
ಮಂಗಳೂರು, ಡಿಸೆಂಬರ್ 10: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರೋದಾಗಿ ಮಾಸ್ಕ್ಮ್ಯಾನ್ ಚಿನ್ನಯ್ಯ ಆರೋಪಿಸಿದ್ದ ಹಿನ್ನಲೆ ಎಸ್ಐಟಿ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರೂ ಆರೋಪಿಗಳು ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಸ್ಐಟಿ ದೃಢಪಡಿಸಿದೆ.
ಹಣದ ಆಮಿಷಕ್ಕೆ ಒಳಗಾಗಿ ಎ೧ ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ಕೊಟ್ಟು ಪುಸಲಾಯಿಸಿತ್ತು. ಅಪರಿಚಿತ ಶವಗಳನ್ನು ಹೂತಿದ್ದೇನೆಂದು ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಚಿನ್ನಯ್ಯನಿಗೆ ಮೊದಲಿಂದ ಪರಿಚಿತನಾಗಿದ್ದ ವಿಠ್ಠಲಗೌಡ ಮಹೇಶ್ ತಿಮರೋಡಿ ಮನೆಗೆ ಆತನನ್ನು ಕರೆದೊಯ್ದಿದ್ದ. ತಿಮರೋಡಿ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡ ಭಾಗಿಯಾಗಿದ್ದು, ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ನಡೆದಿತ್ತು. ಅದರಂತೆ ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು.
ಇದನ್ನೂ ಓದಿ: ಮಾಸ್ಕ್ಮ್ಯಾನ್ ಚಿನ್ನಯ್ಯ, ಪ್ರಭಾವಿ ಸ್ವಾಮೀಜಿ ನಡುವಣ ಮೀಟಿಂಗ್ ರಹಸ್ಯ ಬಿಚ್ಚಿಟ್ಟ ಮಹೇಶ್ ಶೆಟ್ಟಿ ತಿಮರೋಡಿ
ಧರ್ಮಸ್ಥಳ ಪ್ರಕರಣ ಸಂಬಂಧ ಇತ್ತೀಚೆಗೆ ಸ್ವಾಮೀಜಿ ಒಬ್ಬರ ಹೆಸರನ್ನು ಮಹೇಶ್ ಶೆಟ್ಟಿ ತಿಮರೋಡಿ ಉಲ್ಲೇಖಿಸಿದ್ದರು. ನಾನು ಮತ್ತು ಚಿನ್ನಯ್ಯ ಆ ಮಠಕ್ಕೆ ಹೋಗಿರುವುದು ಸತ್ಯ. ನಮ್ಮ ಜೊತೆಗೆ ಸೌಜನ್ಯ ಮನೆಯವರೂ ಬಂದಿದ್ದರು. ಆ ವೇಳೆ ಸ್ವಾಮೀಜಿ ಮುಂದೆ ಒಂದೂವರೆ ಗಂಟೆಗಳ ಕಾಲ ಚಿನ್ನಯ್ಯ ಎಲ್ಲವನ್ನೂ ಹೇಳಿದ್ದಾನೆ. ಯಾರೆಲ್ಲ ಅತ್ಯಾಚಾರ ಎಸಗಿದ್ದಾರೆ, ಮಾಡಿಸಿದ್ದಾರೆ ಎಂಬುದನ್ನು ಆತ ಬಹಿರಂಗಪಡಿಸಿದ್ದ ಎಂದು ತಿಳಿಸಿದ್ದರು. ಮತ್ತೊಂದೆಡೆ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೋರ್ಟ್ ಜಾಮೀನು ನೀಡಿದರೂ ಬಿಡುಗಡೆ ಭಾಗ್ಯಮಾತ್ರ ಸಿಕ್ಕಿಲ್ಲ. ನವೆಂಬರ್ 26ರಂದು ಚಿನ್ನಯ್ಯಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆಗಿತ್ತು. ಇಬ್ಬರು ಜಾಮೀನುದಾರರು, 1 ಲಕ್ಷ ಭದ್ರತೆ ಬಾಂಡ್ ನೀಡಲು ಕೋರ್ಟ್ ಆದೇಶಿಸಿತ್ತು. ಆದರೆ, ಯಾರೂ ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆ ಇನ್ನೂ ಶಿವಮೊಗ್ಗದ ಜೈಲಿನಲ್ಲಿಯೇ ಚಿನ್ನಯ್ಯ ಇರುವಂತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Wed, 10 December 25