ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡ ಬಳಿ ಮೂಳೆಗಳು ಮಾತ್ರವಲ್ಲ ಅಸ್ಥಿಪಂಜರ-ತಲೆ ಬುರುಡೆ ಪತ್ತೆ

ಎಲ್ಲವೂ ಮುಗಿದೋಯ್ತು ಅಂದುಕೊಂಡಾಗ್ಲೇ ಹೊಸ ಅದ್ಯಾಯ ಶುರುವಾಗಿದೆ. ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣ ಹೊಸ ದಿಕ್ಕಿಗೆ ಬಂದು ನಿಂತಿದೆ. ಯಾವ ಸ್ಥಳದಲ್ಲಿ 17 ಗುಂಡಿ ತೋಡಿ ಏನು ಸಿಗದೇ ಇದ್ದಾಗ ವಿಚಾರಣೆ ಆರಂಭಿಸಿತ್ತು. ಇದೀಗ ಅದೇ ಎಸ್​ಐಟಿ ಮತ್ತೆ ಬಂಗ್ಲೆಗುಡ್ಡದ ಕಾಡಿನಲ್ಲೇ ಶೋಧ ನಡೆಸಿದ್ದು, ಸ್ಫೋಟಕ ಸಂಗತಿ ಹೊರ ಬಿದ್ದಿದೆ.

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡ ಬಳಿ ಮೂಳೆಗಳು ಮಾತ್ರವಲ್ಲ ಅಸ್ಥಿಪಂಜರ-ತಲೆ ಬುರುಡೆ ಪತ್ತೆ
Banglegudde Forest
Edited By:

Updated on: Sep 17, 2025 | 8:24 PM

ಮಂಗಳೂರು, (ಸೆಪ್ಟೆಂಬರ್ 17): ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ (Dharmasthala Case) ಇದೀಗ ಮತ್ತೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ಎಸ್​ಐಟಿ (SIT) ಶೋಧದ ವೇಳೆ ಇಂಥದ್ದೊಂದು ಯಾರೂ ನಿರೀಕ್ಷೆಯೂ ಮಾಡಿರಲಿಲ್ಲ. ಅಂಥದ್ದೊಂದು ಬೆಳವಣಿಗೆ ಆಗಿದೆ. ಅದುವೇ  ಬಂಗ್ಲೆಗುಡ್ಡದಲ್ಲಿ ಎಸ್​ಐಟಿ ಶೋಧಕ್ಕಿಳಿದಾಗ ಒಂದು ಅಸ್ಥಿಪಂಜರ, ತಲೆ ಬುರುಡೆ ಹಾಗೂ ಹಲವು ಮೂಳೆಗಳು ಸಿಕ್ಕಿರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ ಎಂದು ಹೇಳಿರುವ ಬೆನ್ನಲ್ಲೇ ಎಸ್​​ಐಟಿ ಅಧಿಕಾರಿಗಳು ಇಂದು (ಸೆಪ್ಟೆಂಬರ್ 17)  ಶೋಧಕಾರ್ಯ ನಡೆಸಿದ್ದು, ಮೊದಲಿಗೆ ಮೂಳೆಗಳು ಪತ್ತೆಯಾಗಿವೆ. ಬಳಿಕ ಮಾನವನ ಅಸ್ಥಿಪಂಜರ ಹಾಗೂ ತಲೆ ಬುರುಡೆ ಪತ್ತೆಯಾಗಿದ್ದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅದ್ಯಾಯ ಶುರುವಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಹೇಳಿದ್ದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಸದ್ಯ ಜೈಲು ಸೇರಿದ್ದಾನೆ. ಇದರ ನಡುವೆ ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ ಎಂದು ಆರೋಪಿಸಿದ್ದಾರೆ. ಇದೇ ಹೇಳಿಕೆ ಸಂಚಲನ ಸೃಷ್ಟಿ ಮಾಡಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿತ್ತು. ಇದರ ಬೆನ್ನಲ್ಲೇ ಎಸ್​ಐಟಿ ಅಧಿಕಾರಿಗಳು ಬಂಗ್ಲೆಗುಡ್ಡಕ್ಕೆ ಪ್ರವೇಶ ಮಾಡಿದ್ದು ಶೋಧ ನಡೆಸಿದ್ದಾರೆ. ಹೌದು.. ಅರಣ್ಯ ಇಲಾಖೆ ಅನುಮತಿ ನೀಡ್ತಿದ್ದಂತೆ 3 ತಂಡ ಮಾಡಿಕೊಂಡ ಎಸ್‌ಐಟಿ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಬಳಿ ಕಾಡಿನೊಳಗೆ ಮತ್ತೆ ಮೂಳೆ, ಕಳೇಬರಗಳ ಶೋಧಕ್ಕೆ ಇಳಿದಿದೆ. ಎಸ್‌ಐಟಿ ಜತೆ 15 ಅರಣ್ಯ ಸಿಬ್ಬಂದಿ, ಗ್ರಾಮ ಪಂಚಾಯತ್‌ನ 8 ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಶೋಧಕ್ಕೆ ಇಳಿದಿದ್ರು. ಹೀಗೆ ಐದು ಕಡೆ ಮೇಲ್ಮೈನಲ್ಲೇ ಶೋಧ ನಡೆಸಿದಾಗ ತಲೆಬುರುಡೆ ಹಾಗೂ ಮೂಳೆಗಳು ಸಿಕ್ಕಿವೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು: ಬಂಗ್ಲೆಗುಡ್ಡ ಬಳಿ ಮೂಳೆಗಳು ಪತ್ತೆ‌

ಇನ್ನು ಭೂಮಿಯ ಮೇಲ್ಭಾಗದಲ್ಲೇ ಅಸ್ಥಿಪಂಜರ, ಅವಶೇಷಗಳು ಪತ್ತೆ ಆಗಿದ್ದು, ಬಕೆಟ್ ನಲ್ಲಿ ಮೂಳೆ, ತಲೆಬುರುಡೆ ತುಂಬಿಕೊಂಡ ಎಸ್‌ಐಟಿ, ಪಿವಿಸಿ ಪೈಪ್‌ನ್ನ ಸೀಲ್‌ ಮಾಡಿ ಕಾಡಿನಿಂದ ಹೊರಗೆ ತಂದಿದ್ದಾರೆ. ಅಷ್ಟಕ್ಕೂ ಮೂಳೆ ಹಾಗೂ ತಲೆಬುರುಡೆ ಶೋಧನೆ ವೇಳೆ ಎಸಿ ಹಾಗೂ ತಹಶೀಲ್ದಾರ್ ಇರಬೇಕಿತ್ತು. ಆದ್ರೆ ಇಂದು ಭೂಮಿಯ ಮೇಲ್ಭಾಗದಲ್ಲೇ ಅಸ್ಥಿಪಂಜರ ಸಂಗ್ರಹ ಮಾಡಿದ್ರಿಂದ ಕೇವಲ ತನಿಖಾಧಿಕಾರಿಗಳು ಮಾತ್ರ ಇದ್ದರು.

ಒಟ್ಟಿನಲ್ಲಿ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ, ಮೂಳೆಗಳು ತನಿಖೆಯನ್ನ ಹೊಸ ದಿಕ್ಕಿಗೆ ಹೊರಳಿಸಿದ್ದು, ಇದರಿಂದ ಹೊಸ ಕಥೆ ಹೊರಗೆ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Published On - 8:20 pm, Wed, 17 September 25