ಮಂಗಳೂರು ವಿಮಾನ ನಿಲ್ದಾಣ; ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ

|

Updated on: Apr 13, 2023 | 8:08 PM

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆ 2022-23ನೇ ಹಣಕಾಸು ವರ್ಷದಲ್ಲಿ ಶೇ 76ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ 17,94,054 ಮಂದಿ ಪ್ರಯಾಣಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ; ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Follow us on

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mangaluru International Airport) ಪ್ರಯಾಣಿಕರ ಸಂಖ್ಯೆ 2022-23ನೇ ಹಣಕಾಸು ವರ್ಷದಲ್ಲಿ ಶೇ 76ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ 17,94,054 ಮಂದಿ ಪ್ರಯಾಣಿಸಿದ್ದಾರೆ. 2021-22ನೇ ಹಣಕಾಸು ವರ್ಷದಲ್ಲಿ 10,16,559 ಮಂದಿ ಪ್ರಯಾಣಿಸಿದ್ದರು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಒಟ್ಟಾರೆಯಾಗಿ 17.94 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದು ಈ ಪೈಕಿ 12.08 ಲಕ್ಷ ಮಂದಿ ದೇಶೀಯ ಪ್ರಯಾಣಿಕರಾಗಿದ್ದಾರೆ. 5.86 ಲಕ್ಷ ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದು, ಮುಖ್ಯವಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸಿದವರು ಎಂದು ಅವರು ಮಾಹಿತಿ ನೀಡಿದ್ದಾರೆ.

2022-23ನೇ ಹಣಕಾಸು ವರ್ಷದಲ್ಲಿ ವಿಮಾನಗಳ ಕಾರ್ಯಾಚರಣೆಯಲ್ಲಿಯೂ ಶೇ 42ರಷ್ಟು ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ 14,457 ವಿಮಾನಗಳು ಸಂಚರಿಸಿದ್ದು, 10,060 ದೇಶೀಯ ವಿಮಾನಗಳಾಗಿದ್ದರೆ 4,150 ಅಂತಾರಾಷ್ಟ್ರೀಯ ವಿಮಾನಗಳಾಗಿವೆ. 265 ಜನರಲ್ ಏವಿಯೇಷನ್ ಅಥವಾ ಚಾರ್ಟರ್ಡ್ ವಿಮಾನಗಳು ಹಾರಾಟ ನಡೆಸಿವೆ ಎಂದು ಅವರು ತಿಳಿಸಿದ್ದಾರೆ. 2021-22ರಲ್ಲಿ 10,212 ವಿಮಾನಗಳು ಸಂಚರಿಸಿದ್ದು, 7,792 ದೇಶೀಯ ವಿಮಾನಗಳಾಗಿದ್ದರೆ 2,122 ಅಂತಾರಾಷ್ಟ್ರೀಯ ವಿಮಾನಗಳಾಗಿದ್ದವು.

2023ರ ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್​ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 7ರಷ್ಟು ಹೆಚ್ಚಳವಾಗಿದೆ. ಫೆಬ್ರುವರಿಯಲ್ಲಿ 1,34,583 ಮಂದಿ ಪ್ರಯಾಣಿಸಿದ್ದರೆ ಮಾರ್ಚ್​ನಲ್ಲಿ 1,43,788 ಮಂದಿ ಪ್ರಯಾಣಿಸಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್​ ದಾಟಿದ ತಾಪಮಾನ, ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಸೂಚನೆ

ವಿಮಾನಯಾನ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಮಾರ್ಚ್ ಅನ್ನು ಸುಗ್ಗಿಯ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಫೆಬ್ರವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 7ರಷ್ಟು ಹೆಚ್ಚಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ವಿಮಾನ ನಿಲ್ದಾಣವು ವಿಮಾನಯಾನ ಸಂಸ್ಥೆಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಬೇಡಿಕೆಗೆ ಅನುಗುಣವಾಗಿ ವಿಮಾನಗಳ ಹೆಚ್ಚಳ, ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಹೆಚ್ಚುವರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದೂ ವಕ್ತಾರರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ