ಮಂಗಳೂರು ಆ್ಯಸಿಡ್​ ದಾಳಿ, ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ 4 ಲಕ್ಷ ರೂ. ಪರಿಹಾರ

|

Updated on: Mar 06, 2024 | 8:40 AM

ಸೋಮವಾರ (ಮಾ.04) ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಸದ್ಯ ಮೂವರು ವಿದ್ಯಾರ್ಥಿನಿಯರು ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ ಸರ್ಕಾರ ನಾಲ್ಕು ಲಕ್ಷ ಪರಿಹಾರ ಘೋಷಿಸಿದೆ.

ಮಂಗಳೂರು ಆ್ಯಸಿಡ್​ ದಾಳಿ, ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ 4 ಲಕ್ಷ ರೂ. ಪರಿಹಾರ
ಆ್ಯಸಿಡ್​ ದಾಳಿ
Follow us on

ಮಂಗಳೂರು, ಮಾರ್ಚ್​ 06: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬದ ಆ್ಯಸಿಡ್ ದಾಳಿ (Acid Attack) ಸಂತ್ರಸ್ತ ಮೂವರು ವಿದ್ಯಾರ್ಥಿನಿಯರಿಗೆ (Students) ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಕರ್ನಾಟಕ ಸರ್ಕಾರ (Karnataka Government) ಘೋಷಿಸಿದೆ. ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ತಕ್ಷಣವೇ ನೀಡಲಾಗುವುದು ಮತ್ತು ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ಕಡಬದಲ್ಲಿ ಸೋಮವಾರ ಕಿಡಿಗೇಡಿಯಿಂದ ಆ್ಯಸಿಡ್​​ ದಾಳಿಗೊಳಗಾಗಿ ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ಮಂಗಳವಾರ (ಮಾ.05) ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂವರು ವಿದ್ಯಾರ್ಥಿನಿಯರೂ ಅಪಾಯದಿಂದ ಪಾರಾಗಿದ್ದಾರೆ. ನಾವು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ ಎಂದು ಕೇಳಿದ್ದಾರೆ. ಈ ಬಗ್ಗೆ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸುತ್ತೇನೆ. ನಾನು ಮಕ್ಕಳ ಚಿಂತೆ ಮತ್ತು ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ. ನನಗೂ ಪಿಯುಸಿ ಓದುತ್ತಿರುವ ಮಗನಿದ್ದಾನೆ. ನಾನು ಶಿಕ್ಷಣ ಸಚಿವರನ್ನು ಭೇಟಿ ಮಾಡುತ್ತೇನೆ ಎಂದರು.

ಇದನ್ನೂ ಓದಿ: 2022ರಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಆ್ಯಸಿಡ್ ದಾಳಿ: ದೇಶದಲ್ಲಿ ಅಗ್ರಸ್ಥಾನ

ಮೂವರೂ ವಿದ್ಯಾರ್ಥಿನಿಯರುಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರಲ್ಲಿ ಇಬ್ಬರಿಗೆ ಎರಡು ವಾರಗಳ ಸಾಮಾನ್ಯ ಚಿಕಿತ್ಸೆ ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಬಹುದು. ಸಂತ್ರಸ್ತೆಯರಲ್ಲಿ ಒಬ್ಬರಿಗೆ ಶೇ.20, ಮತ್ತೊಬ್ಬರಿಗೆ ಶೇ.12 ಹಾಗೂ ಶೇ.10ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗಾಯಗಳಾಗಿವೆ ಎಂದು ತಿಳಿಸಿದರು.

ಏನಿದು ಪ್ರಕರಣ

ಸೋಮವಾರ (ಮಾ.04) ದ್ವಿತೀಯ ಪರೀಕ್ಷೆ ಇದ್ದಿದ್ದರಿಂದ ಮೂವರು ವಿದ್ಯಾರ್ಥಿನಿಯರು ಬೆಳಗ್ಗೆ 10 ಗಂಟೆಯಲ್ಲಿ ಕಾಲೇಜು ಆವರಣದ ಧ್ವಜ ಕಟ್ಟೆಯಲ್ಲಿ ಓದುತ್ತಾ ಕುಳಿತಿದ್ದರು. ಮಾಸ್ಕ್ ಹಾಗೂ ಟೋಪಿ ಧರಿಸಿ ಬಂದ ಕೇರಳ ಮೂಲದ ಅಬಿನ್ ಎಂಬಾತ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚಿ, ಸ್ಥಳದಿಂದ ಪರಾರಿಯಾಗಿದ್ದನು. ಸುಟ್ಟ ಗಾಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯರನ್ನು ತಕ್ಷಣ ಕಡಬ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಟ್ರೀಟ್‌ಮೆಂಟ್‌ಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರಿನಲ್ಲಿ ದಾಖಲಿಸಲಾಗಿರುವ ವಿದ್ಯಾರ್ಥಿನಿ ಮುಖಕ್ಕೆ ಆ್ಯಸಿಡ್ ಬಿದ್ದಿದ್ದು, ಇನ್ನಿಬ್ಬರು ವಿದ್ಯಾರ್ಥಿನಿಯರ ಕೈಗೆ ಶೇಕಡ 10 ರಿಂದ 12ರಷ್ಟು ಗಾಯಗಳಾಗಿವೆ. ಕೃತ್ಯವೆಸಗಿ ಪರಾರಿಯಾಗಿದ್ದ ಅಬಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:39 am, Wed, 6 March 24