ಮಂಗಳೂರು, ನವೆಂಬರ್ 10: ಬೆಳಕಿನ ಹಬ್ಬ ದೀಪಾವಳಿಯ (Deepavali) ಸಂಭ್ರಮಾಚರಣೆಗೆ ಇಡೀ ನಾಡಿಗೆ ನಾಡೇ ಕಾತರದಿಂದ ಕಾಯುತ್ತಿದೆ. ಆದ್ರೆ ಈ ಬಾರಿ ರಾಜ್ಯದಲ್ಲಿ ಪಟಾಕಿ (Firecrackers) ಮಳಿಗೆ ತೆರೆಯುವುದಕ್ಕೆ ಹಲವು ಷರತ್ತುಗಳನ್ನು ಹಾಕಲಾಗಿದೆ. ಸರ್ಕಾರ ಹೇರಿರುವ ಈ ನಿಯಮಗಳ ಬಗ್ಗೆ ಬಿಜೆಪಿ ಕಿಡಿಕಾರಿದ್ದು ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕುವ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ ಎಂದಿದೆ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಗುರುತು ಮಾಡಿದ ಮೈದಾನ ಹೊರತುಪಡಿಸಿ ಬೇರೆಲ್ಲೂ ಪಟಾಕಿ ಅಂಗಡಿಗಳನ್ನು ತೆರೆಯದಂತೆ ನಿರ್ಬಂಧ ವಿಧಿಸಲಾಗಿದೆ. ಆದ್ರೆ ಈ ನಿರ್ಭಂದಗಳ ಬಗ್ಗೆ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ತಗಾದೆ ತೆಗೆದಿದ್ದು ಈ ಹೊಸ ನಿಯಮಾವಳಿ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ಹುನ್ನಾರವೆಂದು ಆರೋಪಿಸಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಪಟಾಕಿ ವಿಷಯದಲ್ಲಿ ಇಲ್ಲ ಸಲ್ಲದ ನಿಯಮಾವಳಿ ಹೇರಲಾಗಿದೆ. ಹತ್ತು ಹಲವು ನೆಪವೊಡ್ಡಿ ಹಿಂದೂಗಳ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೇಕಲ್ ಪಟಾಕಿ ದುರಂತ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪಟಾಕಿ ಗೋದಾಮುಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಇಲಾಖೆಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದೆ. ಇದರ ಜೊತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತೆರೆಯುವ ಪಟಾಕಿ ಮಳಿಗೆಗಳಿಗೆ ಹಲವು ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದೆ.
ಈ ಹಿಂದೆ ಮಂಗಳೂರು ನಗರ ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿ ಸೇರಿದಂತೆ ಅಲ್ಲಲ್ಲಿ ಪಟಾಕಿ ಅಂಗಡಿ ತೆರೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಆದ್ರೆ ಈ ಬಾರಿ ಮಂಗಳೂರು ನಗರದ ನೆಹರು ಮೈದಾನ, ಬೈಕಂಪಾಡಿ ಎಪಿಎಂಸಿ, ಪಚ್ಚನಾಡಿ, ಬೋಂದೇಲ್ ಹೀಗೆ ಕೆಲ ಮೈದಾನಗಳಲ್ಲಿ ಮಾತ್ರ ಪಟಾಕಿ ಅಂಗಡಿ ತೆರೆಯಲು ಸ್ಥಳ ಗುರುತಿಸಲಾಗಿದೆ. ಆದ್ರೆ ಎಷ್ಟೋ ಕಡೆಗಳಲ್ಲಿ ಮೈದಾನಗಳೇ ಇಲ್ಲ, ಹೀಗಾಗಿ ಈ ಹಿಂದೆ ಅಲ್ಲಿ ಪಟಾಕಿ ಅಂಗಡಿಗಳನ್ನು ಹಾಕುತ್ತಿದ್ದವರು ಈಗ ಎಲ್ಲಿ ಹೋಗಬೇಕು ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಇನ್ನು ದೀಪಾವಳಿ ಹಬ್ಬಕ್ಕೆ ಎರಡು ದಿನ ಬಾಕಿಯಿದ್ದರು ಅನುಮತಿಗಾಗಿ ಪಟಾಕಿ ವ್ಯಾಪಾರಿಗಳು ಅಗ್ನಿಶಾಮಕ, ಪೊಲೀಸ್, ಮಹಾನಗರ ಪಾಲಿಕೆಗಳಿಗೆ ಅಲೆಯುತ್ತಿದ್ದು ಈ ಬಗ್ಗೆ ಹಿಂದೂಪರ ಸಂಘಟನೆಯಾದ ವಿಶ್ವಹಿಂದೂ ಪರಿಷತ್ ಸಹ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟು ಬಲವಾಗಿ ನಿಯಮ ಜಾರಿ ಮಾಡುವುದಾದರೆ ಮೈಕ್ ನಿಯಮ ಜಾರಿಯಾಗಲಿ. ಮಸೀದಿಗಳಲ್ಲಿ ಮೈಕ್ ಗಳನ್ನು ಜೋರಾಗಿ ಕೂಗಲಾಗುತ್ತಿದೆ ನ್ಯಾಯಾಲಯದ ಆದೇಶದಂತೆ ಅದನ್ನು ನಿಲ್ಲಿಸುವ ಕೆಲಸ ಆಗಿದೆಯಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ದೀಪಾವಳಿ: ಮಂಗಳೂರು-ಮಂಡ್ಯ ಮಧ್ಯೆ ವಿಶೇಷ ರೈಲು; ಇಲ್ಲಿದೆ ದಿನಾಂಕ, ಸಮಯ
ತಾತ್ಕಾಲಿಕ ಪಟಾಕಿ ಅಂಗಡಿ ಹಾಕುವವರು ಸುರಕ್ಷತಾ ದೃಷ್ಟಿಯ ಎಲ್ಲಾ ನೀತಿ ನಿಯಮ ಪಾಲಿಸಲು ಸಿದ್ದರಿದ್ದಾರೆ. ಆದರೆ ಈವರೆಗೂ ಇಲ್ಲದ ಅವೈಜ್ಞಾನಿಕ ನೀತಿ ನಿಯಮಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ ಎಂಬುದೇ ಇವರುಗಳ ಆರೋಪ. ಒಟ್ಟಿನಲ್ಲಿ ಈ ವಿಚಾರದಲ್ಲಿ ಮುಂದೆ ಸರ್ಕಾರದ ತುರ್ತು ನಡೆ ಏನಾಗಿರುತ್ತೆ ಎಂದು ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ