ಮಂಗಳೂರು, ಫೆ.29: ಕರಾವಳಿಯಲ್ಲಿ ಅಕ್ರಮ ಅಡಿಕೆ (Arecanut) ದಂಧೆಗೆ ಬೆಳೆಗಾರರು ತತ್ತರಿಸಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಅಡಿಕೆ ಅಕ್ರಮ ದಂಧೆಯ ವ್ಯವಸ್ಥಿತ ಜಾಲದಿಂದ ಭಾರೀ ಸಮಸ್ಯೆ ಎದುರಾಗಿದೆ. ಅಂತಾರಾಜ್ಯಗಳಿಂದ ವಿದೇಶಿ ಅಡಿಕೆ ರಾಜ್ಯದ ಮಾರುಕಟ್ಟೆಗಳಿಗೆ ಅಕ್ರಮವಾಗಿ ಪ್ರವೇಶ ಮಾಡುತ್ತಿದೆ. ಅಡಿಕೆ ಅಕ್ರಮದ ವಿರುದ್ದ ಕ್ಯಾಂಪ್ಕೋ (Campco) ಸಂಸ್ಥೆ ಸಿಡಿದೆದ್ದಿದ್ದು ಅಡಿಕೆ ಅಕ್ರಮ ಆಮದು ತಡೆಗೆ ಕೋರಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ಗೆ (Nirmala Sitharaman) ಪತ್ರ ಬರೆದಿದೆ.
ಇಂಡೋನೇಷ್ಯಾ, ಬರ್ಮಾ, ಭೂತಾನ್, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈಶಾನ್ಯ ಪ್ರದೇಶಗಳಿಂದ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಗಳು ಭಾರತಕ್ಕೆ ಎಂಟ್ರಿ ಕೊಡುತ್ತಿವೆ. ಮಂಗಳೂರು ಏರ್ ಪೋರ್ಟ್ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ಮೂಲಕವೂ ವಿದೇಶಿ ಅಡಿಕೆ ಬರುತ್ತಿದೆ. ವಿದೇಶಿ ಅಡಿಕೆ ಬೇರೆ ಬೇರೆ ಮಾರ್ಗಗಳಲ್ಲಿ ದೇಶಕ್ಕೆ ನುಸುಳಿ ಏರ್ಪೋರ್ಟ್ ಮೂಲಕ ಮಂಗಳೂರು ಪ್ರವೇಶ ಮಾಡುತ್ತಿದೆ. ಕಸ್ಟಮ್ಸ್ ಸುಂಕ ರಹಿತವಾಗಿ ಶ್ರೀಲಂಕಾದಿಂದ ಅಡಿಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ ಆಪರೇಟಿವ್(ಕ್ಯಾಂಪ್ಕೊ) ಸಂಸ್ಥೆ ಪ್ರಧಾನಿಗೆ ಪತ್ರ ಬರೆದು ಅಕ್ರಮ ಆಮದು ತಡೆಗೆ ಮನವಿ ಮಾಡಿದೆ.
ಇದನ್ನೂ ಓದಿ: Adike Rate: ಇಂದಿನ ಮಾರುಕಟ್ಟೆ ಧಾರಣೆ | ಅಡಿಕೆ ದರ | ಕೋಕೋ ಬೆಲೆ ಹೀಗಿದೆ
ಅಗರ್ತಲಾದಿಂದ 60 ಮೂಟೆಗಳಲ್ಲಿ 1,519 ಕೆ.ಜಿ ಕೆಂಪು ತಳಿಯ ಅಡಿಕೆ ವಿಮಾನ ನಿಲ್ದಾಣಕ್ಕೆ ಬಂದಿದೆ. ಅಕ್ರಮ ಅಡಿಕೆ ಅಮದಿನಿಂದ ಕರಾವಳಿಯ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಅಕ್ರಮ ಅಮದಿನಿಂದ ರಾಜ್ಯದಲ್ಲಿ ಸ್ಥಳೀಯ ಅಡಿಕೆಯ ಭರ್ಜರಿ ಬೆಲೆಯ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಅಡಿಕೆ ಬೆಳೆಯನ್ನೇ ನಂಬಿಕೊಂಡ ಕರಾವಳಿಯ ಕೃಷಿಕರಿಗೆ ಭಾರೀ ಹೊಡೆತ ಬಿದ್ದಿದೆ. ಕೆಜಿಗೆ ರೂ.500 ಗಡಿ ದಾಟಿದ್ದ ಅಡಿಕೆ ಈಗ 300ಕ್ಕೆ ಇಳಿದಿದೆ.
ಕರಾವಳಿ ಭಾಗದ ಉತ್ತಮ ಗುಣಮಟ್ಟದ ಅಡಿಕೆಗೆ ಉತ್ತರ ಭಾರತದಲ್ಲಿ ತೀವ್ರ ಬೇಡಿಕೆ ಇದೆ. ಆದರೆ ಕಡಿಮೆ ಬೆಲೆಗೆ ಬರ್ಮಾ ಹಾಗೂ ಇತರೆ ದೇಶದಿಂದ ಅಡಿಕೆ ಆಮದು ಆಗುತ್ತಿದ್ದು ಕರಾವಳಿಯ ಅಡಿಕೆಯೊಂದಿಗೆ ಅದನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೆಲೆಯೊಂದಿಗೆ ಕರಾವಳಿಯ ಅಡಿಕೆಯ ಗುಣಮಟ್ಟವೂ ಕುಸಿಯುತ್ತಿದೆ. ಗುಣಮಟ್ಟ ವೈಪರಿತ್ಯದೊಂದಿಗೆ ಬೇಡಿಕೆಯೂ ಇಳಿಮುಖವಾಗುವ ಆತಂಕ ಎದುರಾಗಿದೆ. ಕೊರೊನಾ ಸಂದರ್ಭ ಅಡಿಕೆ ಆಮದು ಸ್ಥಗಿತವಾಗಿದ್ದ ಹಿನ್ನಲೆ ಅಡಿಕೆ ಬೆಲೆ ಧಿಡೀರ್ ಏರಿಕೆಯಾಗಿತ್ತು. ಬೆಲೆ ಏರಿಕೆ ಹಿನ್ನಲೆ ಬಹುಪಾಲು ಎಲ್ಲ ಭಾಗಗಳಲ್ಲಿಯೂ ಕೃಷಿಕರು ಅಡಿಕೆ ಬೆಳೆದಿದ್ದರು. ಆದರೆ ಸದ್ಯದ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ