ಭಾರತದಲ್ಲಿ ಈ ವರ್ಷ ಉತ್ತಮ ಮುಂಗಾರು ನಿರೀಕ್ಷಿತ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯದ ಭರವಸೆ

Monsoon: ಕರ್ನಾಟಕದ ಒಳನಾಡಿನಲ್ಲಿ ಜುಲೈ ಮತ್ತು ಆಗಸ್ಟ್​ ತಿಂಗಳಲ್ಲಿ ಮಳೆಯ ಕೊರತೆ ಕಂಡುಬರಬಹುದು ಎಂದು ಸ್ಕೈಮೇಟ್ ಹವಾಮಾನ ಸಂಸ್ಥೆಯ ಇತ್ತೀಚಿನ ವರದಿಯು ಮಾಹಿತಿ ನೀಡಿದೆ.

  • TV9 Web Team
  • Published On - 17:08 PM, 13 Apr 2021
ಭಾರತದಲ್ಲಿ ಈ ವರ್ಷ ಉತ್ತಮ ಮುಂಗಾರು ನಿರೀಕ್ಷಿತ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯದ ಭರವಸೆ
ಗ್ರಾಮೀಣ ಆರ್ಥಿಕತೆಯ ಜೀವನಾಡಿ ಕೃಷಿ (ಸಂಗ್ರಹ ಚಿತ್ರ)

ಭಾರತದಲ್ಲಿ ಸತತ 3ನೇ ವರ್ಷ ಮುಂಗಾರು ಮಳೆ ಸಾಧಾರಣ ಅಥವಾ ತುಸು ಉತ್ತಮ ಎನ್ನುವಂಥ ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ಸ್ಕೈಮೇಟ್ ವೆದರ್ ಹೇಳಿದೆ. 2021ರ ಪ್ರಾಥಮಿಕ ಮುನ್ಸೂಚನೆ ಪ್ರಕಟಿಸಿರುವ ಸ್ಕೈಮೇಟ್ ವೆದರ್, ಜೂನ್​ನಿಂದ ಸೆಪ್ಟೆಂಬರ್​ ನಡುವೆ ಶೇ 103ರಷ್ಟು ಮಳೆಯಾಗಬಹುದು ಎಂದು ದೀರ್ಘಾವಧಿ ಸರಾಸರಿ ಮಾಹಿತಿಯ ವರದಿಯಲ್ಲಿ ತಿಳಿಸಿದೆ. 2019ರಲ್ಲಿ ಶೇ 109 ಮತ್ತು 2020ರಲ್ಲಿ ಶೇ 110ರಷ್ಟು ಮಳೆಯಾಗಲಿದೆ ಎಂದು ಸ್ಕೈಮೇಟ್ ವೆದರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಉತ್ತರ ಭಾರತ ಮತ್ತು ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಮಳೆಗಾಲವಿಡೀ ವಾಡಿಕೆಗಿಂತಲೂ ಕಡಿಮೆ ಮಳೆಯಾಗಬಹುದು ಎಂದು ಎಚ್ಚರಿಸಿದೆ. ಕರ್ನಾಟಕದ ಒಳನಾಡಿನಲ್ಲಿ ಜುಲೈ ಮತ್ತು ಆಗಸ್ಟ್​ ತಿಂಗಳಲ್ಲಿ ಮಳೆಯ ಕೊರತೆ ಕಂಡುಬರಬಹುದು ಎಂದು ವರದಿಯು ಹೇಳಿದೆ. ಮುಂಗಾರು ಆರಂಭವಾಗುವ ಜೂನ್ ಮತ್ತು ಅಂತ್ಯಗೊಳ್ಳುವ ಸೆಪ್ಟೆಂಬರ್ ಅವಧಿಯಲ್ಲಿ ದೇಶದಾದ್ಯಂತ ಉತ್ತಮ ಮಳೆ ಹಂಚಿಕೆ ಆಗಬಹುದು.

ಶಾಂತ ಸಾಗರದಲ್ಲಿ ಕಳೆದ ವರ್ಷದಿಂದೀಚೆಗೆ ಲಾ ನಿನಾ ಪರಿಸ್ಥಿತಿಯು ಕಂಡುಬರುತ್ತಿದೆ. ಮುಂಗಾರು ಅವಧಿಯಲ್ಲಿ ಇದು ಅಷ್ಟೇನು ಪರಿಣಾಮ ಉಂಟು ಮಾಡಲಾರದು ಎಂದು ನಿರೀಕ್ಷಿಸಲಾಗಿದೆ. ಮುಂಗಾರು ಮಳೆಯ ಮೇಲೆ ಹೆಚ್ಚು ಪರಿಣಾಮ ಬೀರುವ ಎನ್​ ನಿನೊ ಬಾಧೆ ಈ ವರ್ಷ ಅಷ್ಟಾಗಿ ಇರುವುದಿಲ್ಲ ಎಂದು ಸ್ಕೈಮೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ಪಾಟೀಲ್ ಹೇಳಿದ್ದಾರೆ.

ಭಾರತದ ಮಳೆಗಾಲದ ಮೇಲೆ ಪರಿಣಾಮ ಬೀರುವ ಮತ್ತೊಂದು ವಿದ್ಯಮಾನ ಹಿಂದೂ ಮಹಾಸಾಗರದ ಡೈಪೋಲ್ (Indian Ocean Dipole – IOD). ಈ ಬಾರಿ ಇದು ಬಹುತೇಕ ನ್ಯೂಟ್ರಲ್ (ಸಮಶೀತೋಷ್ಣ) ಸ್ಥಿತಿಯಲ್ಲಿದೆ. ಝೀರೊ ಲೈನ್​ನ ಎರಡೂ ಬದಿಯಲ್ಲಿ ತುಸುತುಸುವೇ ಮಾರ್ಪಾಡಾಗುತ್ತಿದೆ. ಭಾರತದ ಮಳೆಗಾಲದ ಮೇಲೆ ಇದರ ಪರಿಣಾಮ ಈ ವರ್ಷ ಅಷ್ಟಾಗಿ ಇರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.

ಶಾಂತ ಸಾಗರದಲ್ಲಿ ಸಂಭವಿಸುವ ಉಷ್ಣಾಂಶ ಮತ್ತು ವಾಯು ಒತ್ತಡದ ಏರಿಳಿತಗಳನ್ನು ಆಧರಿಸಿ ಎಲ್​ನಿನೊ ಮತ್ತು ಎನ್​ಸೊ (ಇಎನ್​ಎಸ್​ಒ) ಪರಿಣಾಮಗಳನ್ನು ಅಂದಾಜಿಸಲಾಗುತ್ತದೆ. ಎನ್​ಸೊದಿಂದಾಗಿ ಭಾರಿ ಮಳೆ, ಪ್ರವಾಹ ಮತ್ತು ಬರಗಾಲ ಬರಬಹುದು. ಜಾಗತಿಕ ತಾಪಮಾನದ ಪರಿಣಾಮಗಳನ್ನು ಎಲ್​ನಿನೊ ತೋರಿಸುತ್ತದೆ. ಲಾ ನಿನ ಇದಕ್ಕೆ ವ್ಯತಿರಿಕ್ತವಾದ ಪರಿಣಾಮಗಳನ್ನು ಸೂಚಿಸುತ್ತದೆ. ಭಾರತದಲ್ಲಿ ಎನ್​ನಿಯೊ ಬರಗಾಲ ಅಥವಾ ಮಳೆಗಾಲದಲ್ಲಿ ಮಳೆ ಕೊರತೆಯ ಜೊತೆಗೆ ತಳಕು ಹಾಕಿಕೊಂಡಿದ್ದರೆ, ಲಾ ನಿನ ವಾಡಿಕೆಗಿಂತಲೂ ಉತ್ತಮ ಮಳೆ ಮತ್ತು ಚಳಿಗಾಲದಲ್ಲಿ ತೀವ್ರ ಚಳಿಯನ್ನು ಸೂಚಿಸುತ್ತದೆ.

ಭಾರತದಲ್ಲಿ ಮುಂದಿನ ದಿನಗಳಲ್ಲಿಯೂ ವಾಡಿಕೆಗಿಂತಲೂ ಉತ್ತಮ ಮಳೆ ಸುರಿಯಬಹುದು. 1945ರಿಂದ 1985ರವರೆಗೆ ಮಳೆ ಚೆನ್ನಾಗಿ ಬೀಳುತ್ತಿತ್ತು. 85ರ ನಂತರ ಮಳೆ ಪ್ರಮಾಣ ವಾಡಿಕೆಗಿಂತಲೂ ಕಡಿಮೆಯಾಗಿತ್ತು ಎಂದು ಹವಾಮಾನ ಇಲಾಖೆಯ ಪುಣೆ ಕೇಂದ್ರದ ಹಿರಿಯ ವಿಜ್ಞಾನಿ ಡಿ.ಎಸ್.ಪೈ ಹೇಳಿದ್ದಾರೆ.

ಮುಂದಿನ ಕೆಲ ವರ್ಷಗಳವರೆಗೆ ಭಾರತದಲ್ಲಿ ವಾಡಿಕೆಗಿಂತಲೂ ಉತ್ತಮ ಮಳೆ ಮುಂದುವರಿಯಬಹುದು. ಏಕೆಂದರೆ ಸಾಮಾನ್ಯವಾಗಿ ಮಳೆ ಸುರಿಯುವ ಪ್ರಮಾಣದ ಆವರ್ತನಗಳು ಸರಾಸರಿ 31 ವರ್ಷಗಳವರೆಗೆ ಮುಂದುವರಿಯುತ್ತದೆ. ವಾಡಿಕೆಗಿಂತಲೂ ಉತ್ತಮ ಮಳೆಯಾಗುವುದು ದೇಶದ ಕೃಷಿಗೆ ಒಳ್ಳೆಯದು. ಆದರೆ ಪ್ರವಾಹದಂಥ ಪರಿಸ್ಥಿತಿಗೆ ನಾವು ಸಿದ್ಧತೆ ಮಾಡಿಕೊಂಡಿರಬೇಕಾಗುತ್ತದೆ ಎಂದು ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಎಂ.ಮಹಾಪಾತ್ರ ಕಳೆದ ಜನವರಿಯಲ್ಲಿ ಹೇಳಿದ್ದರು.

ಯಾವುದೇ ನೀರಾವರಿ ಸೌಲಭ್ಯಗಳಿಲ್ಲದ ಭಾರತದ ಶೇ 60ರಷ್ಟು ಕೃಷಿಭೂಮಿಗೆ ಮುಂಗಾರು ಮಳೆಯೇ ಆಸರೆ. ಮುಂಗಾರು ಮಳೆಯ ಪ್ರಮಾಣ ದೇಶದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಉದ್ಯೋಗಾವಕಾಶಗಳು, ಕೈಗಾರಿಕಾ ಬೇಡಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಕೃಷಿ ಇಳುವರಿ ಉತ್ತಮವಾಗಿದ್ದರೆ ಧಾನ್ಯಗಳ ಧಾರಣೆ ತಹಬದಿಯಲ್ಲಿರುತ್ತದೆ. ಉತ್ತಮ ಬೆಳೆ ಬಂದ ವರ್ಷ ರೈತರ ಕೈಲಿ ಹೆಚ್ಚು ಹಣ ಓಡಾಡುತ್ತದೆ. ಇದು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ಕೊಡುತ್ತದೆ.

(Monsoon likely to be normal for third consecutive year in India reports Skymet Weather)

ಇದನ್ನೂ ಓದಿ: Catch the Rain: ನಮಗೆ ನಮ್ಮದೇ ನೆಲದ ನೀರಿನ ಎಂಜಿನಿಯರ್​ಗಳು ಬೇಕು; ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಬರಹ

ಇದನ್ನೂ ಓದಿ: ನೀರೆಚ್ಚರದ ಬದುಕು | ಶ್ರೀಪಡ್ರೆ ಹಂಚಿಕೊಂಡ ಈ ಜಲಜಾಗೃತಿ ಕಥನಗಳಲ್ಲಿ ಬದುಕಿನ ಪಾಠಗಳಿವೆ