ದೀಪಾವಳಿಗೆ ವಿಶೇಷ ಚೇತನ ಮಕ್ಕಳ ಕೈಯಿಂದ ತಯಾರಾಯ್ತು ಕಲರ್ಫುಲ್ ಹಣತೆ; ಮಂಗಳೂರಿನಲ್ಲಿ ಫುಲ್ ಡಿಮ್ಯಾಂಡ್
ಕತ್ತಲಿನಿಂದ ಬೆಳಕಿನೆಡೆಗೆ, ನಿತ್ಯ ಬದುಕಿನಿಂದ ಹೊಸತನದ ಬದುಕಿಗೆ ದಾರಿ ತೋರಿಸುವ ಸಂಭ್ರಮದ ಹಬ್ಬ ಈ ದೀಪಾವಳಿ. ಮಕ್ಕಳ ಪಾಲಿಗಂತೂ ದೀಪಾವಳಿ ದೀಪ ಹಚ್ಚಿ ಎಲ್ಲರೂ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸುವ ದಿವಸ. ಅದ್ರೆ, ಅದೊಂದು ಶಾಲೆಯ ಮಕ್ಕಳಿಗೆ ದೀಪಾವಳಿಯ ಸಂಭ್ರಮ ಇದ್ಯಾವುದರ ಅರಿವಿಲ್ಲದೇ ಇದ್ದರೂ ದೀಪಾವಳಿಗಾಗಿ ಹಣತೆ ತಯಾರಿಸಿದ್ದಾರೆ. ಸದ್ಯ ಆ ಹಣತೆಗಳಿಗೆ ಮಂಗಳೂರಿನಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ.
ದಕ್ಷಿಣ ಕನ್ನಡ, ನ.11: ಕೆಂಪು, ನೀಲಿ, ಹಳದಿ ಬಗೆಬಗೆಯ ಬಣ್ಣದಲ್ಲಿ ತಯಾರಾಗಿರುವ ಹಣತೆಗಳು, ಸದ್ಯ ಮಂಗಳೂರಿನ (Mangalore) ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಹಾಗಂತ ಈ ಹಣತೆ ಉಳಿದ ಹಣತೆ(Lamp)ಗಳಿಗಿಂತ ಭಿನ್ನವಾಗಿಲ್ಲ. ಬದಲಾಗಿ ಈ ಹಣತೆಯನ್ನು ಭಿನ್ನ ಸಾಮರ್ಥ್ಯ ಹೊಂದಿರುವ ವಿಶೇಷ ಚೇತನ ಮಕ್ಕಳು ತಯಾರಿಸಿದ್ದಾರೆ. ಹೌದು, ಮಂಗಳೂರಿನ ವಿಠೋಬ ಟೆಂಪಲ್ ರೋಡ್‌ನಲ್ಲಿರುವ ನವಚೇತನ ವಿಶೇಷ ಸ್ಕೂಲ್‌ನ ಮಕ್ಕಳು ತಯಾರಿಸಿರುವ ಹಣತೆಗಳು ಇದಾಗಿದೆ. ತಮ್ಮನ್ನು ತಾವೇ ನಿಭಾಯಿಸಿಕೊಳ್ಳಲಾಗದ ಈ ಮಕ್ಕಳ ಕೈಯಲ್ಲಿ ಅಂದವಾದ ಹಣತೆ ರೂಪುಗೊಂಡಿರುವುದೆ ಈ ಹಣತೆಗೆ ಇರುವ ವಿಶೇಷತೆ. ಹೀಗಾಗಿ ಈ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಜನರೂ ಕೂಡ ಇದೇ ಹಣತೆಯನ್ನು ಖರೀದಿ ಮಾಡುತ್ತಿದ್ದಾರೆ.
ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡಲು ಈ ತರಬೇತಿಗಳು
ಸುಮಾರು 20 ವರ್ಷಗಳಿಂದ ನವಚೇತನ ವಿಶೇಷ ಸ್ಕೂಲ್‌ನ ಮಕ್ಕಳಿಗೆ ಇಂತಹ ತರಬೇತಿಯನ್ನು ನೀಡಲಾಗುತ್ತಿದೆ. ಮಕ್ಕಳು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವ ಹಾಗೂ ಅವರಲ್ಲಿನ ಸಾಮರ್ಥ್ಯ ಹೊರತೆಗೆಯುವ ಕೆಲಸ ಮಾಡಲಾಗುತ್ತಿದೆ. ಈ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕರು ಇದೇ ಮಕ್ಕಳ ಮೂಲಕ ವೆಡ್ಡಿಂಗ್ ಕಾರ್ಡ್, ಸ್ವೀಟ್ ಬಾಕ್ಸ್, ಗಿಫ್ಟ್ ಬಾಕ್ಸ್, ಬಟ್ಟೆ, ಪೇಪರ್ ಬ್ಯಾಗ್ ಮೊದಲಾದವುಗಳನ್ನು ಮಾಡಿಸುತ್ತಾ ಇದ್ದಾರೆ.
ಇದನ್ನೂ ಓದಿ:Deepavali 2023: ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ, ಹಬ್ಬ ಆಚರಿಸಿ
ದೀಪಾವಳಿ ಸಮಯದಲ್ಲಿ ಈ ರೀತಿ ದೀಪಗಳನ್ನು ತಯಾರಿಸುವ ಐಡಿಯಾ ಕಳೆದ ಹತ್ತು ವರ್ಷದ ಹಿಂದೆ ಮೂಡಿತ್ತು. ಇದು ಜನರಿಗೂ ಇಷ್ಟವಾಗಿ ಖರೀದಿಸಲು ಆರಂಭ ಮಾಡಿದರು. ಇದೀಗ ಈ ಮಕ್ಕಳು ಮಾಡಿರುವ ದೀಪಗಳು ಜನರಿಗೆ ಇಷ್ಟವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ತಯಾರಿ ಮಾಡಲಾಗುತ್ತಲಿದೆ. ಮಾರುಕಟ್ಟೆಯಿಂದ ಮಣ್ಣಿನ ದೀಪ ತಂದು ಅವುಗಳಿಗೆ ಅಂದವಾದ ಬಣ್ಣ ಹಚ್ಚಿ, ಮತ್ತೆ ಮಾರುಕಟ್ಟೆಗೆ ಬಿಡಲಾಗುತ್ತದೆ. ಇದು ಮಕ್ಕಳ ಕೌಶಲ್ಯಾಭಿವೃದ್ದಿ ಜೊತೆಗೆ ಆರ್ಥಿಕ ಭದ್ರತೆ ಕೂಡ ನೀಡುತ್ತಿದೆ.
ದೀಪಾವಳಿ ಹಬ್ಬ ಹಣತೆ ಇಲ್ಲದೆ ಪೂರ್ಣವಾಗುವುದಿಲ್ಲ ಎನ್ನುವ ಕಾರಣದಿಂದ ಈ ಮಕ್ಕಳು ಬಣ್ಣದ ಹಣತೆಯ ತಯಾರಿ ಮಾಡಿದ್ದಾರೆ. ಒಂದಷ್ಟು ಜನ ಶಾಲೆಗೆ ಭೇಟಿ ನೀಡಿ ಹಣತೆ ಖರೀದಿ ಮಾಡಿದ್ರೆ, ಉಳಿದ ಹಣತೆ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿದೆ. ಎಲ್ಲಾ ಮಕ್ಕಳಲ್ಲೂ ಒಂದಲ್ಲ ಒಂದು ಸಾಮಾರ್ಥ್ಯ ಇದ್ರೂ ಅದು ಹೊರ ಬರಬೇಕು ಅಂದರೆ ಅದಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ. ನವ ಚೇತನ ಶಾಲೆಯ ಈ ವಿಶೇಷ ಚೇತನ ಮಕ್ಕಳಿಗೆ ಜನರು ನೀಡುತ್ತಿರುವ ಪ್ರೋತ್ಸಾಹವೇ ಅವರಲ್ಲಿನ ಈ ಕಲೆ ಹೊರ ಬರಲು ಕಾರಣವಾಗಿರೋದಂತು ಸತ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ