ಜಾರ್ಖಂಡ್​ನಿಂದ ಬಂದ ಮಾನಸಿಕ ಅಸ್ವಸ್ಥನಿಗೆ ದಕ್ಷಿಣ ಕನ್ನಡದ ಹೊಟೇಲ್​ನಲ್ಲಿ ಆಶ್ರಯ! 3 ವರ್ಷಗಳ ನಂತರ ಕುಟುಂಬ ಸೇರುತ್ತಿರುವ ವ್ಯಕ್ತಿ

ರಾಜ್ಯ ಯಾವುದು, ಊರು ಯಾವುದು ಎಂದು ನೆನಪಿಸಿಕೊಂಡು ಹೇಳುವ ಪರಿಸ್ಥಿತಿಯಲ್ಲಿಲ್ಲದ ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿನ ಹೊಟೇಲ್​ವೊಂದರಲ್ಲಿ ಆಶ್ರಯ ಪಡೆದಿದ್ದು, ಇದೀಗ ಆ ವ್ಯಕ್ತಿ ಆತನ ಮನೆಯವರೊಂದಿಗೆ ಪುನರ್ಮಿಲನವಾಗುವ ಸಮಯ ಬಂದಿದೆ.

ಜಾರ್ಖಂಡ್​ನಿಂದ ಬಂದ ಮಾನಸಿಕ ಅಸ್ವಸ್ಥನಿಗೆ ದಕ್ಷಿಣ ಕನ್ನಡದ ಹೊಟೇಲ್​ನಲ್ಲಿ ಆಶ್ರಯ! 3 ವರ್ಷಗಳ ನಂತರ ಕುಟುಂಬ ಸೇರುತ್ತಿರುವ ವ್ಯಕ್ತಿ
ಸುಲ್ಲು ಸಿಂಝು ತನ್ನ ಕುಟುಂಬದ ಜೊತೆ ತೆಗೆಸಿಕೊಂಡಿರುವ ಫೋಟೋ

Updated on: Mar 03, 2023 | 11:15 PM

ಬೆಳ್ತಂಗಡಿ: ರಾಜ್ಯ ಯಾವುದು, ಊರು ಯಾವುದು ಎಂದು ನೆನಪಿಸಿಕೊಂಡು ಹೇಳುವ ಪರಿಸ್ಥಿತಿಯಲ್ಲಿಲ್ಲದ ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಅದೊಂದು ಹೊಟೇಲ್​ನಲ್ಲಿ ಆಶ್ರಯ ಪಡೆದುಕೊಂಡು ಹೊಟೇಲ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಾನಸಿಕ ಅಸ್ವಸ್ಥನಾಗಿದ್ದರೂ ಹೊಟೇಲ್​ಗೆ ಬರುವ ಸಾರ್ವಜನಿಕರೊಂದಿಗೆ ಉತ್ತಮ ಸ್ನೇಹದಿಂದ ಒಡನಾಟವನ್ನು ಹೊಂದಿದ್ದ. ಆತನ ಊರನ್ನು ಸಂಪರ್ಕ ಮಾಡಿ ಕುಟುಂಬಕ್ಕೆ ಸೇರಿಸಲು ಸ್ಥಳೀಯ ತಂಡವೊಂದು ಪ್ರಯತ್ನ ಮಾಡಿದ್ದು, ಅದರಂತೆ ಪುನರ್ಮಿಲನದ ಸಮಯ ಬಂದಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂದಡ್ಕ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸಂಗಮ್ ಹೊಟೇಲ್​ನ ಮಾಲೀಕ ಅಬ್ದುಲ್ ಲತೀಫ್ ಎಂಬವರಿಗೆ ಕಳೆದ ಮೂರು ವರ್ಷದ ಹಿಂದೆ ಸೋಮಂದಡ್ಕದಲ್ಲಿ ಪ್ರತಿದಿನ ತಿರುಗಡುತ್ತಿದ್ದವನನ್ನು ಗಮನಿಸಿದ ಬಸ್ ಚಾಲಕ ನಾರಾಯಣ ಪೂಜಾರಿ ಮಾಹಿತಿ ನೀಡಿದ್ದರು. ಅದರಂತೆ ಅಬ್ದುಲ್‌ ಲತೀಫ್ ವ್ಯಕ್ತಿಯ ಬಳಿಗೆ ಬಂದು ವಿಚಾರಿಸಿದಾಗ ಯಾವುದೇ ರೀತಿಯ ಸರಿಯಾದ ಮಾತುಗಳನ್ನು ಹೇಳುತ್ತಿರಲ್ಲಿಲ್ಲ. ಅವನನ್ನು ಹೊಟೇಲ್ ಕರೆದುಕೊಂಡು ಬಂದು ರೂಂ ವ್ಯವಸ್ಥೆ ಮಾಡಿ ಪ್ರತಿದಿನ ಊಟ, ತಿಂಡಿ ನೀಡಿ ನೋಡಿಕೊಳ್ಳುತ್ತಿದ್ದರು. ನಂತರ ಪ್ರತಿದಿನ ಹೊಟೇಲ್​ನಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಹೀಗಾಗಿ ಆತನ ತಿಂಗಳ ಸಂಬಳವನ್ನು ಬ್ಯಾಂಕ್ ಖಾತೆಯೊಂದನ್ನು ಮಾಡಿ ಹಣವನ್ನು ಪ್ರತಿ ತಿಂಗಳು ಹಾಕುತ್ತಿದ್ದಾರೆ.

ಇದನ್ನೂ ಓದಿ: ಉದ್ಘಾಟನೆಯಾಗಿಲ್ಲ ಆಗಲೇ ದುಃಸ್ಥಿತಿಯಲ್ಲಿ ಮಂಗಳೂರಿನ ದುಬಾರಿ ಕ್ಲಾಕ್ ಟವರ್‌! ಒಣಗಿದ ಗಾರ್ಡನ್, ಸ್ಥಗಿತಗೊಂಡ ಕಾರಂಜಿ -ಕಳಾಹೀನ ಪಾಲಿಕೆ

ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಗಳಲ್ಲಿ ಬದಲಾವಣೆ ಬಂದಿರುವ ಕಾರಣ ಹೊಟೇಲ್ ಮಾಲೀಕ ಅಬ್ದುಲ್‌ ಲತೀಫ್ ಸ್ಥಳೀಯ ಸಮಾಜ ಸೇವಕ ಅಬ್ದುಲ್ ಅಜೀಜ್ ಅವರ ತಂಡದ ಸದಸ್ಯರಿಗೆ ಮಾಹಿತಿ ನೀಡಿ ಮರಳಿ ಕಳುಹಿಸಲು ಮಾಹಿತಿ ನೀಡಿದ್ದರು. ಅದರಂತೆ ಆತನ ಊರಿನ ಬಗ್ಗೆ ವಿಚಾರಿಸಿದಾಗ ಅಲ್ವ ಸ್ವಲ್ಪ ಮಾತುಗಳನ್ನು ಮಾತಾನಾಡುತ್ತಿದ್ದಾನೆ. ಈ ವಿಚಾರವನ್ನು ಮಾಧ್ಯಮವನ್ನು ಸಂಪರ್ಕಿಸಿ ಆತನ ಬಗ್ಗೆ ವರದಿ ಪ್ರಸಾರ ಮಾಡಿ ಕುಟುಂಬ ಸದಸ್ಯರನ್ನು ಸೇರಿಸಲು ಮನವಿ ಮಾಡಿಕೊಂಡಿದ್ದಾರೆ.

ಜಾರ್ಖಂಡ್​ನಿಂದ ತುಳುನಾಡಿಗೆ ಬಂದ ಮಾನಸಿಕ ಅಸ್ವಸ್ಥ

ಈ ವ್ಯಕ್ತಿ ಜಾರ್ಖಂಡ್ ಮೂಲದ ಸೋನ್ ಬೋಗಿ ಎಂಬ ಊರಿನ ಹೆಸರು ಹೇಳಿದ್ದು, ಸರಿಯಾದ ನೆನಪಿನ ಶಕ್ತಿ ಇಲ್ಲದಿರುವುದರಿಂದ ಆತನ ಊರಿನ ಬಗ್ಗೆ ಖಚಿತ ಪಡಿಸಲು ಅಸಾಧ್ಯವಾಗುತ್ತಿದೆ‌. ಆತನನ್ನು ವಿಚಾರಿಸಿದಾಗ ತಲಪುರ್, ನೂರ್ದೆ ಎಂಬ ಹೆಸರನ್ನು ಮಾತ್ರ ಹೇಳುತ್ತಿದ್ದಾನೆ. ಮದುವೆಯಾಗಿ ಹೆಂಡತಿ ಮಕ್ಕಳಿದ್ದಾರೆ. ನನ್ನ ಅಣ್ಣ ಒಬ್ಬ ಸಂಗೀತಗಾರನಾಗಿದ್ದಾನೆ ಎನ್ನುವ ಮಾಹಿತಿ ನೀಡುತ್ತಾನೆ‌. ಆತ ನೀಡಿದ ಹೆಸರನ್ನು ಹೇಳುವ ಬಗ್ಗೆ ಮಾಧ್ಯಮ ತಂಡ ಜಾರ್ಖಂಡ್ ರಾಜ್ಯದ ಕೆಲವರನ್ನು ಸಂಪರ್ಕಿಸಿ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕಲು ಮಾಹಿತಿ ಹಂಚಿಕೊಳ್ಳುತ್ತಿದೆ.

ಹೊಟೇಲ್​ನಲ್ಲಿದ್ದುಕೊಂಡು ಅಡುಗೆ ಕಲಿತ ಮಾನಸಿಕ ಅಸ್ವಸ್ಥ

ಸಂಗಮ್ ಹೋಟೆಲಿಗೆ ಕರೆದುಕೊಂಡು ಬಂದ ಬಳಿಕ ಆಡುಗೆ ಕೆಲಸ ಮಾಡಲು ಕಲಿತ್ತಿದ್ದಾನೆ. ಅದಲ್ಲದೆ ಪಕ್ಕದ ಅಂಗಡಿಗೆ ಹೋಗಿ ವಸ್ತುಗಳನ್ನು ತಂದು ಹೊಟೇಲ್​ನಲ್ಲಿ ಇಡುತ್ತಾನೆ. ಹೊಟೇಲಿಗೆ ಬರುವ ಗ್ರಾಹಕರ ಜೊತೆ ಆತ್ಮೀಯವಾಗಿ ನಗುತ್ತಾ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಕೆಲವರು ಇತನನ್ನು ತಮ್ಮನಂತೆ ಹೆಗಲಿಗೆ ಕೈಹಾಕಿಕೊಂಡು ನಗುತ್ತಾ ಮಾತಾನಾಡುತ್ತಾರೆ. ಯಾರಿಗೂ ಈವರೆಗೆ ಈತ ತೊಂದರೆಯನ್ನು ನೀಡಿಲ್ಲ ಎನ್ನುತ್ತಾರೆ ಹೊಟೇಲಿಗೆ ಬರುವ ಗ್ರಾಹಕರು.

ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ

ಈತನನ್ನು ಫೆ.18 ರಂದು ಅಬ್ದುಲ್ ಲತೀಫ್, ಅಬ್ದುಲ್ ಅಜೀಜ್ ಕಾರಿನಲ್ಲಿ ಮಂಗಳೂರಿನಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ವೈದ್ಯರಾದ ಕಿರಣ್ ಕುಮಾರ್ ತೋರಿಸಿದ್ದಾರೆ. ಸದ್ಯ ವೈದ್ಯರು ಈತನಿಗೆ ಹತ್ತು ದಿನದ ಔಷಧಿ ನೀಡಿದ್ದು ಈತನ ಮಾನಸಿಕ ರೋಗವನ್ನು ಶೀಘ್ರದಲ್ಲೇ ಪರಿಹರಿಸಿ ಮೊದಲಿನಂತೆ ಆರೋಗ್ಯವಂತನಾಗಿ ಮಾಡಲಾಗುವುದು ಎಂದು ಕಿರಣ್ ಕುಮಾರ್ ಭರವಸೆ ನೀಡಿದ್ದಾರೆ.

ಸಂಗಮ್ ಹೊಟೇಲ್ ಮಾಲೀಕ ಅಬ್ದುಲ್ ಲತೀಫ್, ಸಮಾಜ ಸೇವಕ ಅಬ್ದುಲ್ ಅಜೀಜ್, ಬಿ.ಎಮ್.ಹಂಝ, ಜಾಬೀರ್, ನಾರಾಯಣ ಪೂಜಾರಿ, ಆಶ್ರಫ್ ಆಲಿಕುಂಞ ಮತ್ತು ಮಾಧ್ಯಮಗಳು ಸಮೇತ ಕುಟುಂಬವನ್ನು ಸಂಪರ್ಕಿಸಿ ಊರಿಗೆ ಕಳುಹಿಸಲು ಪ್ರಯತ್ನಿಸುತ್ತಿದೆ.
ಟಿವಿ9 ಸಹಕಾರದೊಂದಿಗೆ ಒರಿಸ್ಸಾ ಮೂಲದ ವ್ಯಕ್ತಿಯೊಬ್ಬನನ್ನು ಇದೇ ತಂಡ ಕುಟುಂಬ ಸೇರಿಸಿತ್ತು.

ಇದನ್ನೂ ಓದಿ: ಉಡುಪಿ: ಜಿಲ್ಲೆಯ ಪ್ರಸಿದ್ಧ ಕಂಬಳ ಅದ್ದೂರಿಯಾಗಿ ನಡೆದಿದ್ದು, ಕೋಣಗಳ ಓಟ ನೋಡಿ ಕಂಬಳ ಪ್ರಿಯರು ಸಂತಸ ಪಟ್ಟರು; ಫೋಟೋಗಳಲ್ಲಿ ನೋಡಿ

15 ವರ್ಷಗಳಿಂದ ಮಾನಸಿಕವಾಗಿ ತಿರುಗಡುತ್ತಿದ್ದ ಒರಿಸ್ಸಾ ಮೂಲದ ಪುರುಷೋತ್ತಮ ಎಂಬಾತ ಸೋಮಂದಡ್ಕದ ಸಂಗಮ್ ಹೊಟೇಲ್ ಬಳಿ ತಿರುಗಾಡುತ್ತಿದ್ದಾಗ ಆತನಿಗೂ ಅಬ್ದುಲ್ ಲತೀಫ್ ಆಶ್ರಯ ನೀಡಿ ಹೊಟೇಲ್​ನಲ್ಲಿ ಎರಡು ವರ್ಷ ಕೆಲಸ ಕೊಡಿಸಿ ಆತನ ಸಂಬಂಳವನ್ನು ಖಾತೆ ಮಾಡಿಸಿದ್ದರು. ಕೊನೆಗೆ ರಾಜ್ಯದ ಪ್ರತಿಷ್ಟಿತ ಟಿವಿ9 ವಾಹಿನಿ ಆತನ ಬಗ್ಗೆ ತಿಳಿದು ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರ ತಿಳಿಸಿ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು. ಬಂಟ್ವಾಳ ಎಎಸ್​ಪಿಯಾಗಿದ್ದ ರಾಹುಲ್ ಕುಮಾರ್ ಐಪಿಎಸ್ ಮೂಲಕ ಒರಿಸ್ಸಾ ಪೊಲೀಸರ ಮೂಲಕ ಕುಟುಂಬವನ್ನು ಸಂಪರ್ಕಿಸಿ ಮನೆಯವರನ್ನು ಪತ್ತೆ ಮಾಡಿ ಸೋಮಂದಡ್ಕಕ್ಕೆ ಕರೆಸಿಕೊಂಡು ಕುಟುಂಬದೊಂದಿಗೆ ದುಡಿದ ಹಣವನ್ನು ಕೂಡ ಕುಟುಂಬಕ್ಕೆ ನೀಡಿ ಕಳುಹಿಸಿಕೊಟ್ಟಿದ್ದರು.

ಅಂತು ಇಂತು ಗುರುತು ಪತ್ತೆ

ತಂಡ ಧರ್ಮಸ್ಥಳ ಪೊಲೀಸರ ಸಹಕಾರ ಪಡೆದು ಈತನ ಗುರುತು ಪತ್ತೆ ಮಾಡಿದೆ. ಈತ ಜಾರ್ಖಂಡ್‌ ರಾಜ್ಯದ ಪಶ್ಚಿಮ ಸಿಂಗ್ರೂಮ್​ನ ಹಟಗಮರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ಲು ಸಿಂಝು(35) ಅನ್ನೋದು ಗೊತ್ತಾಗಿದೆ. ಈತ ಕಳೆದ ಐದು ವರ್ಷಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಹೇಗೆ ಜಾರ್ಖಂಡ್​ನಿಂದ ಕರ್ನಾಟಕಕ್ಕೆ ಬಂದ ಅನ್ನೋದು ಮಾತ್ರ ನಿಗೂಢವಾಗಿದೆ.

ವಿಮಾನ ಹತ್ತಿ ತನ್ನ ಗೂಡ ಸೇರಲಿರುವ ಸುಲ್ಲು ಸಂಝ!

ಸದ್ಯ ಪೊಲೀಸರ ಸಹಕಾರ ಪಡೆದು ಅಲ್ಲಿನ ಸ್ಥಳೀಯ ಪೊಲೀಸರನ್ನ ಸಂಪರ್ಕಿಸಿದ ಆತನ ಮನೆಯವರನ್ನು ಪತ್ತೆ ಮಾಡಲಾಗಿದೆ. ಸುಲ್ಲು ಸಿಂಝು ತನ್ನು ಕುಟುಂಬದ ಗ್ರೂಫ್ ಫೋಟೊ ನೋಡಿ ಫುಲ್ ಖುಷಿಯಾಗಿದ್ದಾನೆ. ಇಂದು ಆತನ ಕುಟುಂಬಸ್ಥರು ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ನಾಳೆ ಸುಲ್ಲು ಸಿಂಝು ನನ್ನು ವಿಮಾನದಲ್ಲಿ ಕರೆದುಕೊಂಡು ಹೋಗುತ್ತಾರೆ. ಅದರ ಎಲ್ಲಾ ಖರ್ಚನ್ನು ಇದೇ ತಂಡ ಬರಿಸಲಿದೆ.

ಗಂಡ ಮಿಸ್ಸಿಂಗ್ ಪತ್ನಿ ಮತ್ತೊಂದು ಮದುವೆ!

ಇನ್ನೊಂದು ವಿಪರ್ಯಾಸ ಅಂದರೆ ಸುಲ್ಲು ಸಿಂಝುಗೆ ಮದುವೆಯಾಗಿತ್ತು. ಐದು ವರ್ಷ ನಾಪತ್ತೆಯಾಗಿದ್ದಕ್ಕೆ ಆತನ ಪತ್ನಿ ಮತ್ತೊಂದು ವಿವಾಹವಾಗಿದ್ದಾಳೆ. ಅದೇನೆ ಇದ್ದರೂ ಐದು ವರ್ಷಗಳ ಬಳಿಕ ಸುಲ್ಲು ತನ್ನ ಕುಟುಂಬ ಜೊತೆ ಪುನರ್ಮಿಲನವಾಗಿತ್ತಿರೋದು ಖುಷಿಯ ವಿಚಾರ.

ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:12 pm, Fri, 3 March 23