ಡಿ.30ರಂದು 7ನೇ ಆವೃತ್ತಿಯ ಮಂಗಳೂರು ಕಂಬಳ, ರೀಲ್ಸ್ ಸ್ಪರ್ಧೆ ಸಹ ಉಂಟು

|

Updated on: Dec 29, 2023 | 8:33 PM

Mangaluru Kambla 7th Edition : 7ನೇ ಆವೃತ್ತಿಯ ಮಂಗಳೂರು ಕಂಬಳಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಡಿಸೆಂಬರ್ 30ರಂದು ಬೆಳಗ್ಗೆ 9 ಗಂಟೆಗೆ ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಮಂಗಳೂರು ಕಂಬಳಕ್ಕೆ ಅದ್ಧೂರಿಯಾಗಿ ಚಾಲನೆ ದೊರೆಯಲಿದೆ. ಇನ್ನು ಕಂಬಳದ ಜೊತೆ ವಿವಿಧ ಸರ್ಧೆಗಳನ್ನು ಸಹ ಆಯೋಜಿಸಲಾಗಿದೆ.

ಡಿ.30ರಂದು 7ನೇ ಆವೃತ್ತಿಯ ಮಂಗಳೂರು ಕಂಬಳ, ರೀಲ್ಸ್ ಸ್ಪರ್ಧೆ ಸಹ ಉಂಟು
ಕಂಬಳ
Follow us on

ಮಂಗಳೂರು, (ಡಿಸೆಂಬರ್ 29): ಮೊದಲ ಬಾರಿಗೆ ಬೆಂಗಳೂರಿನ ನಡೆದ ಕಂಬಳ (Kambala) ಇನ್ನೂ ಜನರ ಮನಸ್ಸಿನಿಂದ ಹೋಗಿಲ್ಲ. ಕೋಣಗಳ ಓಟ ಕಂಬಳ ಇಡೀ ಬೆಂಗಳೂರು ಮಂದಿಯ ಗಮನಸೆಳೆದಿದ್ದವು. ಇದೀಗ ಮಂಗಳೂರು ಕಂಬಳ (Mangaluru Kambala) ಸರದಿ ಬಂದಿದೆ. ನಾಳೆ ಅಂದರೆ ಡಿಸೆಂಬರ್ 30ರಂದು ಮಂಗಳೂರು (Mangaluru) ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಂಬಳ ಅದ್ಧೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ. ಈ ಬಗ್ಗೆ ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ. ಡಿಸೆಂಬರ್ 30ರಂದು ಬೆಳಗ್ಗೆ 8:30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ ಉದ್ಘಾಟನೆಗೊಳ್ಳಲಿದೆ. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಉದ್ಘಾಟನೆ ನೆರವೇರಿಸಲಿದ್ದು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ದ್ವೀಪ ಬೆಳಗಿಸಲಿದ್ದಾರೆ ಎಂದು ತಿಳಿಸಿದರು.

ಯಾವ-ಯಾವ ವಿಭಾಗದ ಸ್ಪರ್ಧೆ?

ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ, ಕೆನೆ ಹಲಗೆ ಹೀಗೆ ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಇದರಲ್ಲಿ ಒಟ್ಟು 150 ಜೋಡಿ ಕೋಣಗಳು ಭಾಗವಹಿಸಲಿದ್ದು, ‘ನೇಗಿಲು ಕಿರಿಯ’ ರೇಸ್‌ಗಳಲ್ಲಿ ಹೆಚ್ಚಿನ ಯುವ ಕೋಣಗಳು ಸ್ಪರ್ಧಿಸಲಿವೆ ಎಂದು ವಿವರಿಸಿದರು.

ಮಂಗಳೂರು ಕಂಬಳ ಸಮಿತಿಯ ಸಲಹೆಗಾರ ವಿಜಯಕುಮಾರ್ ಮಾತನಾಡಿ, ಆರು ವಿಭಾಗಗಳಲ್ಲಿ ಓಟಗಳನ್ನು 24 ಗಂಟೆಗಳಲ್ಲಿ ಮುಗಿಸುವ ರೀತಿಯಲ್ಲಿ ಯೋಜಿಸಲಾಗಿದೆ. ಕಾರ್ಯಕ್ರಮವು ಡಿಸೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದ್ದು, ಡಿಸೆಂಬರ್ 31 ರಂದು ಬೆಳಿಗ್ಗೆ 9 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ. ಇನ್ನು ಡಿಸೆಂಬರ್ 30 ರ ರಾತ್ರಿಯಿಂದ ಜನರು ಕೋಣಗಳ ಓಟವನ್ನು ನೋಡಬಹುದು ಎಂದು ಹೇಳಿದರು.

ಕಂಬಳದ ಜೊತೆ ವಿವಿಧ ಸ್ಪರ್ಧೆ

ಸಮಿತಿಯು ಛಾಯಾಗ್ರಹಣ ಸ್ಪರ್ಧೆಯನ್ನು ಆಯೋಜಿಸಿದ್ದು, ಇದರಲ್ಲಿ ಭಾಗವಹಿಸುವವರು ಈವೆಂಟ್‌ಗೆ ಸಂಬಂಧಿಸಿದ ಗರಿಷ್ಠ ಎರಡು ಛಾಯಾಚಿತ್ರಗಳನ್ನು mangalurukambala@gmail.com ಗೆ ಮೇಲ್ ಮಾಡಬೇಕು ಎಂದು ವಿಜಯಕುಮಾರ್ ತಿಳಿಸಿದ್ದಾರೆ.

ಸಮಿತಿಯು ಮಂಗಳೂರು ಕಂಬಳ ರೀಲ್ಸ್​ ಸ್ಪರ್ಧೆಯನ್ನು ಸಹ ನಡೆಸುತ್ತಿದ್ದು, ಇದರಲ್ಲಿ ಭಾಗವಹಿಸುವವರು #MangaluruKambala7 ಹ್ಯಾಶ್ ಟ್ಯಾಗ್​ ಮೂಲಕ Instagram ನಲ್ಲಿ ಕಾರ್ಯಕ್ರಮದ ಬಗ್ಗೆ ರೀಲ್ಸ್​ಗಳನ್ನು ಮಾಡಿ ಪೋಸ್ಟ್ ಮಾಡಬೇಕು ಹೇಳಿದರು.

ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಜೀ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಎಂ.ಆರ್.ಜಿ. ಗ್ರೂಪ್ ಚೇರ್ ಮೆನ್ ಕೆ.ಪ್ರಕಾಶ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ, ಸಂಸದ ನಳಿನ್ ಕುಮಾರ್ ಕಟೀಲ್, ಸ್ಪೀಕರ್ ಯು.ಟಿ. ಖಾದರ್, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯಗುತ್ತು, ಕೋಶಾಧಿಕಾರಿ ಪ್ರೀತಮ್ ರೈ, ಉಪಾಧ್ಯಕ್ಷ ಸಂಜಯ್ ಪ್ರಭು, ಅಜಿತ್ ಬೋಪಯ್ಯ, ಈಶ್ವರ್ ಪ್ರಸಾದ್ ಶೆಟ್ಟಿ, ಗೌರವ ಸಲಹೆಗಾರ ವಿಜಯ್ ಕುಮಾರ್ ಕಂಗಿನಮನೆ ಮತ್ತಿತರರು ಉಪಸ್ಥಿತರಿದ್ದರು.