ದಕ್ಷಿಣ ಕನ್ನಡ, ಡಿ.19: ಚುನಾವಣೆ ಬಂದಾಗ ವಿವಿಧ ಆಶ್ವಾಸನೆಗಳನ್ನು ನೀಡುವ ರಾಜಕೀಯ ಪಕ್ಷಗಳು, ಚುನಾವಣೆ ಮುಗಿದ ಬಳಿಕ ಅದನ್ನು ಮರೆತು ಬಿಡುತ್ತವೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯ ಕರಾವಳಿಯ ಮೀನುಗಾರರ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್(Boat Ambulance) ಒದಗಿಸುವ ಭರವಸೆ ನೀಡಿತ್ತು. ಆದ್ರೆ, ಅದು ಭರವಸೆಯಾಗಿಯೇ ಉಳಿದಿದ್ದು, ಇದೀಗ ಮೀನುಗಾರರು ಸರ್ಕಾರದ ಯೋಜನೆಗೆ ಕಾಯದೆ ತಾವೇ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಂಗಳೂರಿನ ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದವರು ತಾವೇ ಆಂಬ್ಯುಲೆನ್ಸ್ ಬೋಟ್ ನಿರ್ಮಾಣದ ಕಾರ್ಯವನ್ನು ಮಾಡುತ್ತಿದ್ದಾರೆ. ಈಗಾಗಲೇ ಈ ಎಮರ್ಜೆನ್ಸಿ ಬೋಟ್ ತಯಾರಾಗುತ್ತಿದ್ದು, ಇದರಲ್ಲಿ ಆಕ್ಸಿಜನ್ ವ್ಯವಸ್ಥೆ, ವೈದ್ಯಕೀಯ ಉಪಕರಣಗಳು, ಲೈಫ್ ಜಾಕೆಟ್ ಸಹಿತ ಜೀವ ಉಳಿಸಲು ಬೇಕಾದ ತುರ್ತು ಚಿಕಿತ್ಸಾ ವ್ಯವಸ್ಥೆ ಇರಲಿದೆ.
ಇದನ್ನೂ ಓದಿ:ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ಸಮುದ್ರಪಾಲು
ಇತ್ತಿಚೇಗೆ ಬೇಂಗ್ರೆಯ ಅಳಿವೆ ಬಾಗಿಲಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಮಗುಚಿ ಬಿದ್ದಿತ್ತು. ಈ ಸಂದರ್ಭ ಬೋಟ್‌ನಲ್ಲಿದ್ದ ಆರು ಮೀನುಗಾರರ ರಕ್ಷಣೆಗೆ ಯಾವುದೇ ವ್ಯವಸ್ಥೆಯಿರಲಿಲ್ಲ. ಎಲ್ಲ ಮೀನುಗಾರಿಕಾ ಬೋಟ್‌ಗಳಲ್ಲಿ ಬಲೆ ಹಾಗೂ ಇತರ ಪರಿಕರಗಳು ಇದ್ದುದರಿಂದ ಮೀನುಗಾರರ ಜೀವಕ್ಕೆ ಅಪಾಯ ಎದುರಾಗಿತ್ತು. ಕೊನೆಗೆ ಖಾಲಿಯಿರುವ ದೋಣಿಯೊಂದು ಸಿಕ್ಕಿದ್ದು, ಅದನ್ನು ಬಳಸಿ ಆರು ಜೀವಗಳನ್ನು ರಕ್ಷಿಸಲಾಗಿತ್ತು. ಹೀಗಾಗಿ ಈ ಅವಘಡದ ಬಳಿಕ ಸಂಘವು, ತಮ್ಮದೇ ಆದ ಬೋಟ್ ಆಂಬ್ಯುಲೆನ್ಸ್ ಯೋಜನೆಯನ್ನು ರೂಪಿಸಿತು. ಈ ಬೋಟ್ ಆಂಬ್ಯುಲೆನ್ಸ್ ಮೀನುಗಾರರಿಗೆ ತುರ್ತು ಸಂದರ್ಭದಲ್ಲಿ ಉಚಿತ ಸೇವೆಯನ್ನು ನೀಡಲಿದೆ. ಈ ಮೂಲಕ ಸರಕಾರ ಬೋಟ್ ಆಂಬ್ಯುಲೆನ್ಸ್ ಬೇಡಿಕೆ ಈಡೇರಿಸುವುದನ್ನು ಕಾಯದೇ ಮೀನುಗಾರರ ಸಂಘ ಸ್ವಂತಿಕೆಯನ್ನು ಮೆರೆದಿದೆ.
ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿರಿಸಿ ಈ ಎಮರ್ಜೆನ್ಸಿ ಬೋಟ್ ಕಾರ್ಯಚರಣೆ ನಡೆಸಲಿದೆ. ಇದಕ್ಕೆ ಒಟ್ಟು 15 ಲಕ್ಷ ಖರ್ಚಾಗಲಿದ್ದು, ಇದನ್ನು ಮೀನುಗಾರರೇ ಭರಿಸಲಿದ್ದಾರೆ. ಕಾರ್ಯಾಚರಣೆ ನಡೆಸುವುದಕ್ಕೆ 15 ಜನರ ತಂಡವು ರೆಡೆಯಾಗಿದ್ದು, ಇದರಲ್ಲಿ ನುರಿತ ಈಜುಗಾರರು ಸೇರಿದಂತೆ ಪ್ರಾಥಮಿಕ ಚಿಕಿತ್ಸೆ ನೀಡಲು ನುರಿತ ವ್ಯಕ್ತಿಗಳು ಇರಲಿದ್ದಾರೆ. ಒಟ್ಟಿನಲ್ಲಿ ಮೀನುಗಾರರೇ ಸೇರಿ ಬೋಟ್ ಆಂಬ್ಯುಲೆನ್ಸ್ ರೆಡಿ ಮಾಡಿ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವುದು ನಿಜಕ್ಕೂ ಪ್ರಶಂಶನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ