ಮುಸ್ಲಿಮರನ್ನು ಒಪ್ಪಿಸಿ ಶಬ್ದ ಕಡಿಮೆ ಮಾಡಿಸಿ, ಅಜಾನ್ ವಿಚಾರದಲ್ಲಿ ಸ್ಪರ್ಧೆ ಬೇಡ: ಈಶ್ವರಪ್ಪ ಕಿವಿಮಾತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 04, 2022 | 1:17 PM

ಇದು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಿದರೆ ವಿದ್ಯಾರ್ಥಿಗಳು ಓದಿಕೊಳ್ಳುವುದಕ್ಕೂ ಸಮಸ್ಯೆಯಾಗುತ್ತದೆ.

ಮುಸ್ಲಿಮರನ್ನು ಒಪ್ಪಿಸಿ ಶಬ್ದ ಕಡಿಮೆ ಮಾಡಿಸಿ, ಅಜಾನ್ ವಿಚಾರದಲ್ಲಿ ಸ್ಪರ್ಧೆ ಬೇಡ: ಈಶ್ವರಪ್ಪ ಕಿವಿಮಾತು
ಸಚಿವ ಕೆ.ಎಸ್​.ಈಶ್ವರಪ್ಪ
Follow us on

ಕಾರವಾರ: ಮಸೀದಿಗಳಲ್ಲಿ ಆಜಾನ್ ವೇಳೆ ಶಬ್ದ ಮಾಲಿನ್ಯವಾಗುತ್ತದೆ ಎಂದು ನಾವು ಸ್ಪರ್ಧಿಸಲು ಹೋಗಬಾರದು. ಮುಸ್ಲಿಮರನ್ನು ಒಪ್ಪಿಸಿ ಶಬ್ದ ಕಡಿಮೆ ಮಾಡಿಸಬೇಕಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕಿನ ಮಾದನಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಎಲ್ಲರೂ ಧ್ವನಿವರ್ಧಕ ಬಳಸುತ್ತಾ ಹೋದರೆ ಸಮಸ್ಯೆ ಹೆಚ್ಚಾಗುತ್ತದೆ. ಇದು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಜೋರಾಗಿ ಮೈಕ್ ಹಾಕಿದರೆ ವಿದ್ಯಾರ್ಥಿಗಳು ಓದಿಕೊಳ್ಳುವುದಕ್ಕೂ ಸಮಸ್ಯೆಯಾಗುತ್ತದೆ. ಹೀಗಾಗಿ ಮುಸ್ಲಿಮರು ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಮಸೀದಿಯೊಳಗೆ ಶಬ್ದ ಕೇಳುವಂತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಸೀದಿಗಳಲ್ಲಿ ಧ್ವನಿವರ್ಧಕ ಬ್ಯಾನ್ ಮಾಡುವಂತೆ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ನೀಡಿರುವ ಹೇಳಿಕೆಗೆ ಕರ್ನಾಟಕದ ಶ್ರೀರಾಮಸೇನೆ ಕೂಡಾ ದನಿಗೂಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮುಂಚೆಯಿಂದಲೂ ಬಂದಂತಹ‌ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡುತ್ತೇವೆ ಎನ್ನುವುದು ಮುಸ್ಲಿಮರ ವಾದ. ಅವರು ಮಸೀದಿಗಳಲ್ಲಿ ಜೋರಾಗಿ ಕೂಗ್ತಾರೆ, ಅದಕ್ಕೆ ಹನುಮಾನ್ ಚಾಲೀಸ ಮೈಕಿನಲ್ಲಿ ಹಾಕ್ಬೇಕು ಅಂತಾ ನಾವು ಸ್ಪರ್ಧೆ ಮಾಡಬಾರದು. ಮಸೀದಿಯಲ್ಲಿ ಕೂಗುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ತೊಂದರೆಯಾಗುತ್ತಿದೆ ಎನ್ನುವ ಮಾತು ಸಹ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಮುಸ್ಲಿಂ ಸಮುದಾಯದ ಮುಖಂಡರೇ ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು ಎಂದು ಸಲಹೆ ಮಾಡಿದರು.

ರಾಜ್ಯದಲ್ಲಿ ಎದ್ದಿರುವ ಹಲಾಲ್ ಹಾಗೂ ಜಟ್ಕಾ ಮಾಂಸ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕುರಿಗಾಹಿಗಳಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಹಲಾಲ್ ಅಥವಾ ಜಟ್ಕಾ ವಿಧಾನದಲ್ಲಿ ಪ್ರಾಣಿಗಳ ವಧೆ ಮಾಡಿದರೂ ಮಾಂಸ ತಿನ್ನುವವರು ತಿಂದೆ ತಿನ್ನುತ್ತಾರೆ. ಕುರಿಗಾಹಿಗಳಿಗೆ ಕುರಿಗಳ ಮಾರಾಟಕ್ಕೆ ಏನೂ ತೊಂದರೆ ಆಗುವುದಿಲ್ಲ. ಹಲಾಲ್ ಮುಸಲ್ಮಾನರ ಪದ್ಧತಿ, ಜಟ್ಕಾ ಹಿಂದೂಗಳ ಪದ್ಧತಿ. ಯಾರಿಗೆ ಹೇಗೆ ಬೇಕು ಆ ರೀತಿಯಲ್ಲಿ ಮಾಂಸ ತಿನ್ನಲಿ. ಇದರಲ್ಲಿ ಸಂಘರ್ಷ ಮಾಡಬೇಕೆಂದೇನಿಲ್ಲ. ಜಟ್ಕಾ ಅಥವಾ ಹಲಾಲ್ ವಿಧಾನದ ಮೂಲಕವೇ ವಧಿಸಿ ಮಾಂಸ ತಿನ್ನಬೇಕು ಎಂದು ಆಗ್ರಹಿಸುವುದು ತಪ್ಪು ಎಂದರು.

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಮಟ್ಟದ ಸಂಘಟನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಅಮಿತ್ ಶಾ ಅವರ ರಾಜ್ಯ ಪ್ರವಾಸದ ಬಳಿಕ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಜತೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ತಕ್ಷಣಕ್ಕೆ ಏನೂ ಹೇಳಲು ಆಗುವುದಿಲ್ಲ. ಕಾದು ನೋಡಿ ಎಂದು ಈಶ್ವರಪ್ಪ ಹೇಳಿದರು.

ಅಮೀತ್ ಶಾ ಬಂದ್ ಹೋದ ನಂತರ ಪತ್ರಕರ್ತರಲ್ಲಿ ಕುತೂಹಲ ವ್ಯಕ್ತವಾಗಿದೆ. ಕಾಂಗ್ರೆಸ್​ನವರಿಗೆ ಎದೆ ಢವಢವ ಎಂದು ಹೊಡೆದುಕೊಳ್ಳುತ್ತಿದೆ. ಅಮೀತ್ ಶಾ ರಾಜ್ಯಕ್ಕೆ ಬರುವಾಗಲೇ ರಾಷ್ಟ್ರದ್ರೋಹಿಗಳ ವಿರುದ್ದ ಬಾಂಬ್ ತೆಗೆದುಕೊಂಡೇ ಬಂದಿದ್ದಾರೆ. ಆದರೆ ಕಾಂಗ್ರೆಸ್ ಪರಿಸ್ಥಿತಿ ಹಾಗಿಲ್ಲ. ರಾಹುಲ್ ಗಾಂಧಿ ಕಾಲಿಟ್ಟ ಕಡೆ ಕಾಂಗ್ರೆಸ್ ಸರ್ವನಾಶವಾಗುತ್ತಿದೆ. ಕರ್ನಾಟಕದಲ್ಲಿ ರಾಹುಲ್ ಪ್ರವಾಸ ಮಾಡಿದರೂ ಅದೇ ಗತಿಯಾಗುತ್ತೆ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಪ್ರವಾಸ ಬರುವುದಾದರೆ ಅವರು ಹೋಗಿ ಬರುವ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ಮತ್ತೆ ಮುಸ್ಲಿಂ ಗೂಂಡಾಗಳು ಎಂದು ಪುನರುಚ್ಚರಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಈಶ್ವರಪ್ಪ

ಇದನ್ನೂ ಓದಿ: KS Eshwarappa: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ ಕೋರ್ಟ್​