ಮಂಗಳೂರು: ಜೆಸಿಬಿ ಬಳಸಿ ಎಟಿಎಂ ಕಳವು ಮಾಡಲು ಯತ್ನ, ಪೊಲೀಸರ ಕಂಡು ಪರಾರಿಯಾದ ಆರೋಪಿಗಳು
ಪಡುಬಿದ್ರೆಯಲ್ಲಿ ಕಳವು ಮಾಡಿದ್ದ ಜೆಸಿಬಿ ಬಳಸಿ ಎಟಿಎಂ ಬಳಿ ಬಂದಿದ್ದ ಖದೀಮರು, ಎಟಿಎಂ ಎತ್ತುವ ಸಂದರ್ಭ ಬ್ಯಾಂಕ್ನ ಸೆಂಟ್ರಲ್ ಸರ್ವಲೆನ್ಸ್ ಸಿಸ್ಟಂಗೆ ಮಾಹಿತಿ ರವಾನೆಯಾಗಿದೆ. ಆಮೇಲೇನಾಯ್ತು?
ಮಂಗಳೂರು: ಜೆಸಿಬಿ ಬಳಸಿ ಎಟಿಎಂ ಕಳವು ಮಾಡಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ ಘಟನೆ ಮಂಗಳೂರು (Mangaluru) ಹೊರವಲಯದ ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಗುರುವಾರ ತಡರಾತ್ರಿ ನಡೆದೆ. ಕದ್ದ ಜೆಸಿಬಿ ಬಳಸಿ ಎಟಿಎಂ (ATM) ಹೊತ್ತೊಯ್ಯಲು ದುಷ್ಕರ್ಮಿಗಳು ಯತ್ನಿಸಿದ್ದರು. ಗುರುವಾರ ತಡರಾತ್ರಿ ದುಷ್ಕರ್ಮಿಗಳು ಸುರತ್ಕಲ್ನ ಇಡ್ಯಾ ವಿದ್ಯಾದಾಯಿನಿ ಶಾಲೆ ಬಳಿ ದಿ ಸೌತ್ ಇಂಡಿಯನ್ ಬ್ಯಾಂಕ್ನ ಎಟಿಎಂ ಹೊತ್ತೊಯ್ಯಲು ಯತ್ನಿಸಿದ್ದರು.
ಪಡುಬಿದ್ರೆಯಲ್ಲಿ ಕಳವು ಮಾಡಿದ್ದ ಜೆಸಿಬಿ ಬಳಸಿ ಎಟಿಎಂ ಬಳಿ ಬಂದಿದ್ದ ಖದೀಮರು, ಎಟಿಎಂ ಎತ್ತುವ ಸಂದರ್ಭ ಬ್ಯಾಂಕ್ನ ಸೆಂಟ್ರಲ್ ಸರ್ವಲೆನ್ಸ್ ಸಿಸ್ಟಂಗೆ ಮಾಹಿತಿ ರವಾನೆಯಾಗಿದೆ. ಕೂಡಲೇ ಸರ್ವಲೆನ್ಸ್ ಸಿಸ್ಟಂ ಸಿಬ್ಬಂದಿ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ದುಷ್ಕರ್ಮಿಗಳು ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಎಟಿಎಂ ಒಡೆಯಲು ಯತ್ನಿಸಿದ್ದರು. ಎಟಿಎಂನಲ್ಲಿ ಸುಮಾರು 3.5 ಲಕ್ಷ ರೂ. ನಗದು ಇತ್ತು ಎನ್ನಲಾಗಿದೆ. ಎಟಿಎಂನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿ ಬಳಿ ಅಕ್ರಮ ಮರಳು ದಂಧೆ ಮೇಲೆ ಪೊಲೀಸ್ ದಾಳಿ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿ ಬಳಿ ಅಕ್ರಮ ಮರಳು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸ್ ತಂಡ ಆಗಸ್ಟ್ 4 ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ದಾಳಿ ನಡೆಸಿದೆ. ಸ್ಥಳದಿಂದ ಹತ್ತು ಲೋಡ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಡಲ್ಕೊರೆತ ತಡೆಗೆ ನೈಸರ್ಗಿಕ ಪರಿಹಾರ; ಸರ್ಕಾರ ಕಂಡುಕೊಂಡಿರುವ ಹೊಸ ವಿಧಾನ ಇಲ್ಲಿದೆ ನೋಡಿ
ಈ ಸಂಬಂಧ ಕೋಡಿ ನಿವಾಸಿಗಳಾದ ಉಮ್ಮರ್, ನೌಫಲ್ ಮತ್ತು ಹನೀಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ