ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

|

Updated on: Apr 06, 2023 | 1:25 PM

ಅವರು 65 ವರ್ಷ ವಯಸ್ಸಿನ ವೃದ್ಧೆ. ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಸ್ವಾಭಿಮಾನಿ ಆಕೆ. ಬೆಳಗ್ಗೆ 5 ಗಂಟೆಗೆ ಎದ್ದು ತಮ್ಮ ಕಾಯಕ ಮಾಡುತ್ತಿದ್ದವರು. ಎಂದಿನಂತೆ ತಮ್ಮ ಶಾಪ್​ಗೆ ಮೀನು ತರಲು ಮಂಗಳೂರು ದಕ್ಷಿಣ ಧಕ್ಕೆಗೆ ಹೋಗಿದ್ದಾರೆ. ಅದನ್ನ ನೋಡಿಕೊಂಡ ಕಟ್ಟುಮಸ್ತಾಗಿರುವ ಯುವಕನೊಬ್ಬ ಆ ಅಜ್ಜಿಯ ಬಳಿ ಇದ್ದ ಹಣವನ್ನ ಕಳ್ಳತನ ಮಾಡುತ್ತಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದ್ದು ನೆಟ್ಟಿಗರು ಆ ಖದೀಮನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಂಗಳೂರು: ಮೀನು ಮಾರಾಟಕ್ಕೆಂದು ತಂದಿದ್ದ1.5 ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದ ಪರಾರಿಯಾದ ಖದೀಮ; ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಹಿರಾ ಶ್ರಿಯಾನ್. ಹಣ ಕಳೆದುಕೊಂಡ ವೃದ್ಧೆ
Follow us on

ದಕ್ಷಿಣ ಕನ್ನಡ: ಈ ವೃದ್ಧೆಯನ್ನೊಮ್ಮೆ ನೋಡಿ. ವಯಸ್ಸು 65 ಆದರೂ ಸೊಂಟಕ್ಕೆ ಪ್ಲಾಸ್ಟಿಕ್ ಕಟ್ಟಿಕೊಂಡು ಮೀನಿನ ರಾಶಿ ಮುಂದೆ ಕುಳಿತು ಬೆಳಗ್ಗೆಯಿಂದ ರಾತ್ರಿವರೆಗೂ ದುಡಿದು ಸಂಪಾದನೆ ಮಾಡುತ್ತಾರೆ ಈ ಸ್ವಾಭಿಮಾನಿ ಅಜ್ಜಿ. ಇವರ ಹೆಸರು ಹಿರಾ ಶ್ರಿಯಾನ್, ಮಂಗಳೂರು ನಿವಾಸಿ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಾರೆ. ಎಂದಿನಂತೆ ಏಪ್ರಿಲ್ 1 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ತಮ್ಮ ಶಾಪ್​ಗೆ ಮೀನು ತರಲು ಮಂಗಳೂರು ದಕ್ಷಿಣ ಧಕ್ಕೆಗೆ ಹೋಗಿದ್ದಾರೆ. ಅಲ್ಲಿಂದ ಮೀನು ಖರೀದಿ ಮಾಡಿಕೊಂಡು ಬರಲು ಬ್ಯಾಗ್​ನಲ್ಲಿ 1.5 ಲಕ್ಷ ರೂ ಹಣವನ್ನು ಇಟ್ಟುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗೆ ಕೆಂಪು ಶರ್ಟ್, ಕಪ್ಪು ಪ್ಯಾಂಟ್, ತಲೆಗೆ ಬಿಳಿ ಬಟ್ಟೆ ಧರಿಸಿದ ಸದೃಢವಾದ ಯುವಕನೊಬ್ಬ ಬರುತ್ತಾನೆ. ಅರೆಕ್ಷಣದಲ್ಲಿ ಈ ವೃದ್ಧೆಯ ಬಳಿಯಿದ್ದ ಬ್ಯಾಗ್​ನ್ನು ಕಸಿದು ಪರಾರಿಯಾಗುತ್ತಾನೆ.

ಈ ಅಜ್ಜಿ ಪ್ರತಿನಿತ್ಯ ಧಕ್ಕೆಗೆ ಹೋಗಿ ಮೀನು ಖರೀದಿ ಮಾಡಿಕೊಂಡು ಬಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ನಿತ್ಯ ಬ್ಯಾಗ್​ನಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದರು. ಮೀನು ಖರೀದಿಗೆ ಹೋಗುವವರು ಹಣ ಇಟ್ಟುಕೊಂಡು ಹೋಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುತ್ತೆ. ಆದರೆ ವೃದ್ಧೆ ಎನ್ನುವ ಕಾರಣಕ್ಕೆ ಖದೀಮ ಈಕೆಯನ್ನ ಟಾರ್ಗೆಟ್ ಮಾಡಿದ್ದಾನೆ. ಇನ್ನು ಈ ಘಟನೆ ಈಗ ಮೀನು ಮಾರಾಟ ಮಾಡುವ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಇನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ವೀಡಿಯೋ ಆಧಾರದಲ್ಲಿ ಆರೋಪಿಗಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಅದೇನೆ ಇದ್ದರೂ ವೃದ್ಧೆಯ ಬಳಿ ದಾಂಡಿಗನೊಬ್ಬ ಕನ್ನ ಹಾಕಿದ್ದು ನಿಜಕ್ಕೂ ಆತನಿಗೆ ನಾಚಿಕೆಗೇಡು.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ