ಬಾಲ್ಯ ಸ್ನೇಹಿತರು 15 ವರ್ಷದಿಂದ ಪ್ರೀತಿಸ್ತಿದ್ದರು, ಮದುವೆಯಾದ ಮೇಲೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು, ಹುಟ್ಟು ಶ್ರೀಮಂತ ಪ್ರಿಯಕರನಿಗೆ ಅತ್ತಿಗೆ ಜೊತೆ ಸಂಬಂಧವಿತ್ತು!

|

Updated on: Apr 25, 2023 | 9:57 AM

illicit relation: ಗಂಡನ ಮೇಲೆ ಅನುಮಾನ ಬಂದು ಅವನ ಮೊಬೈಲ್ ವಾಟ್ಸಾಪ್ ಬ್ಯಾಕ್ ಅಪ್ ನ್ನು ಕೌಶಲ್ಯ ತನ್ನ ಮೊಬೈಲ್ ಗೆ ಬರುವಂತೆ ಮಾಡಿಕೊಂಡಿದ್ದಳು. ಆಗ ಅವನ ಮೋಸದಾಟ ಬಯಲಾಗಿ ಬ್ಯಾಕಪ್ ನಲ್ಲಿ ಬಂದು ಬಿದ್ದಿತ್ತು. ಜೊತೆಗೆ ಅರಗಿಸಿಕೊಳ್ಳಲಾರದ ವಿಷಯ ಅತ್ತಿಗೆ-ಮೈದುನನ ಮಧ್ಯೆ ಅದೂ ಆಗಿ ಹೋಗಿದೆ ಎಂಬುದೂ ಗೊತ್ತಾಯ್ತು. ಅಷ್ಟೇ!

ಬಾಲ್ಯ ಸ್ನೇಹಿತರು 15 ವರ್ಷದಿಂದ ಪ್ರೀತಿಸ್ತಿದ್ದರು, ಮದುವೆಯಾದ ಮೇಲೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು, ಹುಟ್ಟು ಶ್ರೀಮಂತ ಪ್ರಿಯಕರನಿಗೆ ಅತ್ತಿಗೆ ಜೊತೆ ಸಂಬಂಧವಿತ್ತು!
ಮದುವೆಯಾದ ಆರೇ ತಿಂಗಳಿಗೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು,
Follow us on

ಬೆಳ್ತಂಗಡಿ: ಅದೊಂದು ಸುದೀರ್ಘ ಲವ್ ಸ್ಟೋರಿ. ಆ ಚೆಲುವಿನ ಚಿತ್ತಾರದ ಸ್ಟೋರಿ ಆರಂಭವಾಗಿದ್ದೇ ಶಾಲಾ ಕಾಲದಲ್ಲಿ. ಅವರಿಬ್ಬರ ಸ್ನೇಹ-ಪ್ರೀತಿ ನೋಡಿ ಇಡೀ ಊರಿಗೆ ಊರೇ ವಾಹ್ ಎನ್ನುತ್ತಿದ್ದರು. ಆಕೆ ಬಡ ಕುಟುಂಬದ ಹೆಣ್ಣು ಮಗಳು. ಆದ್ರೆ ಆಕೆ ಪ್ರೀತಿ ಅದೆಷ್ಟೊ ಐಶ್ವರ್ಯಕ್ಕೆ ಸಮಾನವಾಗಿತ್ತು. ತನ್ನ ಬಾಲ್ಯದ ಸ್ನೇಹಿತನ ಪ್ರೀತಿ, ಪ್ರೇಮ ಅಂತಾ ಓಡಾಡಿದ್ರು ಕೂಡ, ಚನ್ನಾಗಿ ಓದಿ ಕೋಆಪರೇಟಿವ್ ಬ್ಯಾಂಕ್ ನಲ್ಲಿ ಒಳ್ಳೆಯ ಉದ್ಯೋಗ ಪಡೆದಿದ್ದಳು. 22 ವರ್ಷಗಳಿಂದ ಅಕ್ಕದ ಪಕ್ಕದ ಮನೆಯ ಬಾಲ್ಯ ಸ್ನೇಹಿತರು, ಕಳೆದ 15 ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ರು. ಅವರಿಬ್ಬರ ಮದುವೆ ಧಾಮ್ ಧೂಮ್ ಅಂತಾ ನಡೆದಿತ್ತು. ಇದ್ರೆ ಇಂತಹ ಜೋಡಿ ಇರಬೇಕಪ್ಪ ಅಂತಾ ಜನರೇ ಮಾತನಾಡಿಕೊಳ್ಳುತ್ತಿದ್ದರು. ಜಸ್ಟ್​​ 5 ತಿಂಗಳ ಹಿಂದೆ ವಿವಾಹವೂ ಆಗಿತ್ತು. ಜೀವನದಲ್ಲಿ ಬೆಟ್ಟದಂತ ಕನಸು, ಆಸೆಯನ್ನು ಹೊತ್ತು ಹೋದ ಆಕೆಗೆ ಅಲ್ಲಿ ಪ್ರೀತಿಯ ಅಸಲಿಯತ್ತು ಸಾಕ್ಷಾತ್​​ ದರ್ಶನವಾಗಿತ್ತು. ಅಷ್ಟೇ, ಅದ ನೋಡಿ ಆ ಯುವತಿ (wife) ವಿಷ ಕುಡಿದು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಹಿಂದೆ ತನ್ನ ಗಂಡನ (husband) ಭಂಡಾಟದ ವಾಸನೆ ಬರುತ್ತಿದೆ (illicit relation).

ಜೋಡಿ ಹಕ್ಕಿಗಳು..!

ಮೇಲಿನ ಚಿತ್ರಗಳಲ್ಲಿರುವ ಮುದ್ದಾದ ಜೋಡಿಯನ್ನೊಮ್ಮೆ ನೋಡಿ. 22 ವರ್ಷದ ಸ್ನೇಹಕ್ಕೆ, 15 ವರ್ಷದ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿ ಇನ್ನೂ ಐದೇ ತಿಂಗಳು ಆಗಿದೆ ಅಷ್ಟೆ. ಅಷ್ಟರಲ್ಲಿ ಎಲ್ಲಾ ನುಚ್ಚು ನೂರಾಗಿ ಹೋಗಿದೆ. ಈಕೆಯ ಹೆಸರು ಕೌಶಲ್ಯ. ಅವನ ಹೆಸರೋ ಸುಖೇಶ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಈಕೆ ಹೆಸರಿಗೆ ತಕ್ಕಂತೆ ಕೌಶಲ್ಯವತಿ. ತನ್ನ ಸ್ನೇಹಿತನೊಂದಿಗೆ ಬಿಕಾಂ ವೆರೆಗೂ ಓದಿದ ಈಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಒಳ್ಳೆ ಉದ್ಯೋಗ ಪಡೆದಿದ್ದಳು. ಕೆಲಸದಲ್ಲಿ ಅದೆಷ್ಟು ಅಚ್ಚುಕಟ್ಟುತನವಿತ್ತು ಅಂದ್ರೆ ಕಚೇರಿಯಲ್ಲಿ ಈಕೆ ಹಾಗೂ ಈಕೆಯ ಕೆಲಸ ಎಲ್ಲರಿಗೂ ಇಷ್ಟವಾಗಿತ್ತು.

ಗಂಡನಿಗಾಗಿ ಟ್ರಾನ್ಸ್ ಫರ್..!

ಮದುವೆಯಾದ ಬಳಿಕ ಗಂಡನ ಜೊತೆ ಜೊತೆಯಲ್ಲೇ ಇರಬೇಕು ಅಂತಾ ಇತ್ತೀಚೆಗೆ ಮೂಡಬಿದ್ರೆಯಿಂದ ಉಜಿರೆಗೆ ವರ್ಗಾವಣೆ ಪಡೆದುಕೊಂಡಿದ್ದಳು. ಈ ವೇಳೆ ಸಹೋದ್ಯೋಗಿಗಳು ಈಕೆಗೆ ಅಕ್ಕರೆಯ ಬೀಳ್ಕೊಡುಗೆ ಕೊಟ್ಟಿದ್ದರು. ಈಕೆಗೆ ಅರಿಶಿಣ ಕುಂಕುಮ ಕೊಟ್ಟು ಮಡಿಲು ತುಂಬಿ ಕಳುಹಿಸಿದ್ದರು. ಇವರೆಲ್ಲರ ಪ್ರೀತಿಗೆ ಈಕೆ ಕಣ್ಣೀರಾಗಿದ್ದಳು. ಅಷ್ಟೊಂದು ಪ್ರೀತಿಯಿಂದ ಬಂದ ಕೌಶಲ್ಯಳನ್ನು ಪ್ರತಿನಿತ್ಯ ತನ್ನ ಗಂಡ ಸುಕೇಶನೇ ಕೆಲಸಕ್ಕೆ ಬಿಟ್ಟುಬರುತ್ತಿದ್ದ.

ಕಚೇರಿಗೆ ಹೋಗುವುದಾಗಿ ವಿಷ ಖರೀಧಿಸಿದ್ದಳು..!

ಮೊನ್ನೆ 20 ನೇ ತಾರೀಕು. ಉಜಿರೆಯ ಎಸ್.ಕೆ.ಡಿ.ಆರ್.ಡಿ.ಪಿ ಕಚೇರಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಸೀದಾ ಫರ್ಟಿಲೈಜರ್ ಶಾಪ್ ಗೆ ಹೋಗಿದ್ದಳು. ಅಲ್ಲಿ ಕಳೆನಾಶಕವನ್ನು ಖರೀದಿ ಮಾಡಿದ್ದಳು. ದಾರಿಯಲ್ಲಿ ಬರುತ್ತಾ ಅದನ್ನು ಕುಡಿದಿದ್ದಳು. ಕುಡಿದವಳೇ ಸೀದಾ ತನ್ನ ಅಮ್ಮನ ಮನೆಗೆ ಬಂದು ತಾನು ವಿಷ ಕುಡಿದಿರೋದಾಗಿ ಹೇಳಿದಳು. ತಂದೆ ಇಲ್ಲದ ಮಗಳು ಅಂತಾ ಕೌಶಲ್ಯಳನ್ನು ತನ್ನ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ಅಮ್ಮ ಸಾಕಿದ್ದಳು. ಇಂತಹ ಮಗಳು ವಿಷ ಕುಡಿದಿರೋದಾಗಿ ಹೇಳಿದನ್ನು ಕೇಳಿ ತಾಯಿ ಒಮ್ಮೆ ದಿಗ್ಭಾಂತರಾದ್ರು. ತಕ್ಷಣ ಕೌಶಲ್ಯ ಅಮ್ಮ ಹಾಗೂ ಮನೆಯವರು ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು. ಮೂರು ದಿನಗಳ ಕಾಲ ಚಿಕಿತ್ಸೆಯನ್ನು ನೀಡಿದರೂ ಅದು ಫಲಿಸದೇ ನಿನ್ನೆ ಕೊನೆಯುಸಿರೆಳೆದಿದ್ದಾಳೆ.

ಅಕ್ರಮ ಸಂಬಂಧಕ್ಕೆ ಬಲಿ..!

ನಿನ್ನೆ ಮನೆ ಮಗಳು ಕೌಶಲ್ಯ ಸಾವನ್ನಪ್ಪಿದ ತಕ್ಷಣ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋದ ಆಕೆಯ ಸಂಬಂಧಿಕರು ಕೌಶಲ್ಯ ಪತಿ ಸುಕೇಶ್, ಸುಕೇಶ್ ನ ತಂದೆ ಹಾಗೂ ಸುಕೇಶ್ ನ ದೊಡ್ಡಪ್ಪನ ಮಗನ ಹೆಂಡತಿ ಅಂದ್ರೆ ಸುಕೇಶ್ ನ ಅತ್ತಿಗೆ ಆಸ್ತಿಕಾ ಮೇಲೆ ದೂರನ್ನು ನೀಡಿದ್ರು. ಸುಕೇಶನಿಗೂ, ಆತನ ದೊಡ್ಡಪ್ಪನ ಮಗನ ಹೆಂಡತಿ ಆಸ್ತಿಕಾ ಗೂ ಅಕ್ರಮ ಸಂಬಂಧ ಇದೆ ಅಂತಾ ದೂರು ನೀಡಿದ್ರು.

ಸ್ನೇಹ..ಪ್ರೀತಿ..ಮದುವೆ..!

ಎಲ್ಲಾ ಚೆನ್ನಾಗಿಯೇ ಇತ್ತು. 22 ವರ್ಷದ ಸ್ನೇಹ. 15 ವರ್ಷದ ಪ್ರೀತಿ. ಕೌಶಲ್ಯ ಮನೆಯಲ್ಲಿ ಬಡತನವಿತ್ತು. ಆದ್ರೆ ಆಕೆಯ ಶ್ರೀಮಂತ ಪ್ರೀತಿಯನ್ನು ಜೋಪಾನ ಮಾಡಿ ಸುಕೇಶನಿಗಾಗಿ ಮುಡಿಪಾಗಿಟ್ಟದ್ದಳು. ಇವರ ಪ್ರೀತಿಗೆ ಯಾವುದೇ ಅಡೆತಡೆಗಳಿರಲಿಲ್ಲ. ಒಂದೇ ಜಾತಿ. ಒಂದೇ ಊರು. ಪರಸ್ಪರ ಪರಿಚಯಸ್ಥ ಕುಟುಂಬ. ಇಬ್ಬರ ಪ್ರೀತಿ ಲೋಕಕ್ಕೆ ಗೊತ್ತಿತ್ತು. ಇವರಿಬ್ಬರನ್ನು ಮದುವೆ ಮಾಡಬೇಕು ಅಂತಾ ದೊಡ್ಡವರು ಕೂಡ ನಿರ್ಧರಿಸಿದ್ದರು. ಅದ್ರಂತೆ ಇವರು ಕೂಡ ಮನೆಯವನ್ನು ಕೇಳಿದ ತಕ್ಷಣ ಮದುವೆ ಸಂಭ್ರಮ ಮನೆ ಮಾಡಿತ್ತು. ಕಳೆದ 5 ತಿಂಗಳ ಹಿಂದೆ ತನ್ನ ಜೀನವನದ ಹೊಸ ಅಧ್ಯಾಯವನ್ನು ಅದೇ ಗೆಳೆಯ, ಪ್ರಿಯಕರನೊಂದಿಗೆ ಹೊಸದಾಗಿ ಆರಂಭಿಸಿದ್ದಳು. ಮದುವೆಯಂತೂ ಧಾಮ್ ಧೂಮ್ ಅಂತಾ ಆಯ್ತು.

ಹನಿಮೂನ್ ಮೆಸೇಜ್ ನಿಂದ ಅಸಲಿಯತ್ತು ಬಯಲು..!

ಮದುವೆಯಾಗಿ ಸ್ವಲ್ಪ ದಿನ ಮನೆಯಲ್ಲಿದ್ರು. ಬಳಿಕ ಹನಿಮೂನ್ ಗಾಗಿ ದೂರದೂರಿಗೆ ಪ್ರಯಾಣ ಬೆಳೆಸಿದ್ರು. ಹನಿಮೂನ್ ನಲ್ಲಿ ತಮ್ಮ 22 ವರ್ಷದ ಸ್ನೇಹ ಮತ್ತು 15 ವರ್ಷದ ಪ್ರೀತಿಯನ್ನು ಯಶಸ್ವಿಯಾಗಿ ಗೆದ್ದ ಖುಷಿಯಲ್ಲಿದ್ರು. ಇನ್ನೇನು ಸ್ವರ್ಗಕ್ಕೆ ಮೂರು ಗೇಣು ಇತ್ತು ಇಬ್ಬರ ಜೀವನ. ಹನಿಮೂನ್ ನ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದಾಗ ಬಂದ ಅದೊಂದು ಮೆಸೇಜ್ ಗೆ ಇಡೀ ಪ್ರೀತಿಯನ್ನೇ ಬುಡಮೇಲು ಮಾಡುವ ಶಕ್ತಿ ಇತ್ತು. ಆ ಮೆಸೇಜ್ ಬಂದಿದ್ದು ಸುಕೇಶ್ ನ ಮೊಬೈಲ್ ಗೆ. ಹೌದು ಆಸ್ತಿ ಅತ್ತಿಗೆ ಅನ್ನೊ ನಂಬರ್ ನಿಂದ ಬಂದ ಮೆಸೇಜ್ ಅದಾಗಿತ್ತು.

ಅತ್ತಿಗೆ ಜೊತೆ ಅಕ್ರಮ ಸಂಬಂಧ..!

ಸುಕೇಶಾ ಹುಟ್ಟು ಶ್ರೀಮಂತ. ಕೋಟಿಗೆ ಬಾಳುವ ಕುಟುಂಬ. ಆತನ ಮೈಯೆಲ್ಲಾ ಸುಖವನ್ನು ಬಯಸುತ್ತಿತ್ತು. ಆತ ಶ್ರೀಮಂತನಾಗಿದ್ರು ಆತನ ಪ್ರೀತಿ ಕಿತ್ತು ಕೆರಹಿಡಿಯುವಷ್ಟು ಬಡವಾಗಿತ್ತು! ತಾಯಿ ಸಮಾನಳಾದ ಅತ್ತಿಗೆಯೊಂದಿಗೆ ಆತ ಅಕ್ರಮ ಸಂಬಂಧವನ್ನು ಹೊಂದಿದ್ದು, ಬಹಳ ವರ್ಷಗಳಿಂದ ಅತ್ತಿಗೆ ಆಸ್ತಿಕಾಳ ಜೊತೆ ಕುಚು ಕುಚು ನಡೆಸಿದ್ದ. ಈ ಕುಚು ಕುಚುಗೆ ಕೌಶಲ್ಯಳ ಜೊತೆ ನಡೆದ ಮದುವೆ ಅಡ್ಡವಾಗಿತ್ತು. ಹನಿಮೂನ್ ನಲ್ಲಿ ಬಂದ ಮೆಸೇಜ್ ಕೂಡ ಅದೇ ಆಗಿತ್ತು. ಈಗ ನಿಂಗೆ ನನ್ನ ಅವಶ್ಯಕತೆ ಇಲ್ಲ ಅಲ್ವಾ. ನಂಗೆ ಪ್ರೀತಿ ಕೊಡಲು ಆಗಲ್ಲ ಅಲ್ವಾ. ಬಿಟ್ಟು ಬಿಡು ನನ್ನನ್ನು ಅಂತಾ ಮೆಸೇಜ್ ಕಳಿಸಿದ್ದಳು ಪುಣ್ಯಾತ್ತಗಿತ್ತಿ ಅತ್ತಿಗೆ! ಇದನ್ನ ನೋಡಿ ಕೌಶಲ್ಯಳಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅಲ್ಲಿಂದ ಊರಿಗೆ ವಾಪಸಾಗಿದ್ದರು. ಅಲ್ಲಿಂದ ಕೌಶಲ್ಯಳು ತನ್ನ ಪತ್ತೆದಾರಿ ಕೆಲಸ ಆರಂಭಿಸಿದ್ದಳು.

ಆಸ್ತಿಕಾಳ ಜೊತೆ ಮಸ್ತಿ..!

ಒಂದು ಕಡೆ 15 ವರ್ಷದಿಂದ ಕೌಶಲ್ಯಳ ಜೊತೆ ಪ್ರೀತಿ. ಇನ್ನೊಂದು ಕಡೆ ತಾಯಿ ಸಮಾನಳಾದ ಅತ್ತಿಗೆ ಜೊತೆ ಪ್ರಣಯ. ಸುಖಪುರುಷನಾಗಿದ್ದ ಸುಕೇಶಾ ಕುಟುಂಬಕ್ಕೆ ಕಳ್ಳಬೆಕ್ಕಾಗಿದ್ದ. ತನ್ನ ಶ್ರೀಮಂತ ಪ್ರೀತಿಗೆ ಮೋಸ ಮಾಡುತ್ತಿದ್ದ. ಆತನೇ ತಾನೊಬ್ಬ ಜೊಲ್ಲು ಪಾರ್ಟಿ ಅಂತಾ ಹೇಳಿಕೊಳ್ಳುತ್ತಿದ್ದ. ಈ ಎಲ್ಲಾ ವಿಚಾರ ಕೌಶಲ್ಯಾಳಿಗೆ ಗೊತ್ತಾಗಿದ್ದು ಅದು ಹೇಗೆ ಗೊತ್ತಾ?

ಸುಕೇಶನ ಬ್ಯಾಕಪ್ ಕೌಶಲ್ಯಳ ಮೊಬೈಲ್ ಗೆ..!

ಗಂಡನ ಮೇಲೆ ಅನುಮಾನ ಬಂದು ಅವನ ಮೊಬೈಲ್ ವಾಟ್ಸಾಪ್ ಬ್ಯಾಕ್ ಅಪ್ ನ್ನು ಕೌಶಲ್ಯ ತನ್ನ ಮೊಬೈಲ್ ಗೆ ಬರುವಂತೆ ಮಾಡಿಕೊಂಡಿದ್ದಳು. ಹೀಗೆ ಮಾಡಿ ಗಂಡನನ್ನು ಫ್ರೀಯಾಗಿ ಬಿಟ್ಟಿದ್ದಳು. ಆಗ ಆತನ ಮೋಸದಾಟ ಬಯಲಾಗಿ ಬ್ಯಾಕಪ್ ನಲ್ಲಿ ಬಂದು ಬಿದ್ದಿತ್ತು. ಹೀಗೆ ಅವರ ಅಸಲಿಯತ್ತು ಬಯಲಾಗಿತ್ತು. ಇನ್ನೊಂದು ಅರಗಿಸಿಕೊಳ್ಳಲಾರದ ವಿಷಯ ಅತ್ತಿಗೆ-ಮೈದುನನ ಮಧ್ಯೆ ಆಗಿ ಹೋಗಿತ್ತು. ಅಕ್ರಮ ಸಂಬಂಧವನ್ನು ಸರಿ ಮಾಡಿದರೂ ಅದನ್ನು ಸರಿ ಮಾಡಲು ಸಾಧ್ಯವಿಲ್ಲ ಅನ್ನೊದು ಕೌಶಲ್ಯಳಿಗೆ ಗೊತ್ತಾಗಿಹೋಗಿತ್ತು.

ಇದೇ ವಿಚಾರವನ್ನು ತನ್ನ ಮಾವನ ಮನೆಯಲ್ಲಿ ಹೇಳಿದ್ದಾಳೆ. ಮಾವ ತನ್ನ ಮಗನದ್ದೇನೂ ತಪ್ಪಿಲ್ಲ. ನೀನು ಬಂದಾಗಿನಿಂದ ಈ ಸಮಸ್ಯೆ ಅಂತಾ ಕೌಶಲ್ಯಳ ಮೇಲೆ ಗೂಬೆ ಕೂರಿಸಿದ್ದಾರೆ. ಇನ್ನು ತವರು ಮನೆಯಲ್ಲಿ ಹೇಳಿದಳು. ಅವರೂ ಸಹ ಹೇಗೊ ಸಂಸಾರ ಸಾಗಿಸು. ಎಲ್ಲವನ್ನೂ ಸರಿ ಮಾಡೊಣ ಅಂತಾ ಹೇಳಿಕಳಿಸಿದ್ದರು. ಆದ್ರೆ ಕೌಶಲ್ಯ ಸಾಯುವ ನಿರ್ಧಾರ ಮಾಡಿದ್ದಳು. ಅದರಂತೆ ತನ್ನದಲ್ಲದ ತಪ್ಪಿಗೆ ತನಗೆ ತಾನೆ ಶಿಕ್ಷೆ ಕೊಟ್ಟಿಕೊಂಡಿದ್ದಾಳೆ.

ಅಲ್ಲಿಗೆ 22 ವರ್ಷದ ಸ್ನೇಹ, 15 ವರ್ಷದ ಪ್ರೀತಿ ಸಮಾಧಿಯಾಗಿದೆ. ಇತ್ತ ಆರೋಪಿ ಗಂಡನೋ, ತನ್ನ ಪತ್ನಿ ಕೌಶಲ್ಯ ಸತ್ತು ಹೋಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಿ ಅನ್ನೊದು ಕೌಶಲ್ಯ ತವರು ಮನೆಯವರ ಅಳಲು. ಕೌಶಲ್ಯಳಿಗೆ ಸಣ್ಣ ವಯಸ್ಸು. ತನ್ನ ಶ್ರೀಮಂತ ಪ್ರೀತಿ ಪಡೆಯಲು ಅರ್ಹತೆ ಇಲ್ಲದವನಿಗೋಸ್ಕರ ಪ್ರಾಣ ಬಿಡುವ ಅವಶ್ಯಕತೆ ಇರಲಿಲ್ಲ. ತನಗೆ ಆದ ಅನ್ಯಾಯ, ಪ್ರೀತಿಗೆ ಆದ ಮೋಸಕ್ಕೆ ಕಾನೂನು ಪ್ರಕಾರವಾಗಿ ಶಿಕ್ಷೆ ಆಗಬಹುದಿತ್ತು. ತನ್ನ ಜೀವನವನ್ನು ಮತ್ತೆ ಸುಂದರವಾಗಿಸು ನೂರಾರು ದಾರಿಗಳಿದ್ದವು. ಆದ್ರೆ ಒಂದು ದುಡುಕಿನ ನಿರ್ಧಾರದಿಂದ ಕೌಶಲ್ಯ ತವರು ಬಡವಾಗಿದೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು