಯಾಗಿದ್ದು, ಮೀನುಗಾರಿಕಾ ರಸ್ತೆಯನ್ನು ದಾಟಿ ಕಡಲ ಅಲೆಗಳು ಮೇಲೆ ಬರುತ್ತಿವೆ. ಹೀಗಾಗಿ ಕ್ರೇನ್ ಸಹಾಯದಿಂದ ಮೀನುಗಾರಿಕಾ ಬೋಟ್ ಅನ್ನು ಮೀನುಗಾರರು ಸ್ಥಳಾಂತರಿಸುತ್ತಿದ್ದಾರೆ. ಕಡಲ್ಕೊರೆತ ತಡೆಯಲು ಹಾಕಿದ್ದ ಕಲ್ಲುಗಳು ಕೂಡ ಸಮುದ್ರಪಾಲಾಗಿದ್ದು, ಮುಮದಿನ ಎರಡು ದಿನಗಳ ಕಾಲ ಹೀಗೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಪಶ್ಚಿಮ ಕರಾವಳಿಯ ಉದ್ದಕ್ಕೂ ಅಲೆಗಳ ಆರ್ಭಟ ಹೆಚ್ಚಾಗಿದ್ದು, ಮಲ್ಪೆ–ಪಡುಕೆರೆ ನಿವಾಸಿಗಳನ್ನು ಸ್ಥಳಾಂತರ ಮಾಡುವ ಚಿಂತನೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ರಘುಪತಿ ಭಟ್ ಭೇಟಿ ನೀಡಿದ್ದಾರೆ. ಸಂಜೆಯ ನಂತರ ನೀರಿನ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಕಾಳಜಿ ಕೇಂದ್ರ ಆರಂಭ ಮಾಡಿ, ತೀರದ ನಿವಾಸಿಗಳ ಸ್ಥಳಾಂತರಕ್ಕೆ ಮನವೊಲಿಕೆ ಮಾಡಲಾಗುತ್ತಿದೆ.
ತೌಕ್ತೆ ಚಂಡಮಾರುತಕ್ಕೆ ಉಕ್ಕೇರುತ್ತಿರುವ ಉತ್ತರಕನ್ನಡ ಸಮುದ್ರ
ಕಾರವಾದ, ಅಂಕೋಲ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಕುಮಟಾ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ಅಂಕೋಲಾ ಭಾಗದ ಹಲವು ಮನೆಗಳ ಸುತ್ತಲೂ ನೀರು ನಿಂತಿದ್ದು, ಬೋಟ್‌ಗಳನ್ನು ಸುರಕ್ಷಿತ ಭಾಗಕ್ಕೆ ಮೀನುಗಾರರು ಕೊಂಡೊಯ್ಯುತ್ತಿದ್ದಾರೆ. ಇನ್ನು ಮುರುಡೇಶ್ವರ ಬೀಚ್ ಬಳಿ ಇರುವ ಗೂಡಂಗಡಿಯೊಂದು ಸಮುದ್ರ ಪಾಲಾಗಿದೆ.
ಇದನ್ನೂ ಓದಿ:
Cyclone Tauktae: ತೌಕ್ತೆ ಚಂಡಮಾರುತ ಪರಿಣಾಮ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ
Monsoon 2021: ಅವಧಿಗೂ ಮುನ್ನವೇ ಮುಂಗಾರು ಪ್ರವೇಶ; ಚಂಡಮಾರುತದ ಬೆನ್ನಲ್ಲೇ ಮಳೆಗಾಲ ಶುರುವಾಗುವ ಸಾಧ್ಯತೆ
Published On - 4:54 pm, Sat, 15 May 21