ಮಂಗಳೂರಿನ ಎಡಮಂಗಲದಲ್ಲಿ ಮರುಕಳಿಸಿದ ‘ಕಾಂತಾರ’ ಸನ್ನಿವೇಶ; ದೈವ ನುಡಿಗೆ ತಲೆ ಬಾಗಿದ ಜನ

| Updated By: ಆಯೇಷಾ ಬಾನು

Updated on: Jan 27, 2024 | 3:56 PM

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದಲ್ಲಿ ತುಳುನಾಡಿನ ದೈವದ ಕಥಾ ಹಂದರ ಇರುವ ಕಾಂತಾರ ಚಿತ್ರವನ್ನು ನೆನಪಿಸುವಂತಹ ಘಟನೆ ನಡೆದಿದೆ. ಪ್ರಶ್ನಾಚಿಂತನೆಯಲ್ಲಿ ಮೃತ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವನರ್ತಕರಾಗಿಸಿಬೇಕು ಎಂದು ದೈವ ಸೂಚನೆ ನೀಡಿದೆ.

ಮಂಗಳೂರು, ಜ.27: ಕಾಂತಾರ. ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ತುಳುನಾಡಿನ ದೈವಾರಾಧನೆಯ ಕಥಾ ಕಂದರ ಇರುವ ಈ ಸಿನಿಮಾವನ್ನೇ ನೆನಪಿಸುವ ಘಟನೆ ಮತ್ತೆ ಕರಾವಳಿಯ ಮಣ್ಣಿನಲ್ಲಿ ನಡೆದಿದೆ. ದೈವ ನರ್ತಿಸುತ್ತಾ ದೇವರ ಪಾದ ಸೇರಿದ ದೈವ ನರ್ತಕನ ಮಗ ದೈವ ಚಾಕರಿಯ ದೈವ ಬೂಳ್ಯ ಹಿಡಿದು ಜವಾಬ್ದಾರಿ ಹೊತ್ತ ಅಪರೂಪದ ದೃಶ್ಯ ಇದು. ಕಾಂತಾರದ ದೃಶ್ಯವೊಂದನ್ನು ನೆನಪಿಸುವ ಮತ್ತು ತುಳುನಾಡಿನ ದೈವಾರಾಧನೆಗೆ ಸಂಬಂಧಪಟ್ಟಂತೆ ಚಿತ್ರದಲ್ಲಿ ಮೂಡಿಬಂದ ಎಲ್ಲವೂ ವಾಸ್ತವಕ್ಕೆ ಅತ್ಯಂತ ಹತ್ತಿರವಿರುವ ಸಂಗತಿ. ಇದೀಗ ಅಂತಹದ್ದೇ ಒಂದು ಸನ್ನಿವೇಶ ರೂಪಿಸುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ‌.

ಕಳೆದ 2023ರ ಮಾರ್ಚ್ 30 ರಂದು ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿ ಭಾರೀ ಸುದ್ಧಿ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನದ ವಾರ್ಷಿಕ ಜಾತ್ರೆ ನಡೆಯುತ್ತಿದ್ದು ಈ‌ ಸಂದರ್ಭ ಉಳ್ಳಾಕುಲು ದೈವ ಹಾಗೂ ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು. ಈ ವೇಳೆ ಉಳ್ಳಾಕುಲು ದೈವದ ನರ್ತಕರಾಗಿದ್ದ ಎಡಮಂಗಲ ನಿವಾಸಿ 60 ವರ್ಷದ ಕಾಂತು ಅಜಿಲ ದೈವದ ನರ್ತನ‌ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ದೈವ ನರ್ತಕ ಕಾಂತು ಅಜಿಲ ಅಕಾಲಿಕ ಸಾವನ್ನಪ್ಪಿದ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ದೈವಜ್ಞರ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಶ್ನಾ ಚಿಂತನೆಯಲ್ಲಿ ದೈವ ನರ್ತಿಸುತ್ತಾ ಸಾವನ್ನಪ್ಪಿದ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ಅವರೇ ಮುಂದೆ ದೈವ ನರ್ತನದ ಜವಾಬ್ದಾರಿ ಹೊರಬೇಕು ಅಂತ ಕಂಡು ಬಂದಿದೆ. ಬಳಿಕ, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು.ಹೀಗಾಗಿ ಈ ವರ್ಷದ ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ಅನ್ನೋದನ್ನು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಚನಕಾರಿಯಾಗಿದೆ.

ದೈವದ ನರ್ತನ ಜವಾಬ್ದಾರಿ ಪಡೆದ ಯುವಕರ ಕಣ್ಣಲ್ಲಿ ಆನಂದಭಾಷ್ಪ ಕಂಡರೆ, ಕುಟುಂಬದ ಸದಸ್ಯರಲ್ಲಿ ಧನ್ಯತೆಯ ಭಾವ ಕಂಡು ಬಂದಿತ್ತು. ದೈವ ನರ್ತಕನ ದೀಕ್ಷೆ ಬೂಳ್ಯ ಪಡೆಯುವ ಮೊದಲು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ. ದೈವ ತನ್ನ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ ವಿಚಾರವೂ ಆಗಿದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವವಾಗಿದೆ.

ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರ ಹಾಗೂ ಪರವೂರಿನ ದೈವಭಕ್ತರು ಭಾಗವಹಿಸಿದರು. ಒಟ್ಟಿನಲ್ಲಿ ಕಾಂತಾರ ಸಿನಿಮಾದ ಕಥೆಯಂತೆ ತುಳುನಾಡಿನ ದೈವಾರಾಧನೆಯಲ್ಲೂ ದೈವೀ ಘಟನೆ ನಡೆದಿದ್ದು ದೈವಗಳ ನಂಬಿಕೆ ಮತ್ತಷ್ಟು ಇಮ್ಮುಡಿಗೊಂಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:58 pm, Sat, 27 January 24