ಮಂಗಳೂರು, ಸೆಪ್ಟೆಂಬರ್ 4: ಮಂಗಳೂರು ನಗರದ (Mangalore) ಪಡೀಲ್ ಮತ್ತು ಪಂಪ್‌ವೆಲ್ ನಡುವಣ ಮೂರು ಕಿಲೋಮೀಟರ್ ಚತುಷ್ಪಥ ರಸ್ತೆ ಯೋಜನೆಯ (Four-Lane Road Project) ಕಾಮಗಾರಿ ಎರಡು ವರ್ಷಗಳಲ್ಲಿ ಕೇವಲ ಶೇ 30 ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಕೆಲವು ಸ್ಥಳೀಯ ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಈ ಕಾಮಗಾರಿಯಲ್ಲಿ ಹಣದ ಕೊರತೆಗಿಂತಲೂ ಉಪಕರಣಗಳ ಸಾಗಾಟವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಯೋಜನೆ ವಿಳಂಬವಾಗುತ್ತಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಪಡೀಲ್‌ನಿಂದ ಪಂಪ್‌ವೆಲ್‌ವರೆಗಿನ ಚತುಷ್ಪಥ ಕಾಂಕ್ರೀಟ್ ರಸ್ತೆಗೆ 29.30 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಈಗ ಅತಿಯಾದ ವಿಳಂಬದಿಂದ ವೆಚ್ಚದ ಅಂದಾಜು 32 ಕೋಟಿ ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
2022ರ ಫೆಬ್ರುವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಗಡುವಿನಂತೆ ಮಾರ್ಚ್ 2024ಕ್ಕೆ ಕಾಮಗಾರಿ ಮುಗಿಯಬೇಕಿದೆ. ಆದರೆ, ಗೈಲ್ ಪೈಪ್‌ಲೈನ್, ಕುಡಿಯುವ ನೀರಿನ ಪೈಪ್‌ಲೈನ್, ಒಳಚರಂಡಿ ಪೈಪ್‌ಲೈನ್ ಮತ್ತು ವಿದ್ಯುತ್ ಸ್ಥಳಾಂತರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಸಹಕಾರದಿಂದಾಗಿ ಯೋಜನೆಯು ಇನ್ನೊಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ.
ಇಲ್ಲಿಯವರೆಗೆ ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಪಕ್ಕದಲ್ಲೇ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗುತ್ತಿದೆ. ಅದನ್ನು ತೆಗೆಯಲಾಗಲಿಲ್ಲ. ಆದ್ದರಿಂದ, ವಿನ್ಯಾಸದಲ್ಲಿ ಕೆಲವು ಮಾರ್ಪಾಡುಗಳು ಮಾಡಬೇಕಾಗುತ್ತದೆ. ಜತೆಗೆ ಜಲಸಿರಿ ಯೋಜನೆಗೆ ಸಂಬಂಧಿಸಿದ ಪೈಪ್‌ಲೈನ್ ಕೂಡ ರಸ್ತೆಯ ವಿಸ್ತಾರದಲ್ಲಿದೆ. ಕೆಲವೆಡೆ ಭೂಸ್ವಾಧೀನವೂ ಬಾಕಿ ಇದೆ. ಅದಕ್ಕೆ ಅನುದಾನವೂ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸುಳ್ಯ: ಬಲೆಗೆ ಸಿಲುಕಿ ಎರಡು ವರ್ಷದ ಚಿರತೆ ಸಾವು: ಇಬ್ಬರ ಬಂಧನ
ನಾಗೋರಿಯಲ್ಲಿ ಮೀನು ಮಾರುಕಟ್ಟೆ ಸ್ಥಳಾಂತರ ಸ್ಥಗಿತವಾಗಿದೆ. ಮೀನು ಮಾರುಕಟ್ಟೆ ಸ್ಥಳಾಂತರ ಮಾಡದೆ ಯೋಜನೆ ಜಾರಿಯಾಗುವುದಿಲ್ಲ. ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಒಲವು ತೋರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಾಗೋರಿಯಲ್ಲಿ ರಸ್ತೆ ಬದಿಯ ಅಂಗಡಿಗಳನ್ನು ಕೂಡ ತೆರವು ಮಾಡಬೇಕಿದೆ.
ಈ ಮಧ್ಯೆ, ಯೋಜನೆ ವಿಳಂಬವಾದರೂ ಕಾಮಗಾರಿ ಗುಣಮಟ್ಟ ಉತ್ತಮವಾಗಿ ಸಾಗುತ್ತಿದೆ ಎಂದು ಕೆಲವು ಮೂಲಗಳು ಹೇಳಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ