ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ (Mangalore Cooker Bomb Blast) ಸಂಬಂಧಿಸಿದಂತೆ ಎನ್.ಐ.ಎ (NIA) ತನಿಖೆ ಚುರುಕುಗೊಳಿಸಿದೆ (Investigation). ಎನ್.ಐ.ಎ ವಿಚಾರಣೆ ವೇಳೆ ಸಾಕಷ್ಟು ವಿಚಾರಗಳು ಹೊರ ಬಂದಿವೆ. ಅಸಲಿಗೆ ಬಾಂಬರ್ ಶಾರಿಕ್ ಗೆ ಫಂಡಿಂಗ್ ಆಗ್ತಾ ಇದ್ದಿದ್ದು ಎಲ್ಲಿಂದ? ಆತನಿಗೆ ಸ್ಟೋಟಕ ವಸ್ತುಗಳು ಬಂದಿದ್ದು ಎಲ್ಲಿಗೆ? ಅನ್ನೊದ್ರ ಬಗ್ಗೆ ಒಂದು ವಿಶೇಷ ರಿಪೋರ್ಟ್ ಇಲ್ಲಿದೆ. ಮಂಗಳೂರಿನ ನಾಗುರಿ ಬಳಿ ನವೆಂಬರ್ 19 ರ ಸಂಜೆ 4.30 ರ ಸುಮಾರಿಗೆ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಈ ಕುಕ್ಕರ್ ಬಾಂಬ್ ತಯಾರಾಗಿದ್ದು ಮೈಸೂರಿನಲ್ಲಾದ್ರೆ ಅದಕ್ಕೆ ಬೇಕಾದ ಸ್ಪೋಟಕ ಸಾಮಾಗ್ರಿಗಳು ಬಂದಿಳಿದಿದ್ದು ಬೇರೆ ರಾಜ್ಯಗಳಿಗೆ. ಹೌದು ಅದೊಂದು ಮಿಸ್ಸಾದ ಸ್ಪೋಟ ನಡೆಯದೇ ಹೋಗಿದ್ದರೆ ಆ ಬಾಂಬ್ ಬೇರೆ ಕಡೆ ಸ್ಪೋಟಗೊಳ್ಳುತ್ತಿತ್ತು. ಅಂದುಕೊಂಡಂತೆ ಸ್ಪೋಟಗೊಂಡಿದ್ದಿದ್ದರೆ ಆ ಸ್ಪೋಟದ ಹಿಂದೆ ಯಾರಿದ್ದಾರೆ ಅನ್ನೊದು ಕಗ್ಗಂಟು ಇನ್ನೂ ಕೂಡ ಗೊತ್ತಾಗುತ್ತಿರಲಿಲ್ಲ.
ಮಹಮ್ಮದ್ ಶಾರೀಕ್ (Mohammad Tariq) ಮೈಸೂರಿನಿಂದ ಬಾಂಬ್ ತಂದು ಸೈಲೆಂಟಾಗಿ ಸ್ಟೋಟ ಮಾಡಿ ಮತ್ತೆ ಮೈಸೂರಿನ ತನ್ನ ಬಾಡಿಗೆ ಮನೆಯಲ್ಲಿ ಹಿಂದೂ ಹೆಸರಿನಲ್ಲಿ ಆರಾಮವಾಗಿ ಇರುತ್ತಿದ್ದ. ಯಾಕಂದ್ರೆ ಆತ ಅದೆಷ್ಟು ಮುಂಜಾಗರೂಕತೆಯಿಂದ ಈ ಕೃತ್ಯಕ್ಕೆ ಸಂಚು ಮಾಡಿದ್ದ ಅಂದ್ರೆ ತನಿಖೆಯಲ್ಲಿ ತನ್ನ ಹೆಜ್ಜೆ ಗುರುತು ಪತ್ತೆಯಾಗದಂತೆ ಪ್ರತಿಹಂತದಲ್ಲೂ ನೋಡಿಕೊಂಡಿದ್ದ.
ತಾಜಾ ಮಾಹಿತಿ… ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್:
ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಬೆಳಗ್ಗೆ 4 ಗಂಟೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಾಂಬರ್ ಉಗ್ರ ಶಾರೀಕ್ ಸಂಪೂರ್ಣ ಗುಣಮುಖನಾದ ಹಿನ್ನೆಲೆ ಉಗ್ರ ಶಾರೀಕ್ ಆಸ್ಪತ್ರೆಯಿಂದ ಸ್ಥಳಾಂತರಗೊಂಡಿದ್ದು ಎನ್.ಐ.ಎ ಅಧಿಕಾರಿಗಳ ತಂಡ ಬೆಂಗಳೂರಿಗೆ ಕರೆತಂದಿದೆ. ನಿನ್ನೆ ಶುಕ್ರವಾರ ರಾತ್ರಿಯೇ ಮಂಗಳೂರು ಅಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿದೆ. ಸುಟ್ಟ ಗಾಯಗಳಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರನನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ಸೆಂಟರ್ ನಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಬೆಂಗಳೂರಿನ ಎನ್.ಐ.ಎ ಕಚೇರಿಯಲ್ಲಿ ಶಾರೀಕ್ ನ ವಿಚಾರಣೆ ಮುಂದುವರಿಯಲಿದೆ.
ಬಾಂಬ್ ಸ್ಪೋಟಕ ಸಮಾಗ್ರಿಗಳನ್ನು ಹೊರತುಪಡಿಸಿ ಅದಕ್ಕೆ ಬೇಕಾಗುವ ಸಾಮಾನ್ಯವಾಗಿ ಖರೀದಿ ಮಾಡುವ ವಸ್ತುಗಳನ್ನು ಮಾತ್ರ ಆತ ಮೈಸೂರನ ಶಾಪ್ ಗಳಲ್ಲಿ ಖರೀದಿಸಿದ್ದ. ಇನ್ನು ಸ್ಪೋಟಕ ಸಾಮಾಗ್ರಿಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದ. ಆದ್ರೆ ತನ್ನ ಮನೆಗಾಗಲಿ ಮೈಸೂರಿನ ಯಾವ ವಿಳಾಸಕ್ಕಾಗಲಿ ಅದು ಬಂದಿರಲಿಲ್ಲ. ಆದನ್ನ ಖರೀದಿ ಮಾಡೊದಕ್ಕಾಗಿಯೆ ಕೊಚ್ಚಿಗೆ ಹೋಗಿದ್ದ. ಅಲ್ಲಿ ಮತ್ತೊಂದು ಹೆಸರಿನ ದಾಖಲೆಯನ್ನು ಕೊಟ್ಟು ಅಲ್ಲಿನ ಲಾಡ್ಜ್ ನಲ್ಲಿ ರೂಂ ಮಾಡಿದ್ದ. ಲಾಡ್ಜ್ ವಿಳಾಸಕ್ಕೆ ಬುಕ್ ಮಾಡಿದ್ದ ಸ್ಪೋಟಕ ಸಮಾಗ್ರಿಗಳು ಬಂದಿತ್ತು. ಅದಕ್ಕಾಗಿಯೇ ಆತನ 15 ದಿನಗಳ ಕಾಲ ಕೊಚ್ಚಿನ್ ನ ಅದೇ ಲಾಡ್ಜ್ ನಲ್ಲಿದ್ದ.
ಇನ್ನು ಮೊಹಮ್ಮದ್ ಶಾರೀಕ್ ಗೆ ಕಂಪ್ಲೀಟ್ ಆಗಿ ಹಣದ ಫಂಡಿಂಗ್ ಮಾಡ್ತಾ ಇದ್ದಿದ್ದು ಅಬ್ದುಲ್ ಮತೀನ್ ಅಹ್ಮದ್ ತಾಹ. ಹೌದು ಈತನಿಗೆ ಐಸಿಸ್ ನ ನೇರ ಸಂಪರ್ಕವಾಗಿದೆ. ಅಲ್ಲಿಂದ ಆತನ ಸೂಚನೆ ಮೇರೆಗೆ ಶಾರೀಕ್, ಮಾಝ್ ಸೇರಿದಂತೆ ವಿವಿಧ ಯುವಕರು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದರು. ಬ್ಲಾಕ್ ವೆಬ್ ಗಳ ಮೂಲಕ ಹಾಗೂ ಬಿಟ್ ಕಾಯಿನ್ ಮೂಲಕ ಇವರಿಗೆ ಫಂಡಿಗ್ ಆಗ್ತಾ ಇತ್ತು ಅನ್ನೊದು ತನಿಖೆಯಲ್ಲಿ ಬಯಲಾಗಿದೆ.
ಮಹಮ್ಮದ್ ಶಾರಿಕ್ ಗುಣಮುಖನಾಗಿದ್ದಾನೆ. ಓಡಾಡುವ ಸ್ಥಿತಿ ತಲುಪಿದ್ದಾನೆ. ಆದ್ರಿಂದ ಎನ್.ಐ.ಎ ಹೆಚ್ಚಿನ ವಿಚಾರಣೆ ನಡೆಸಿದೆ. ಎನ್.ಐ.ಎ ಉನ್ನತ ಮೂಲಗಳಿಂದ ಟಿವಿ9 ಗೆ ಇಷ್ಟೆಲ್ಲಾ ಮಾಹಿತಿ ಲಭ್ಯವಾಗಿದೆ. ಇನ್ನೂ ವಿಚಾರಣೆ ಮುಂದುವರೆದಿದ್ದು ಅದಿನ್ನೆಷ್ಟು ಭಯಾನಕ ಅಂಶಗಳು ಅಡಗಿದ್ಯೋ ಗೊತ್ತಿಲ್ಲ.
ಬಾಂಬರ್ ಶಾರೀಕ್ ನ ಕರಾಳ ಹೆಜ್ಜೆ ಗುರುತೇನು ಗೊತ್ತಾ..!
ಮಂಗಳೂರಿನಲ್ಲಿ ಆಟೋರಿಕ್ಷದಲ್ಲಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಶಾರೀಕ್ ವಿಚಾರಣೆ ಮುಂದುವರೆದಿದೆ. ಅಷ್ಟಕ್ಕೂ ಶಾರೀಕ್ ಬಾಂಬ್ ಇಡಲು ಹೇಗೆ ತಯಾರಾಗಿದ್ದ ಎಲ್ಲಿಂದ ಬಂದಾ. ಈ ಬಗ್ಗೆ ಸವಿಸ್ತಾರ ವರದಿ ಇಲ್ಲಿದೆ.
ನವೆಂಬರ್ 19. 2022. ಅಂದ್ರೆ ಕಳೆದ ತಿಂಗಳು ಮಂಗಳೂರಿನಲ್ಲಿ ಸ್ಪೋಟಗೊಂಡ ಬಾಂಬ್ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಪೋಟದಿಂದ ಬಯಲಾಗಿತ್ತು. ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಉಗ್ರ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಬಾಂಬ್ ಅವನ ಕಾಲ ಬುಡದಲ್ಲೇ ಸ್ಪೋಟಗೊಂಡು ಆತ ಅಲ್ಲೇ ತಗ್ಲಾಕ್ಕೊಂಡಿದ್ದ.
ಹೌದು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ಯಾವಾಗ ಅರೆಸ್ಟ್ ಆಗುತ್ತಾನೊ ಆಗ ಶಾರಿಕ್ ಅಲ್ಲಿಂದ ಕಾಲ್ಕಿತ್ತಿದ್ದ. ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದೂ ವೇಶ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದ ತನ್ನ ಉಗ್ರ ಕೃತ್ಯ ಮುಂದುವರೆಸಿದ್ದ.
ಇನ್ನು ಮೈಸೂರಿನ ತನ್ನ ಬಾಡಿಗೆ ಮನೆಯಲ್ಲಿ ಕುಕ್ಕರ್ ಬಾಂಬ್ ತಯಾರು ಮಾಡಿದ್ದ. ಅಲ್ಲಿಂದ ಮಂಗಳೂರಿಗೆ ತಂದು ಸಿಡಿಸುವ ಪ್ಲಾನ್ ಇತ್ತು. ನವೆಂಬರ್ 19 ರ ಬೆಳಗ್ಗೆ ಮೈಸೂರಿನಿಂದ ತಾನು ತಯಾರಿಸಿದ್ದ ಕುಕ್ಕರ್ ಬಾಂಬ್ ಸಮೇತ ಮಂಗಳೂರಿನ ಕಡೆ ಹೊರಟಿದ್ದ. ಮೈಸೂರಿನ ತನ್ನ ಬಾಡಿಗೆ ಮನೆಯಿಂದ ಆಟೋದಲ್ಲಿ ಬಾಂಬ್ ನ್ನು ಇಟ್ಟುಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದಿಳಿದಿದ್ದ. ಮೈಸೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ 20 ನಿಮಿಷ ಬಸ್ ಗೆ ಕಾದಿದ್ದ.
ಅಲ್ಲಿಂದ ನೇರವಾಗಿ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹತ್ತಿದ್ದ. ಅಲ್ಲಿಂದ ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು ಮಾರ್ಗವಾಗಿ ಬಂದು ಮಂಗಳೂರಿನ ಪಡೀಲಿನಲ್ಲಿ ಇಳಿದಿದ್ದ. ಇದಕ್ಕೂ ಮುನ್ನ ತಾನು ತಂದಿದ್ದ ಬಾಂಬ್ ಜೊತೆ ಊಟಕ್ಕಾಗಿ ಬಸ್ ಬ್ರೇಕ್ ಕೊಟ್ಟಾಗ ಹೋಟೆಲ್ ಒಳಗೂ ಬಾಂಬ್ ತೆಗೆದುಕೊಂಡು ಹೋಗಿದ್ದ. ಇನ್ನು ಮಂಗಳೂರಿನ ಪಡೀಲು ಬಳಿ ಇಳಿದವನೆೇ ಪಂಪ್ ವೆಲ್ ಕಡೆ ಅರ್ಧ ಕಿಲೋ ಮೀಟರ್ ನಡೆದುಕೊಂಡು ಬಂದಿದ್ದ.
ಬಳಿಕ ಕುಕ್ಕರ್ ಬಾಂಬ್ ಗೆ ಟೈಮರ್ ಫಿಕ್ಸ್ ಮಾಡಿಕೊಂಡು ಆಟೋ ಹತ್ತಿದ್ದ. ಪಂಪ್ ವೆಲ್ ಡ್ರಾಪ್ ಅಂತಾ ಹೇಳಿ ಆಟೋ ಹತ್ತಿದ್ದು, ಆಟೋ ಪಂಪ್ ವೆಲ್ ತಲುಪೊ ಮಧ್ಯದಲ್ಲೇ ಬಾಂಬ್ ನಲ್ಲಿದ್ದ ಝೆಲ್ ಗೆ ಬೆಂಕಿ ಹೊತ್ತಿಕೊಂಡು ಬ್ಲಾಸ್ಟ್ ಆಗಿತ್ತು. ಆದ್ರೆ ಡಿಟೊನೇಟರ್ ಮೂಲಕ ಬ್ಲಾಸ್ಟ್ ಆಗದೆ ಇದ್ದಿದ್ರಿಂದ ಆಗೋ ಭಾರೀ ಅನಾಹುತ ತಪ್ಪಿತ್ತು.
ಇನ್ನು ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಟಾರ್ಗೆಟ್ ಇಟ್ಟಿದ್ದ. ಪ್ರಮುಖವಾಗಿ ಕದ್ರಿ ದೇವಸ್ಥಾನಕ್ಕೆ ಬಾಂಬ್ ಇಡುವ ಪ್ಲಾನ್ ಇತ್ತು. ಇದು ಮಿಸ್ಸಾದ್ರೆ ಬೇರೆ ಕಡೆ ಇಡುವ ಪ್ಲಾನ್ ಹೊಂದಿದ್ದ. ಇನ್ನು ಇಷ್ಟೆಲ್ಲಾ ಅಂಶಗಳು ಪೊಲೀಸರು ಮತ್ತು ಎನ್.ಐ.ಎ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ತಿಳಿದು ಬಂದಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ 9, ಮಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Sat, 17 December 22