ನೀರೆಚ್ಚರದ ಬದುಕು | ಶ್ರೀಪಡ್ರೆ ಹಂಚಿಕೊಂಡ ಈ ಜಲಜಾಗೃತಿ ಕಥನಗಳಲ್ಲಿ ಬದುಕಿನ ಪಾಠಗಳಿವೆ

ಕೇವಲ ಕಾನೂನುಗಳನ್ನು ಜಾರಿ ಮಾಡುವ ಮೂಲಕ ನೀರಿನ ನೆಮ್ಮದಿಯನ್ನು, ನೀರಿನ ಸುಸ್ಥಿತಿಯನ್ನು ಎಲ್ಲೂ ತರಲು ಸಾಧ್ಯವಿಲ್ಲ. ಜನರ ಸಹಭಾಗಿತ್ವ ಬೇಕು. ಜನರಲ್ಲಿ ಅಂತಹ ಭಾವನೆ ಹುಟ್ಟಿದಾಗ ಮಾತ್ರ ನೀರು ಉಳಿಸುವ ಕೆಲಸ ಸಾಧ್ಯವಾಗುತ್ತದೆ ಎನ್ನುತ್ತಾರೆ ಹಿರಿಯ ಅಭ್ಯುದಯ ಪತ್ರಕರ್ತ ಶ್ರೀಪಡ್ರೆ.

ನೀರೆಚ್ಚರದ ಬದುಕು | ಶ್ರೀಪಡ್ರೆ ಹಂಚಿಕೊಂಡ ಈ ಜಲಜಾಗೃತಿ ಕಥನಗಳಲ್ಲಿ ಬದುಕಿನ ಪಾಠಗಳಿವೆ
ಪಾತಿನಿಧಿಕ ಚಿತ್ರ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 22, 2021 | 11:01 PM

ಮುಂದೊಂದು ದಿನ ವಿಶ್ವದಲ್ಲಿ ಮಹಾಯುದ್ಧವೋ, ದೇಶ-ರಾಜ್ಯಗಳೊಳಗೆ ಅಂತರ್ಯುದ್ಧವೋ ಅಗುವುದಿದ್ದರೆ ಅದು ನೀರಿಗಾಗಿಯೇ ಎಂಬ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಕರ್ನಾಟಕದ ಮಲೆನಾಡು-ಕರಾವಳಿ ಎಂಬುದು ಎಂದೂ ಬತ್ತದ ನೀರಿನ ಖಜಾನೆಯಂತೆ ಕಾಣಿಸುತ್ತಿದೆ. ಅಲ್ಲಿಂದ ಬಯಲುಸೀಮೆಗೆ ನೀರು ಹರಿಸುವ ಯೋಜನೆಗಳನ್ನು ಕಾಲಕ್ಕೊಬ್ಬರು, ಕಾಲಕ್ಕೊಂದು ರೀತಿ ಜನರ ಮುಂದಿಟ್ಟು ಮರೀಚಿಕೆಯನ್ನು ನಿಜವೆಂದು ನಂಬಿಸಲು ಹಾತೊರೆಯುತ್ತಾರೆ. ಇಂಥ ದೊಡ್ಡದೊಡ್ಡ ಯೋಜನೆಗಳಲ್ಲಿ ನಿಜಕ್ಕೂ ಯಾರಿಗೆ ಲಾಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ನಮ್ಮನಮ್ಮ ಊರುಗಳ ನೀರ ನೆಮ್ಮದಿಗೆ ನಮ್ಮ ಮಿತಿಯಲ್ಲಿಯೇ ನಾವು ಎಷ್ಟೆಲ್ಲಾ ಮಾಡಬಹುದು ಗೊತ್ತೆ? ಹತ್ತಾರು ವರ್ಷಗಳಿಂದ ನಾಡಿನಲ್ಲಿ ನೀರೆಚ್ಚರ ಮೂಡಿಸಲು ಶ್ರಮಿಸುತ್ತಿರುವ ಹಿರಿಯ ಅಭ್ಯುದಯ ಪತ್ರಕರ್ತ ಶ್ರೀಪಡ್ರೆ ಇಂಥ ಹಲವು ಸರಳ ಉಪಾಯಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಬರದ ತೀವ್ರತೆ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಇದರ ಬಿಸಿ ಬಹಳ ತೀವ್ರವಾಗಿದೆ. ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆ ಇದೆ. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಇದು ಸದಾ ಕಾಣಿಸಿಕೊಳ್ಳುವ ನೋವು. ಕುಡಿಯುವ ನೀರಿಗಾಗಿ ಇಡೀ ರಾಜ್ಯದಲ್ಲಿ ಕಳೆದ 10 ರಿಂದ 15 ವರ್ಷಗಳ ಚರಿತ್ರೆ ಗಮನಿಸಿದರೆ ನೀರಿನ ಕ್ಷಾಮ ಮತ್ತು ಜಲಮಟ್ಟದ ಕುಸಿತ ಬಹಳ ಆತಂಕಕಾರಿಯಾಗಿದೆ. ಸಾಮೂಹಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತೀರಾ ಹಿಂದೆ ಇದೆ ಎಂಬುವುದು ಬೇಸರದ ಸಂಗತಿ.

ಕೇವಲ ಕಾನೂನುಗಳನ್ನು ಜಾರಿ ಮಾಡುವ ಮೂಲಕ ನೀರಿನ ನೆಮ್ಮದಿಯನ್ನು, ನೀರಿನ ಸುಸ್ಥಿತಿಯನ್ನು ಎಲ್ಲೂ ತರಲು ಸಾಧ್ಯವಿಲ್ಲ. ಜನರ ಸಹಭಾಗಿತ್ವ ಬೇಕು. ಜನರಲ್ಲಿ ಅಂತಹ ಭಾವನೆ ಹುಟ್ಟಿದಾಗ ಮಾತ್ರ ಈ ಕೆಲಸ ಸಾಧ್ಯವಾಗುತ್ತದೆ. ಆದರೆ ಜನರಲ್ಲಿ ಅಂತಹ ಭಾವನೆ ಹುಟ್ಟಬೇಕು ಎಂದರೆ ಅವರಿಗೆ ಮೊದಲು ಜಾಗೃತಿ ಅಥವಾ ಅರಿವು ಬೇಕು. ಇನ್ನು ನೀರಿನ ಕಾರ್ಯಕರ್ತರು ಬಹುಕಾಲದಿಂದ ಕರ್ನಾಟಕ ಸರ್ಕಾರವನ್ನು ಕೇಳುತ್ತಾ ಇದ್ದ ಒಂದು ವಿಚಾರ ಎಂದರೆ ಪ್ರತಿ ಜಿಲ್ಲೆಯಲ್ಲಿ ಒಂದು ಮಳೆ ಕೇಂದ್ರವನ್ನು ಸ್ಥಾಪಿಸಬೇಕು ಎಂಬುದು. ಆ ಮಳೆ ಕೇಂದ್ರವನ್ನು ಖಾಸಗಿ ಸಹಭಾಗಿತ್ವದಲ್ಲಿ ಸುಸ್ಸಜಿತವಾಗಿ ನಿರ್ವಹಿಸಬೇಕು.

ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಹೇಗೆ ಜಲ ಸಂರಕ್ಷಣೆ ಮಾಡಬಹುದು? ಯಾವ ರೀತಿ ಮಳೆ ಕೊಯ್ಲು ಮಾಡಬಹುದು ಎಂಬ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಆಸಕ್ತಿ ಇರುವ ಜನರಿಗೆ ನೀರಿನ ಪಾಠವನ್ನು ಬಹುಮಾಧ್ಯಮಗಳ (ಮಲ್ಟಿಮಿಡಿಯಾ) ಮೂಲಕ ಅನುಭವಿಗಳಿಂದ ತಿಳಿಸಲು ಒಂದು ವ್ಯವಸ್ಥೆ ಆಗಬೇಕು. ಪ್ರತಿ ಜಿಲ್ಲೆಯಲ್ಲಿಯೂ ನೀರಿನ ಕೆಲಸ ಮಾಡಿರುವ ವ್ಯಕ್ತಿಯ ಹೆಸರು, ಮಾಹಿತಿ, ದೂರವಾಣಿ ಸಂಖ್ಯೆ ಇತ್ಯಾದಿಗಳನ್ನೆಲ್ಲಾ ಒಳಗೊಂಡಂತಹ ಒಂದು ಮಳೆಕೇಂದ್ರ ಸ್ಥಾಪಿಸಬೇಕು. ಜನ ಜಾಗೃತಿ ಹಿನ್ನೆಲೆಯಲ್ಲಿ ಇದು ಬಹಳ ಮಹತ್ವದ ಹೆಜ್ಜೆ ಆಗುತ್ತದೆ.

SHREE PADRE

ಅಭ್ಯುದಯ ಪತ್ರಕರ್ತರಾದ ಶ್ರೀ ಪಡ್ರೆ

ಮಕ್ಕಳನ್ನು ಜಲ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಿರಿ ಅಕ್ಷರ ಕಲಿಸುವ ಸಾಕ್ಷರತೆ ಕೆಲಸಗಳು ನಮ್ಮ ನಾಡಿನಲ್ಲಿ ಸಾಕಷ್ಟು ಆಗಿವೆ. ಆದರೆ ನೀರಿನ ಎಚ್ಚರ ಮೂಡಿಸುವ ಜಲ ಸಾಕ್ಷರತೆ ಮೂಡಿಸುವ ಬಗ್ಗೆ ಹೆಚ್ಚಿನ ಕೆಲಸ ಆಗಿಲ್ಲ. ಇದನ್ನು ಪ್ರಾಥಮಿಕ ಶಾಲೆಗಳಲ್ಲಿ ಪಾಠಗಳ ಮೂಲಕ ಮಾಡಲು ಆಗುವುದಿಲ್ಲ. ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಪ್ರತ್ಯೇಕವಾದ ಪಠ್ಯ ಆರಂಭಿಸಬಹುದು. ಶಾಲೆಗಳ ಸುತ್ತಲಿನ ನೀರಿನ ಪ್ರದೇಶಗಳಿಗೆ ವಿದ್ಯಾರ್ಥಿಗಳನ್ನು ಜಲ ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಬಗ್ಗೆ ನಮ್ಮ ಶಿಕ್ಷಕರು ಯೋಚಿಸಬಹುದು. ಇದರಿಂದ, ಮಕ್ಕಳು ತಾವು ಕಂಡದ್ದನ್ನು ತಮ್ಮ ಸಹಪಾಠಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆಗ ಒಂದಷ್ಟು ಬೆಳವಣಿಗೆ ಸಾಧ್ಯ.

ಇಂದು ಅದೃಷ್ಟವಶಾತ್ ಕರ್ನಾಟಕದಲ್ಲಿ ಸ್ವಯಂ ಪ್ರೇರೇಪಿತರಾಗಿ ಜಲ ಸಂಪನ್ಮೂಲವನ್ನು ಉಳಿಸಲು ಪ್ರಯತ್ನ ಮಾಡಿರುವ ಸಾಕಷ್ಟು ಮಂದಿ ಇದ್ದಾರೆ. ಆದರೆ ಇವರನ್ನು ಬಳಸಿಕೊಂಡು ಜನರಿಗೆ ಮಾಹಿತಿ ಬಿತ್ತುವ ಕೆಲಸ ಆಗಿಲ್ಲ. ಸರ್ಕಾರದಿಂದ ಕಾರ್ಯಕ್ರಮಗಳ ಘೋಷಣೆ ಆಗುತ್ತದೆ ವಿನಃ ಎಲ್ಲೂ ಕೂಡ ಸಾಮೂಹಿಕವಾಗಿ ಅರಿವು ಮೂಡಿಸುವ ಕೆಲಸ ಆಗಿಲ್ಲ. ಅರಿವು ಮೂಡಿಸುವ ಕಾರ್ಯವನ್ನು ಆರಂಭಿಸುವ ಅತ್ಯಗತ್ಯ. ಜಾಗೃತ ಜನರು ಖಂಡಿತ ನೀರು ಉಳಿಸಲು, ಸಂರಕ್ಷಿಸಲು ಕೆಲಸ ಮಾಡುತ್ತಾರೆ.

ಎಲ್ಲೆಡೆ ಹರಡಬೇಕು ನೀರ ಜಾಗೃತಿ ನಗರ ಮತ್ತು ಹಳ್ಳಿಗಳಲ್ಲಿ ಯಾವ ರೀತಿ ನೀರು ಉಳಿಸುವ ಕಾರ್ಯಗಳನ್ನು ಮಾಡಬೇಕು? ಯಾಕೆ ಮಾಡಬೇಕು? ಈ ಹಿಂದೆ ಈ ಕಾಯಕ ಮಾಡಿದವರು ಈ ಬಗ್ಗೆ ಏನು ಹೇಳುತ್ತಾರೆ ಎನ್ನುವುದನ್ನು ತಿಳಿಸಿಕೊಡಬೇಕು. ಚೆನ್ನೈನಲ್ಲಿ ದೊಡ್ಡಮಟ್ಟದಲ್ಲಿ ಮಳೆ ಕೊಯ್ಲು ಪ್ರಕ್ರಿಯೆ ಆಗಿದೆ. ಈ ಯೋಜನೆಯ ಹಿಂದೆ ಯಾವುದೇ ಸರ್ಕಾರಿ ಸಂಬಳ ತೆಗೆದುಕೊಳ್ಳದ, ಮಳೆಯ ಪಾಠ ಹೇಳುವ, ಜಲ ಸಂರಕ್ಷಣೆಯ ಅರಿವು ಮೂಡಿಸುವ ಜನರು ಕೆಲಸ ಮಾಡಿದ್ದಾರೆ. ಜಯಲಲಿತ ಸರ್ಕಾರ ಕೂಡ ಈ ಬಗ್ಗೆ ವಿಡಿಯೊಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿತ್ತು.

ಬಾಗಲಕೋಟೆಯಲ್ಲಿ ಪ್ರಭಾಕರ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸಾಮೂಹಿಕ ಜಲಜಾಗೃತಿಯ ಕೆಲಸ ಮಾಡಿದ್ದರು. ಆ ಜಿಲ್ಲೆಯಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಹೀಗಾಗಿ ನೀರಿನ ಜಾಗೃತಿ ಮೂಡಿಲು ನಾಟಕಗಳನ್ನು ಅಲ್ಲಿನ ಆಡಳಿತ ಯಶಸ್ವಿಯಾಗಿ ಬಳಸಿಕೊಂಡಿತ್ತು. ಇದು ಜನರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತ್ತು. ಒಂದೊಂದು ಊರಿಗೆ ಸಂಬಂಧಿಸಿದಂತೆ ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆಗಳು ಕಾಲಾನುಕ್ರಮದಲ್ಲಿ ರೂಪುಗೊಂಡಿರುತ್ತವೆ. ಇದರ ಉಪಯುಕ್ತತೆಯನ್ನು ಜನರಿಗೆ ಮನಗಾಣಿಸುವುದು ಅಗತ್ಯ.

ವಿಜಯಪುರದಲ್ಲಿ ಮೆಟ್ಟಿಲು ಬಾವಿಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ. ಬೆಳಗಾವಿಯಲ್ಲಿ ಬ್ರಿಟಿಷರ ಕಾಲದ ಇಡಿ ದೇಶವೇ ಹೆಮ್ಮೆ ಪಡುವ ದಿನಕ್ಕೆ 4 ಲಕ್ಷ ಲೀಟರ್ ನೀರನ್ನು ಬೇಸಿಗೆ ಕೊನೆಯಲ್ಲೂ ಕೊಡುವಂತಹ ಅದ್ಭುತ ಬಾವಿಗಳು ಮುಚ್ಚಿಹೋಗಿದ್ದವು. ಬೆಳಗಾವಿ ಮಹಾನಗರ ಪಾಲಿಯ ಮುಖ್ಯ ಎಂಜಿನಿಯರ್ ಆಗಿದ್ದ ಆರ್.ಎಸ್​.ನಾಯಕ್​ ಕಾಳಜಿ ವಹಿಸಿದ್ದರಿಂದ 100ಕ್ಕೂ ಹೆಚ್ಚು ಬಾವಿಗಳ ಜೀರ್ಣೋದ್ಧಾರ ಸಾಧ್ಯವಾಯಿತು.

ಶ್ರೀಪಡ್ರೆ ಪರಿಚಯ: ಕನ್ನಡ ಪತ್ರಿಕೋದ್ಯಮದಲ್ಲಿ ನೀರಿನ ಬಗ್ಗೆ ಅತಿಹೆಚ್ಚು ಬರೆದವರು ಶ್ರೀಪಡ್ರೆ. ‘ಅಡಿಕೆ ಪತ್ರಿಕೆ’ಯ ಮೂಲಕ ಕನ್ನಡದಲ್ಲಿ ಕೃಷಿ ಪತ್ರಿಕೋದ್ಯಮಕ್ಕೂ ಭದ್ರ ಬುನಾದಿ ಹಾಕಿದರು. ಹತ್ತಾರು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ. ನಾಡಿನ ಹಲವೆಡೆ ಶ್ರೀಪಡ್ರೆ ಅವರು ನೀರು ಉಳಿಸುವ ವಿಧಾನಗಳ ಬಗ್ಗೆ ಕಾರ್ಯಾಗಾರಗಳನ್ನೂ ನಡೆಸಿಕೊಟ್ಟಿದ್ದಾರೆ.

ಪ್ರಿಯ ಓದುಗರೇ, ‘ನೀರೆಚ್ಚರದ ಬದುಕು’ ಸರಣಿಯಲ್ಲಿ ನಿಮ್ಮ ಪಾಲೂ ಇರಲಿ. ನೀವು ಓದಿದ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ  ಮತ್ತು ನೀವು ಕಂಡುಕೊಂಡ ನೀರು ಉಳಿಸುವ ಉಪಾಯಗಳನ್ನು ನಮ್ಮೊಂದಿಗೂ ಹಂಚಿಕೊಳ್ಳಿ. ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯೊಂದಿಗೆ ಸೂಕ್ತ ಚಿತ್ರಗಳೂ ಬರಹದ ಜೊತೆಗಿರಲಿ. ನಮ್ಮ ಇಮೇಲ್ ವಿಳಾಸ tv9kannadadigital@gmail.com

ಪರಿಕಲ್ಪನೆ ಮತ್ತು ನಿರೂಪಣೆ: ಪ್ರೀತಿ ಶೆಟ್ಟಿಗಾರ್

ಇದನ್ನೂ ಓದಿ: Catch the Rain: ನಮಗೆ ನಮ್ಮದೇ ನೆಲದ ನೀರಿನ ಎಂಜಿನಿಯರ್​ಗಳು ಬೇಕು; ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಬರಹ

ಇದನ್ನೂ ಓದಿ: International Day of Forest 2021: ವಿಶ್ವ ಅರಣ್ಯ ದಿನ: ‘ತೆರೆದ ಖಜಾನೆ’ ಕಾಪಾಡುವ ಹೊಣೆ ಹೊತ್ತವರ ಮನದ ಮಾತು

Published On - 4:26 pm, Mon, 22 March 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ