ಮಂಗಳೂರು, ಡಿ.7: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಧರ್ಮ ದಂಗಲ್ ಮುಂದುವರಿದಿದೆ. ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ (Kudupu Sri Ananta Padmanabha Temple) ಷಷ್ಟಿ ಮಹೋತ್ಸವದ ಜಾತ್ರೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಮಾಡಿದ ಆರೋಪ ಕೇಳಿಬಂದಿದ್ದು, ಬೀದಿ ಬದಿ ವ್ಯಾಪಾರಿಗಳ ಸಂಘ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದೆ.
ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 14 ರಿಂದ 19 ರವರೆಗೆ ಷಷ್ಟಿ ಮಹೋತ್ಸವದ ಜಾತ್ರೆ ನಡೆಯಲಿದೆ. ಆದರೆ, ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ಆರೋಪ ಕೇಳಿಬಂದಿದೆ.
ದೇವಸ್ಥಾನದ ಆಡಳಿತ ಮಂಡಳಿ ಇಂದು ದೇವಸ್ಥಾನದ ಸಂತೆ ವ್ಯಾಪಾರದ ಹಂಚಿಕೆ ನಡೆಸಿದೆ. ಈ ವೇಳೆ ಜಾಗ ಕೇಳಲು ಹೋಗಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರಾಕರಣೆ ಮಾಡಲಾಗಿದೆ. ಬೇಕಾದರೆ ಹಿಂದೂಗಳ ಹೆಸರಿನಲ್ಲಿ ಅಂಗಡಿ ಪಡೆಯುವಂತೆ ಆಡಳಿತ ಮಂಡಳಿ ಸೂಚಿಸಿದೆ ಅಂತ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ; ಮಂಗಳೂರು ಮಂಗಳಾದೇವಿ ಉತ್ಸವದಲ್ಲಿ ವ್ಯಾಪಾರ ಧರ್ಮ ದಂಗಲ್ ವಿಚಾರ; ಶರಣ್ ಪಂಪ್ ವೆಲ್ ವಿರುದ್ದ ಎಫ್ಐಆರ್
ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಸಂತೆ ವ್ಯಾಪಾರ ನಡೆಯುತ್ತದೆ. ಕಳೆದ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ಕುಡುಪು ದೇವಸ್ಥಾನದಲ್ಲಿ ವ್ಯಾಪಾರ ನಿರಾಕರಿಸಲಾಗಿತ್ತು. ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ನಿರಾಕರಣೆ ಮಾಡಲಾಗಿತ್ತು.
ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಲಾಗುತ್ತಿದೆ. ಕಾಂಗ್ರೆಸ್ ಸರಕಾರ ಕೋಮುವಾದಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ. ಬಡ ಸಂತೆ ವ್ಯಾಪಾರಿಗಳ ಜೊತೆ ನಿಲ್ಲಲಾಗದ ಸರಕಾರಕ್ಕೆ ಧಿಕ್ಕಾರ ಎಂದು ಮುಸ್ಲಿಂ ವ್ಯಾಪಾರಿಗಳು ಕಿಡಿಕಾರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಗೆ ಆಗ್ರಹಿಸಿದ ಮುಸ್ಲಿಂ ವ್ಯಾಪಾರಿಗಳು, ತಕ್ಷಣ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಕಳೆದ ಬಾರಿ ನವರಾತ್ರಿ ಹೊತ್ತಲ್ಲಿ ಮಂಗಳಾದೇವಿ ದೇವಸ್ಥಾನದಲ್ಲಿ ಧರ್ಮ ದಂಗಲ್ ಭುಗಿಲೆದ್ದಿತ್ತು. ಅದರೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ