
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಸಮಸ್ಯೆ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಮಾಡಿದ್ದ ಪೋಸ್ಟ್ ವಿಚಾರಕ್ಕೆ ‘ಎಕ್ಸ್’ ಖಾತೆ ಮೂಲಕವೇ ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಸವಾಲುಗಳಿದ್ದು, ಈಗಾಗಲೇ ಅದರತ್ತ ನಾವು ಗಮನಹರಿಸಿದ್ದೇವೆ. ರಸ್ತೆ ದುರಸ್ತಿಗೆ ಈಗಾಗಲೇ 1,100 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿ 10 ಸಾವಿರ ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಆ ಪೈಕಿ ಅದರಲ್ಲಿ 5 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ. ಮಹತ್ವದ ಯೋಜನೆಯ ಕೆಲಸ ಕಾರ್ಯಗಳು ಮುಂದುವರಿದಿದ್ದು, ಬೆಂಗಳೂರು ಪೂರ್ವ ಪಾಲಿಕೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಈ ಭಾಗದ ಐಟಿ-ಬಿಟಿ ಕಂಪನಿಗಳಿಗೆ ಇದರಿಂದ ಸಹಾಯ ಆಗ್ತಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
Bengaluru has given opportunities, identity, and success to millions – it deserves collective effort, not constant criticism.
Yes, challenges exist, but we’re addressing them with focus and urgency. ₹1,100 crore has been sanctioned for road repairs, 10000+ potholes identified,…
— DK Shivakumar (@DKShivakumar) October 14, 2025
ಬಯೋಕಾನ್ ಪಾರ್ಕ್ಗೆ ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು ತಮಗೆ ಕೇಳಿದ್ದ ಪ್ರಶ್ನೆ ಬಗ್ಗೆ ಕಿರಣ್ ಮಜುಂದಾರ್ ಶಾ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು. ಯಾಕೆ ಬೆಂಗಳೂರು ನಗರದ ರಸ್ತೆಗಳು ಹಾಳಾಗಿವೆ? ಕಂಡ ಕಂಡಲ್ಲಿ ಕಸದ ರಾಶಿ ಯಾಕಿದೆ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ನನ್ನನ್ನು ಚೀನಾ ಉದ್ಯಮಿ ಪ್ರಶ್ನಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ಅಲ್ಲದೆ ಈ ಪೋಸ್ಟ್ನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಕೂಡ ಮಾಡಿದ್ದರು.
ಕಿರಣ್ ಮಜುಂದಾರ್ ಅವರ ಈ ಪೋಸ್ಟ್ ವಿಚಾರವಾಗಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈಗಾಗಲೇ ಪ್ರತಿಕ್ರಿಯಿಸಿದ್ದು, ಬೆಂಗಳೂರಿಗೆ ಉದ್ಯಮಿಗಳದ್ದು ಅವರದ್ದೇ ಆದ ಕೊಡುಗೆ ಇದೆ. ಕಸ ಹಾಕೋರು ಯಾರು? ಮೇಲಿಂದ ಬಂದು ಬೀಳುತ್ತಾ? ಹೀಗಾಗಿ ನಾಗರಿಕರು ತಮ್ಮ ಜವಾಬ್ದಾರಿ ಅರಿತುಕೊಂಡು ಸಹಾಕಾರ ನೀಡಬೇಕು ಎಂದಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.