ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಾಲ್ಕು ತಲೆಮಾರು ಕಾಣುವಂತದ್ದೇ ವಿಶೇಷವಾಗಿದ್ದರೇ, ಮಂಗಳೂರು (Mangaluru) ಮೂಲದ ಅವಿಭಕ್ತ ಕುಟುಂಬವು (Joint Family) ಐದು ತಲೆಮಾರು ಕಂಡಿದೆ. ಹೌದು ಈ ಕುಟುಂಬದ ಮುತ್ತಜ್ಜಿಯ ವಯಸ್ಸು 103, ಅವರ ಮರಿಮೊಮ್ಮಗಳಿಗೆ ಮೂರು ವರ್ಷ. ಇದೀಗ ಈ ಪುಟ್ಟ ಬಾಲಕಿ ಸೇರಿಂದತೆ ಐದು ತಲೆಮಾರು ಮಹಿಳೆಯರು ಇತ್ತೀಚಿಗೆ ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ (MSSC) ಅಡಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ.
ಆಗಸ್ಟ್ 3 ರಂದು ಮಂಗಳೂರು ಸಮೀಪದ ಕಿನ್ನಿಗೋಳಿ ಉಪ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಭಾರತದ ಏಕೈಕ ಐದು ತಲೆಮಾರಿನ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುಪ್ಪೆಪದವು ನಿವಾಸಿ ಸೀತಾ ಪೂಜಾರ್ತಿ (103), ಕೈಕಂಬದಲ್ಲಿ ವಾಸವಾಗಿರುವ ಅವರ ಪುತ್ರಿ ಸುಂದರಿ ಪೂಜಾರ್ತಿ (72), ಉಲ್ಲೈ ಬೇತು ನಿವಾಸಿಯಾಗಿರುವ ಯಮುನಾ ಪೂರ್ಜಾರ್ತಿ (50) ಸೀತಾ ಪೂಜಾರ್ತಿ ಅವರ ಮೊಮ್ಮಗಳು. ಸೀತಾ ಪೂಜಾರ್ತಿ ಅವರ ಮರಿ ಮೊಮ್ಮಗಳು ಪವಿತ್ರಾ ವಿ ಅಮೀನ್ (33) ಮತ್ತು ಅವರ ಗಿರಿ ಮೊಮ್ಮಗಳು ದಿತ್ಯಾ ವಿ ಅಮೀನ್ (3). ಇವರು ಆರ್ಥಿಕ ಸಬಲೀಕರಣದ ಉದ್ದೇಶದಿಂದ ಎಮ್ಎಸ್ಎಸ್ಸಿ ಅಡಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ.
ಈ ಬಗ್ಗೆ ಅಂಚೆ ಕಛೇರಿ ಸಿಬ್ಬಂದಿ ಕೆ ರಘುನಾಥ್ ಕಾಮತ್ ಮಾತನಾಡಿ ಮನೆ ಮನೆಗೆ ತೆರಳಿ ನಾನು ಈ ಯೋಜನೆ ಬಗ್ಗೆ ತಿಳಿಸುತ್ತಿದ್ದೇನೆ. ಪವಿತ್ರಾ ಅವರ ಮನೆಗೆ ಕೂಡ ಹೋಗಿ ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿಸಿದೆ. ಆಗ ಅವರು ಖಾತೆ ತೆರೆಯಲು ನಿರ್ಧರಿಸಿದರು. ಅಲ್ಲದೇ ತಮ್ಮ ಕುಟುಂಬದ ಇತರ ಮಹಿಳೆಯರ ಬಗ್ಗೆಯೂ ತಿಳಿಸಿ ಮತ್ತು ಅವರ ಎಲ್ಲ ವಿವರಗಳನ್ನು ನನಗೆ ಕೊಟ್ಟರು. ಇದೀಗ ಇವರ ಖಾತೆಗಳನ್ನು ತೆರೆದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರು: ಪಕ್ಕದ ಮನೆಯ ಬಾತ್ರೂಮ್ನಲ್ಲಿ ಮೊಬೈಲ್ ಇಟ್ಟು ಯುವತಿಯ ಅಣ್ಣನ ಕೈ ಸಿಕ್ಕಿಬಿದ್ದ ಯುವಕ
ಹೆಚ್ಚಿನ ಬಡ್ಡಿದರ ಮತ್ತು ಉಳಿತಾಯದ ಬಗ್ಗೆ ನಾನು ಕೇಳಿದ ನಂತರ, ನನ್ನ ಕುಟುಂಬದ ಎಲ್ಲ ಮಹಿಳೆಯರು ಯೋಜನೆಯ ಲಾಭ ಪಡೆಯಬೇಕೆಂದು ನಾನು ಬಯಸಿದೆ. ಅಂಚೆ ನೌಕರರು 40 ಕಿಮೀ ದೂರದಲ್ಲಿರುವ ನನ್ನ ಮುತ್ತಜ್ಜಿಯನ್ನು ಅಂಚೆ ಕಚೇರಿಗೆ ಕರೆತರಲು ನಮಗೆ ಸಹಾಯ ಮಾಡಿದರು. ಎಂದು ಪವಿತ್ರಾ ಹೇಳಿದರು.
ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಮಾತನಾಡಿ, ಎಂಎಸ್‌ಎಸ್‌ಸಿ ಮೂಲಕ ಭಾರತ ಅಂಚೆ ಒಂದೇ ಬಾರಿಗೆ ಐದು ತಲೆಮಾರುಗಳನ್ನು ತಲುಪಿದೆ. ಉಳಿತಾಯ ಖಾತೆ ತೆರೆಯುವಂತೆ ಮನವೊಲಿಸಿದ ರಘುನಾಥ್ ಕಾಮತ್ ಅವರಿಗೆ ಇದರ ಶ್ರೇಯ ಸಲ್ಲುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ