ಮಂಗಳೂರು, ಆಗಸ್ಟ್ 7: ಕಳೆದ ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಬೀಸುತ್ತಿರುವ ಭಾರಿ ಗಾಳಿಯ ಪರಿಣಾಮ ಮೆಸ್ಕಾಂ ವ್ಯಾಪ್ತಿಯಲ್ಲಿ 21702 ವಿದ್ಯುತ್ ಕಂಬಗಳು ಧರೆಗುರುಳಿವೆ. ಹೆಚ್ಚುವರಿಯಾಗಿ, ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಮತ್ತು ಕೇಬಲ್ಗಳಿಗೆ ಹಾನಿಯಾಗಿದೆ. ಒಟ್ಟಾರೆ ಅಂದಾಜು 33.40 ಕೋಟಿ ರೂ. ನಷ್ಟವಾಗಿದೆ.
ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ದಕ್ಷಿಣ ಕನ್ನಡದಲ್ಲಿ 10.14 ಕೋಟಿ ರೂಪಾಯಿ ಹಾನಿಯ ಅಂದಾಜಿಸಲಾಗಿದ್ದರೆ, ಚಿಕ್ಕಮಗಳೂರಿನಲ್ಲಿ 9.67 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳು ನಾಶವಾಗಿವೆ. ಉಡುಪಿ ಮತ್ತು ಶಿವಮೊಗ್ಗದಲ್ಲಿ ಕ್ರಮವಾಗಿ 8.48 ಕೋಟಿ ರೂ. ಹಾಗೂ 5.09 ಕೋಟಿ ರೂ. ನಷ್ಟವಾಗಿದೆ. ಹಾನಿಗೊಳಗಾಗಿರುವ ಬಹುತೇಕ ಉಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಉಳಿದವುಗಳ ದುರಸ್ತಿ ಮತ್ತು ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡದಲ್ಲಿ 6,369 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಚಿಕ್ಕಮಗಳೂರಿನಲ್ಲಿ 5,697, ಶಿವಮೊಗ್ಗದಲ್ಲಿ 4,960 ಮತ್ತು ಉಡುಪಿಯಲ್ಲಿ 4776 ವಿದ್ಯುತ್ ಕಂಬಗಳು ಧರೆಗುರುಳಿವೆ.
ನೆಲಕ್ಕುರುಳಿರುವ 21702 ವಿದ್ಯುತ್ ಕಂಬಗಳ ಪೈಕಿ 21245 ಹೊಸ ಕಂಬಗಳನ್ನು ಈಗಾಗಲೇ ಅಳವಡಿಸಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ 316 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಹಾಳಾಗಿವೆ. ಎಲ್ಲವನ್ನೂ ಸರಿಪಡಿಸಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ದಕ್ಷಿಣ ಕನ್ನಡದಲ್ಲಿ 318.15 ಕಿಮೀ ಉದ್ದದ ವಿದ್ಯುತ್ ತಂತಿಗಳು ಹಾಳಾಗಿವೆ. ಉಡುಪಿಯಯಲ್ಲಿ 86.39 ಕಿಮೀ, ಚಿಕ್ಕಮಗಳೂರು 111.94 ಕಿಮೀ ಮತ್ತು ಶಿವಮೊಗ್ಗ 97.82 ಕಿಮೀ ಸೇರಿದಂತೆ ಒಟ್ಟು 614.30 ಕಿಮೀ ಉದ್ದದ ವಿದ್ಯುತ್ ತಂತಿ ಹಾನಿಗೊಂಡಿದೆ. ಇವುಗಳಲ್ಲಿ ಈಗಾಗಲೇ 604.43 ಕಿ.ಮೀ ತಂತಿಗಳನ್ನು ಬದಲಾಯಿಸಲಾಗಿದೆ.
ಇದನ್ನೂ ಓದಿ: ಮಂಗಳೂರು ಮಹಾನಗರ ಪಾಲಿಕೆಯಿಂದ ‘ಟೈಗರ್ ಆಪರೇಷನ್’! ಏನಿದು ಕಾರ್ಯಾಚರಣೆ?
ಮಳೆ, ಗಾಳಿಯ ನಡುವೆಯೂ ಮೆಸ್ಕಾಂ ಸಿಬ್ಬಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಹಕರು ಮೆಸ್ಕಾಂ ಸಿಬ್ಬಂದಿಗೆ ಸಹಕರಿಸಬೇಕಿದೆ ಎಂದು ಮೆಸ್ಕಾಂ ಮನವಿ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ