ಮಂಗಳೂರು: ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳು ಆಟೊ ಚಾಲಕ ಪುರುಷೋತ್ತಮ್ ಅವರಿಗೆ ಗೃಹ ಸಚಿವರು ₹ 50,000 ಮೊತ್ತದ ಚೆಕ್ ನೀಡಿದರು. ‘ವೈಯಕ್ತಿಕವಾಗಿ ನಾನು ಹಣ ಸಹಾಯ ಮಾಡುತ್ತಿದ್ದೇನೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಪುರುಷೋತ್ತಮ್ ಅವರ ಮನೆಯವರಿಗೆ ಆರ್ಥಿಕ ಸಹಾಯ ಮಾಡುವ ಬಗ್ಗೆಯೂ ಮುಖ್ಯಮಂತ್ರಿ ಜೊತೆಗೆ ಚರ್ಚಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.
ಕುಕ್ಕರ್ನಲ್ಲಿದ್ದ ಬಾಂಬ್ ಕೇವಲ ಹೊಗೆಯನ್ನಷ್ಟೇ ಉಗುಳಿದೆ. ಒಂದು ವೇಳೆ ಬಾಂಬ್ ಸ್ಫೋಟಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇನ್ನೆರಡು ದಿನಗಳಲ್ಲಿ ಕೇಂದ್ರ ತಂಡವು ಈ ಪ್ರಕರಣದ ತನಿಖೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ತೀರ್ಥಹಳ್ಳಿ ಒಂದು ಸುಸಂಸ್ಕೃತ ಊರು. ಅಲ್ಲಿಯವರಿಗೆ ಕರಾವಳಿ, ಕೇರಳದವರೊಂದಿಗೆ ಸಂಪರ್ಕ ದೊರೆತು ಭಯೋತ್ಪಾದಕರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸ್ಥಳೀಯವಾಗಿ ಸಿಗುವ ಸ್ಫೋಟಕ ವಸ್ತುಗಳನ್ನೇ ಬಳಸಿಕೊಂಡು ಬಾಂಬ್ ತಯಾರಿಸಲಾಗಿದೆ. ಈ ಬಗ್ಗೆ ರಾಜ್ಯದ ಪೊಲೀಸರು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಜ್ಯ ಪೊಲೀಸರ ಜೊತೆಗೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳೂ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಹಿಂದಿರುವ ಶಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಅವರು ತಿಳಿಸಿದರು.
ಗಾಯಾಳು ಶಾರೀಖ್ ಗುಣಮುಖನಾದರೆ ಅವನ ವಿಚಾರಣೆ ಮಾಡಬಹುದು. ಆಗ ಎಲ್ಲ ಮಾಹಿತಿ ಹೊರಬರಲಿದೆ. ಈಗಾಗಲೇ ವೈದ್ಯರ ತಂಡವು ಶಂಕಿತ ಉಗ್ರನಿಗೆ ಚಿಕಿತ್ಸೆ ನೀಡುತ್ತಿದೆ ಎಂದರು.
ಶಾರಿಖ್ ಕುತ್ತಿಗೆಗೆ ಗಾಯ
ಶ್ವಾಸಕೋಶದಲ್ಲಿ ಹೊಗೆ ತುಂಬಿಕೊಂಡಿರುವುದರಿಂದ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಶಾರೀಖ್ನನ್ನು ದಾಖಲಿಸಲಾಗಿದೆ. ಸ್ಫೋಟದ ಹೊಗೆ ಶ್ವಾಸಕೋಶ ಪ್ರವೇಶಿಸಿರುವುದರಿಂದ ವಿಶೇಷ ನಿಗಾ ವಹಿಸಲಾಗಿದೆ. ಶಂಕಿತ ಉಗ್ರ ಶಾರಿಖ್ನ ಕುತ್ತಿಗೆ ಭಾಗದಲ್ಲಿ ಸ್ಫೋಟದ ವೇಳೆ ಕುಕ್ಕರ್ನ ಮುಚ್ಚಳ ಬಡಿದು ಗಾಯವಾಗಿದೆ. ಇನ್ನೂ 3 ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆಯಿದೆ ಎಂದರು. ಶಾರಿಖ್ ವಯಸ್ಸು ಇನ್ನೂ ಚಿಕ್ಕದಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Mangalore Blast: ದೊಡ್ಡ ಆನಾಹುತ ಸ್ವಲ್ಪದರಲ್ಲಿ ತಪ್ಪಿದೆ, ದೇವರಿಗೊಂದು ಥ್ಯಾಂಕ್ಸ್; ಅಲೋಕ್ ಕುಮಾರ್