ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಆರಂಭ: ಭಕ್ತರ ಕಣ್ಮನ ಸೆಳೆಯಲು ವಿದ್ಯುತ್‌ ದೀಪಗಳಿಂದ ಸಜ್ಜಾದ ಶ್ರೀ ಕ್ಷೇತ್ರ

| Updated By: ಆಯೇಷಾ ಬಾನು

Updated on: Nov 19, 2022 | 3:20 PM

Dharmasthala Lakshadeepotsava 2022: ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧರ್ಮಾಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಹೊಸ ಕಟ್ಟೆ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ.

ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಆರಂಭ: ಭಕ್ತರ ಕಣ್ಮನ ಸೆಳೆಯಲು ವಿದ್ಯುತ್‌ ದೀಪಗಳಿಂದ ಸಜ್ಜಾದ ಶ್ರೀ ಕ್ಷೇತ್ರ
ಹಳೆ ಚಿತ್ರ
Follow us on

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀ ವರ್ಷ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ(Dharmasthala Lakshadeepotsava) ಇಂದಿನಿಂದ ಆರಂಭವಾಗಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ(Veerendra Heggade)  ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನೆರವೇರಲಿದೆ. ಇದಕ್ಕಾಗಿ ಶ್ರೀ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೇವಸ್ಥಾನ, ಮುಖ್ಯದ್ವಾರ ಸಹಿತ ದೇವಳದ ನಾಲ್ಕು ಸುತ್ತಿನಲ್ಲಿ ವಿದ್ಯುತ್‌ ದೀಪಗಳಿಂದ ಶ್ರೀ ಕ್ಷೇತ್ರ ಕಂಗೊಳಿಸುತ್ತಿದೆ.

ಮಂಜುನಾಥ ಸ್ವಾಮಿಯಿಂದು ಪಂಚ ಉತ್ಸವ

ಐದು ದಿನಗಳ ಕಾಲ (ನ.19ರಿಂದ ನ.23) ಅದ್ಧೂರಿಯಾಗಿ ನಡೆಯುವ ಧರ್ಮಸ್ಥಳದ ಲಕ್ಷದೀಪೋತ್ಸವದ ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಧರ್ಮಸ್ಥಳ ಶ್ರೀ.ಧ.ಮಂ. ಶಾಲಾ ಮೈದಾನದಲ್ಲಿ ವಸ್ತುಪ್ರದರ್ಶನ ಮಳಿಗೆಗಳು ಸಿದ್ಧವಾಗಿವೆ. ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧರ್ಮಾಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಹೊಸ ಕಟ್ಟೆ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ನಾಳೆ ಕೆರೆ ಕಟ್ಟೆ ಉತ್ಸವ, ನ.21ರಂದು ಲಲಿತೋದ್ಯಾನ ಉತ್ಸವ ಹಾಗೂ ಲಲಿತಕಲಾ ಗೋಷ್ಠಿ, ನ.22ರಂದು ಕಂಚಿಮಾರು ಕಟ್ಟೆ ಉತ್ಸವ ಹಾಗೂ ಸರ್ವಧರ್ಮ ಸಮ್ಮೇಳನ, ನ.23ರಂದು ಗೌರಿಮಾರುಕಟ್ಟೆ ಉತ್ಸವ ಹಾಗೂ ಸಾಹಿತ್ಯ ಸಮ್ಮೇಳನ ಮತ್ತು ನ.24ರಂದು ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ವೈಭವದಿಂದ ನೆರವೇರಲಿದೆ.

ಇದನ್ನೂ ಓದಿ: Dharmasthala Lakshadeepotsava: ಐದು ದಿನಗಳು ನಡೆಯುವ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ದಿನಾಂಕ ನಿಗದಿ, ಕಾರ್ಯಕ್ರಮ ವಿವರ ಇಲ್ಲಿದೆ

ಇಂದು ಧರ್ಮಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್‌ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ. ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ಸರ್ಕಾರಿ ವಿವಿಧ ಇಲಾಖೆಗಳಾದ ಆರೋಗ್ಯ, ಅರಣ್ಯ, ಕೃಷಿ, ರೇಷ್ಮೆ, ಹೈನುಗಾರಿಕೆ ಮಳಿಗೆಗಳು, ಬ್ಯಾಂಕ್‌ಗಳು, ವಾಣಿಜ್ಯ, ಕೈಗಾರಿಕೆಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಮಳಿಗೆಗಳಿರಲಿವೆ. ಈ ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನ.22ಕ್ಕೆ ಸರ್ವಧರ್ಮ ಸಮ್ಮೇಳನ; ಕೇಂದ್ರ ಸಚಿವೆ ಸ್ಮೃತಿ ಇರಾನಿ ಚಾಲನೆ

ನ.22ರ ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗದ ನ್ಯಾಯವಾದಿ ಎಂ.ಆರ್‌. ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಸ್ರಿಕಟ್ಟೆ ಧರ್ಮಗುರು ಫಾದರ್‌ ಮಾರ್ಸೆಲ್‌ ಪಿಂಟೊ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕಷ ಹಾಸಿಂಪೀರ ಇ.ವಾಲೀಕಾರ, ವಿಶ್ರಾಂತ ಮುಖ್ಯೋಪಾಧ್ಯಾಯ, ವಾಗ್ಮಿ ಮೂಡಬಿದರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿದ್ದಾರೆ.