ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನೈತಿಕ ಪೊಲೀಸ್ ಗಿರಿ ಪ್ರಕರಣ: ಮೂವರ ಬಂಧನ
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರಿದಿದೆ. ಮುಸ್ಲಿಂ ಯುವಕನ ಆಟೋದಲ್ಲಿ ವಿದ್ಯಾರ್ಥಿನಿಯೊಬ್ಬಳು ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಮೂವರು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ ನಡೆಸಿದ್ದ ಪ್ರಕರಣ ನಡೆದಿತ್ತು.
ಮಂಗಳೂರು, ಆಗಸ್ಟ್ 5: ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಆಟೋದಲ್ಲಿ ಧರ್ಮಸ್ಥಳ (Dharmasthala) ಬಸ್ ನಿಲ್ದಾಣಕ್ಕೆ ಕರೆತಂದ ಮುಸ್ಲಿಂ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಆಟೋ ಚಾಲಕ ಮೊಹಮ್ಮದ್ ಆಶೀಕ್ ನೀಡಿದ ದೂರಿನ ಮೇರೆಗೆ ಅವಿನಾಶ್, ನಂದೀಪ್ ಹಾಗೂ ಅಕ್ಷತ್ ಉಪ್ಪಿನಂಗಡಿ ಎಂಬವರನ್ನು ಬಂಧಿಸಲಾಗಿದೆ.
ಬೆಂಗಳೂರು ಮೂಲದ ಹಿಂದೂ ವಿದ್ಯಾರ್ಥಿನಿಯೊಬ್ಬಳು ಆಗಸ್ಟ್ 2 ರ ರಾತ್ರಿ ಊರಿಗೆ ತೆರಳಲು ಮೊಹಮ್ಮದ್ ಆಶೀಕ್ ಎಂಬಾತನ ಆಟೋದಲ್ಲಿ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಈ ವೇಳೆ ಅಡ್ಡಗಡ್ಡಿದ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ್ದರು. ಘಟನೆ ನಂತರ ಪೊಲೀಸ್ ಠಾಣೆಗೆ ತೆರಳಿದ ಆಶೀಕ್, ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಆಗಲಿದೆ ಧರ್ಮಸ್ಥಳದ ಸೌಜನ್ಯ ಸಾವಿನ ಕಥೆ? ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ
ಆಶೀಕ್ ದೂರಿನ ಅನ್ವಯ ಧರ್ಮಸ್ಥಳ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 143, 147, 341, 323, 307, 395, 153(ಎ), 504, 506ರ ಜೊತೆಗೆ 149ರ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಅದರಂತೆ ಮೂವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ