Monsoon 2021: ಅವಧಿಗೂ ಮುನ್ನವೇ ಮುಂಗಾರು ಪ್ರವೇಶ; ಚಂಡಮಾರುತದ ಬೆನ್ನಲ್ಲೇ ಮಳೆಗಾಲ ಶುರುವಾಗುವ ಸಾಧ್ಯತೆ

Karnataka Weather: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ರೂಪುಗೊಳ್ಳುತ್ತಿರುವ ಜತೆಗೆ ನೈರುತ್ಯ ಮಾರುತಗಳೂ ಪ್ರಬಲಗೊಳ್ಳುತ್ತಿವೆ. ಹೀಗಾಗಿ ಅವಧಿಗೂ ಮುನ್ನವೇ ಮುಂಗಾರು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.

Monsoon 2021: ಅವಧಿಗೂ ಮುನ್ನವೇ ಮುಂಗಾರು ಪ್ರವೇಶ; ಚಂಡಮಾರುತದ ಬೆನ್ನಲ್ಲೇ ಮಳೆಗಾಲ ಶುರುವಾಗುವ ಸಾಧ್ಯತೆ
ಹವಾಮಾನ ವರದಿ (ಸಾಂಕೇತಿಕ ಚಿತ್ರ)
Follow us
Skanda
|

Updated on: May 15, 2021 | 9:01 AM

ಬೆಂಗಳೂರು: ಮಳೆಗಾಲದ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮೇ 31ರಂದು ನೈರುತ್ಯ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಾಧಾರಣವಾಗಿ ಜೂನ್​ 1ನೇ ತಾರೀಖು ಮುಂಗಾರು ಪ್ರವೇಶಿಸುವುದಾಗಿದ್ದು, ಈ ಬಾರಿಯೂ ಅಂದೇ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹವಾಮಾನ ಇಲಾಖೆ ನಿನ್ನೆ (ಮೇ 14) ಬಿಡುಗಡೆಗೊಳಿಸಿದ ವರದಿಯಲ್ಲಿ ಒಂದು ದಿನ ಮುಂಚಿತವಾಗಿಯೇ ಮುಂಗಾರು ಕೇರಳಕ್ಕೆ ಕಾಲಿಡಲಿದೆ ಎಂದು ತಿಳಿಸಿದೆ.

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ರೂಪುಗೊಳ್ಳುತ್ತಿರುವ ಜತೆಗೆ ನೈರುತ್ಯ ಮಾರುತಗಳೂ ಪ್ರಬಲಗೊಳ್ಳುತ್ತಿವೆ. ಹೀಗಾಗಿ ಅವಧಿಗೂ ಮುನ್ನವೇ ಮುಂಗಾರು ಕೇರಳವನ್ನು ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ. ಮೇ 22ರಿಂದಲೇ ನೈರುತ್ಯ ಮುಂಗಾರು ಅಂಡಮಾನ್ ಪ್ರದೇಶದ ಮೂಲಕ ಹಾದುಬರಬಹುದು ಎಂದು ಅಂದಾಜಿಸಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅಲ್ಲದೇ, ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಕೇರಳ, ಕರ್ನಾಟಕದ ವಿವಿಧ ಪ್ರದೇಶಗಳು ಸೇರಿದಂತೆ ದೇಶದ ಕೆಲ ಭಾಗಗಳಿಗೆ ತೌಕ್ತೆ ಚಂಡಮಾರುತದಿಂದ ಮಳೆ ಸಿಗುವ ನಿರೀಕ್ಷೆ ಹೆಚ್ಚಿದ್ದು ಇದರ ಬೆನ್ನಲ್ಲೇ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ.

ಇನ್ನೊಂದೆಡೆ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಗುರುವಾರ (ಮೇ 13) ನೀಡಿದ ಪ್ರಕಟಣೆಯಲ್ಲಿ ಮೇ 30ರಂದೇ ನೈರುತ್ಯ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ ಎಂದು ತಿಳಿಸಿದೆ. ಅಲ್ಲದೇ ಮುಂಗಾರು ಅವಧಿಯಲ್ಲಿ ಸರಾಸರಿ ಶೇ.103ರಷ್ಟು ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಈ ವರ್ಷ ಉತ್ತಮ ಮುಂಗಾರು ನಿರೀಕ್ಷಿತ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯದ ಭರವಸೆ

(Monsoon 2021 to hit Kerala on May 31st says IMD Karnataka will get Rain soon)