ಮಂಗಳೂರು, ಆ.19: ಬೆಂಗಳೂರಿನಿಂದ ಮಾದಕ ವಸ್ತು ಖರೀದಿಸಿ ಮಂಗಳೂರು (Mangaluru) ಮತ್ತು ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ನನ್ನು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಹಸನ್ ಸಾದಿಕ್ ಅಲಿಯಾಸ್ ಬ್ಲೇಡ್ ಸಾದಿಕ್ (35) ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಎಸಿಪಿ ಪಿ.ಎ. ಹೆಗ್ಡೆ ನೇತೃತ್ವದ ಸಿಸಿಬಿ ಪೊಲೀಸರ ತಂಡ ಬಂಧಿಸಿದೆ.
ಬಂಧಿತ ಆರೋಪಿಯಿಂದ 2,50,000 ರೂ. ಮೌಲ್ಯದ 50 ಗ್ರಾಂ ಎಂಡಿಎಂಎ ಮಾದಕ ದ್ರವ್ಯ, ಮಾರುತಿ 800 ಕಾರು, ಮೊಬೈಲ್ ಫೋನ್ ಮತ್ತು ಒಟ್ಟು 3,65,500 ರೂ. ಮೌಲ್ಯದ ಡಿಜಿಟಲ್ ತೂಕದ ಮಾಪಕವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಆರೋಪಿ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾದಕ ದ್ರವ್ಯ ದಂಧೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನಷ್ಟು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.
ಇದನ್ನೂ ಓದಿ: ಡ್ರಗ್ಸ್ ವಿರುದ್ಧ ಮುಂದುವರಿದ ಮಂಗಳೂರು ಪೊಲೀಸ್ ಕಾರ್ಯಾಚರಣೆ; 10 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ನಾಲ್ವರ ಬಂಧನ
ಸಾದಿಕ್ ವಿರುದ್ಧ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಟು ಹಲ್ಲೆ ಮತ್ತು ಬೆದರಿಕೆ ಮತ್ತು ನಾಲ್ಕು ಕೊಲೆ ಯತ್ನ ಪ್ರಕರಣಗಳು, ಪುತ್ತೂರಿನಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು, ಉಪ್ಪಿನಂಗಡಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ, ಕಾವೂರಿನಲ್ಲಿ ದರೋಡೆ ಯತ್ನ. ಹೆಬ್ಬಾಳ, ಬೆಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ದಂಧೆ ಪ್ರಕರಣಗಳು ದಾಖಲಾಗಿವೆ.
ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಬಂಧನಕ್ಕೆ ವಾರೆಂಟ್ ಕೂಡ ಹೊರಡಿಸಲಾಗಿತ್ತು. ಸದ್ಯ, ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ, ಪೊಲೀಸ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್ಐ ರಾಜೇಂದ್ರ ಬಿ., ನರೇಂದ್ರ, ಶರಣಪ್ಪ ಭಂಡಾರಿ, ಸುದೀಪ್ ಎಂ.ವಿ ಮತ್ತು ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ