ಉದ್ಘಾಟನೆಯಾಗಿಲ್ಲ ಆಗಲೇ ದುಃಸ್ಥಿತಿಯಲ್ಲಿ ಮಂಗಳೂರಿನ ದುಬಾರಿ ಕ್ಲಾಕ್ ಟವರ್! ಒಣಗಿದ ಗಾರ್ಡನ್, ಸ್ಥಗಿತಗೊಂಡ ಕಾರಂಜಿ -ಕಳಾಹೀನ ಪಾಲಿಕೆ
ಜನರ ವಿರೋಧದ ನಡುವೆಯೇ ಅತ್ಯಂತ ದುಬಾರಿ ವೆಚ್ಚದಲ್ಲಿ ಈ ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಇತ್ತಿಚೇಗಷ್ಟೇ ಈ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನು ಕೂಡ ಅಧಿಕೃತವಾಗಿ ಇದರ ಉದ್ಘಾಟನೆಯಾಗಿಲ್ಲ. ಆದ್ರೆ ಅದಾಗಲೇ ಈ ಕ್ಲಾಕ್ ಟವರ್ ಪಾಳು ಬಿದ್ದ ಸ್ಥಿತಿಗೆ ತಲುಪಿದೆ.
ಅದು ಮಂಗಳೂರು ನಗರದ ಸೌಂದರ್ಯ ಹೆಚ್ಚಿಸಲೆಂದು ನಿರ್ಮಿಸಲಾಗಿರುವ ದುಬಾರಿ ಕ್ಲಾಕ್ ಟವರ್. ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ತಲೆ ಎತ್ತಿದ ಈ ಕ್ಲಾಕ್ ಟವರ್ (clock tower) ಸೂಕ್ತ ನಿರ್ವಹಣೆಯಿಲ್ಲದೇ (Negligence) ದು:ಸ್ಥಿತಿ ತಲುಪಿದೆ. ತೆರಿಗೆ ಕಟ್ಟಿದ ಜನ ಮಹಾನಗರ ಪಾಲಿಕೆಗೆ ಛೀಮಾರಿ ಹಾಕುತ್ತಿದ್ದಾರೆ. ಆ ಬೃಹತ್ ಕ್ಲಾಕ್ ಟವರ್ ಇರೋದು ಮಂಗಳೂರು ನಗರದ ಹಂಪನಕಟ್ಟೆಯಲ್ಲಿ. ಮಂಗಳೂರು ನಗರಕ್ಕೆ ಕಲಶಪ್ರಾಯವಾದ ಈ ಕ್ಲಾಕ್ ಟವರ್ ಯೋಜನೆಯನ್ನು 2018ರಲ್ಲಿ ನಿರ್ಮಾಣ ಮಾಡಲಾಯಿತು. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬಂದ ಅನುದಾನದಲ್ಲಿ ಬಹು ಜನರ ವಿರೋಧದ ನಡುವೆಯೇ ಅತ್ಯಂತ ದುಬಾರಿ ವೆಚ್ಚದಲ್ಲಿ ಈ ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಇತ್ತೀಚೆಗಷ್ಟೇ ಈ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನು ಕೂಡ ಅಧಿಕೃತವಾಗಿ ಇದರ ಉದ್ಘಾಟನೆಯಾಗಿಲ್ಲ. ಆದ್ರೆ ಅದಾಗಲೇ ಈ ಕ್ಲಾಕ್ ಟವರ್ ಪಾಳು ಬಿದ್ದ ಸ್ಥಿತಿಗೆ ತಲುಪಿದೆ. ಕ್ಲಾಕ್ ಟವರ್‌ನ ಕಾರಂಜಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಸುತ್ತಲಿನ ಗಾರ್ಡನ್‌ಗೂ ನೀರು ಸರಬರಾಜು ಇಲ್ಲದೆ ಒಣಗಿ ಹೋಗಿದೆ. ತೆರಿಗೆ ಕಟ್ಟಿದ ಜನ ಈ ರೀತಿ ಹಣ ಪೋಲು ಮಾಡಿದ್ದಕ್ಕೆ ಮಂಗಳೂರು ಮಹಾನಗರ ಪಾಲಿಕೆಯ (mangalore city corporation) ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಂಪನಕಟ್ಟೆ ವೃತ್ತದ ಬಳಿ 1968ರಲ್ಲಿ ಸಮಯ ತಿಳಿಯಲೆಂದು ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಗಂಟೆ ಗಂಟೆಗೆ ಬೆಲ್ ಮಾಡುತ್ತಾ ನಗರದ ಜನರನ್ನು ಎಚ್ಚರಿಸುತ್ತಿದ್ದ ಕ್ಲಾಕ್ ಟವರ್ ಕೈ ಗಡಿಯಾರದ ಬಳಕೆಗೆ ಬಂದ ಬಳಿಕ ಅಷ್ಟೊಂದು ಉಪಯೋಗಕ್ಕೆ ಬರುತ್ತಿರಲಿಲ್ಲ. ಹೀಗಾಗಿ 1994ರಲ್ಲಿ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಹಳೆಯ ಕ್ಲಾಕ್ ಟವರನ್ನು ಕೆಡವಲಾಗಿತ್ತು.
ಆದರೆ 2018ರಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಅದೇ ಜಾಗದಲ್ಲಿ 75 ಅಡಿ ಎತ್ತರದ ಕ್ಲಾಕ್ ಟವರ್‌ನ್ನು ನಿರ್ಮಿಸಲಾಯಿತು. ಟವರ್‌ನ ನಾಲ್ಕು ಬದಿಯು ದೊಡ್ಡ ಗಡಿಯಾರಗಳು, ರಾತ್ರಿ ಹೊತ್ತಿಗೆ ಲೈಟಿಂಗ್ ವ್ಯವಸ್ಥೆ ಹಾಗೂ ವರ್ಣ ರಂಜಿತ ಕಾರಂಜಿ ಕ್ಲಾಕ್ ಟವರ್‌ನ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಈ ಕಾಮಗಾರಿ ಪೂರ್ತಿಗೊಳಿಸಿ ಸ್ಮಾರ್ಟ್ ಸಿಟಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಗೊಳಿಸಲಾಗಿತ್ತು. ಆದ್ರೆ ಇದೀಗ ಪಾಲಿಕೆ ಇದರ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರಿದೆ.
ವಿದ್ಯುತ್‌ನಿಂದ ಕಾರ್ಯ ನಿರ್ವಹಿಸುವ ಈ ಬೃಹತ್ ಗಡಿಯಾರದ ವಿದ್ಯುತ್ ಬಿಲ್ ಕಟ್ಟಿಲ್ಲವಾದ್ದರಿಂದ ಕೆಲ ದಿನಗಳ ಹಿಂದೆ ಮೆಸ್ಕಾಂ ಇಲಾಖೆಯು ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಬಿಲ್ ಪಾವತಿಯಾದ ಕಾರಣ ಗಡಿಯಾರದ ಮುಳ್ಳು ಮತ್ತೆ ಸುತ್ತುವುದಕ್ಕೆ ಆರಂಭಿಸಿದೆ. ಒಟ್ಟಿನಲ್ಲಿ ಆದಷ್ಟು ಬೇಗ ಪಾಲಿಕೆ ಅಧಿಕಾರಿಗಳು ಕ್ಲಾಕ್ ಟವರ್ ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಯೋಜನೆ ಹಾಳಾಗದಂತೆ ನೋಡಿಕೊಳ್ಳಬೇಕಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು