ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಶಕ್ತಿ ಪ್ರದರ್ಶನ, ಪಕ್ಷೇತರ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ
ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದೇ ತಡ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಉಡುಪಿ ತಾಲೂಕಿನಲ್ಲಿ ರಘಪತಿ ಭಟ್ ಅಸಮಾಧಾನಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಸುಳ್ಯದಲ್ಲೂ ಬಿಜೆಪಿಗೆ ಬಿಸಿ ತಟ್ಟುವ ಲಕ್ಷಣ ಕಾಣುತ್ತಿದೆ.
ಮಂಗಳೂರು: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದೇ ತಡ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಉಡುಪಿ ತಾಲೂಕಿನಲ್ಲಿ ಶಾಸಕ ರಘಪತಿ ಭಟ್ ಅಸಮಾಧಾನಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಸುಳ್ಯದಲ್ಲೂ ಬಿಜೆಪಿಗೆ ಬಿಸಿ ತಟ್ಟುವ ಲಕ್ಷಣ ಕಾಣುತ್ತಿದೆ. ಪುತ್ತೂರಿನಲ್ಲಿ ಶಾಸಕ ಸಂಜೀವ ಮಠಂದೂರು (Sanjeeva Matandoor) ವಿರುದ್ಧ ತೊಡೆತಟ್ಟಿದ್ದ ಅರುಣ್ ಪುತ್ತಿಲ (Arun Kumar Puthila) ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಬಾರಿ ಪುತ್ತಿಲಗೆ ಬಿಜೆಪಿ ಮಣೆ ಹಾಕಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಅಚ್ಚರಿ ಎಂಬಂತೆ ಆಶಾ ತಿಮ್ಮಪ್ಪ ಗೌಡ (Asha Thimmappa Gowda) ಅವರಿಗೆ ಟಿಕೆಟ್ ಘೋಷಣೆಯಾಗಿದ್ದು, ಇದು ಪುತ್ತಿಲ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪುತ್ತೂರು ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಹಿಂದೂ ಸಂಘಟನೆ ಮುಖಂಡ ಅರುಣ್ ಪುತ್ತಿಲ ಕೋಟೆಚಾ ಸಭಾಂಗಣದಲ್ಲಿ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಹಾಲ್ ತುಂಬಾ ಸೇರಿದ್ದ ಬೆಂಬಲಿಗರು ಟಿಕೆಟ್ ನೀಡದ್ದಕ್ಕೆ ಆಕ್ರೋಶ ಹೊರಹಾಕಿದರಲ್ಲದೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತನಾಡಿದ ಅರುಣ್ ಪುತ್ತಿಲ, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸುಳ್ಯದಲ್ಲಿ ಅಂಗಾರ ಮನವೋಲಿಕೆ ಆಗುತ್ತಾ?
ಇತ್ತ ಸುಳ್ಯ ತಾಲೂಕಿನಲ್ಲಿ ಟಿಕೆಟ್ ಕಳೆದುಕೊಂಡ ಸಚಿವ ಎಸ್ ಅಂಗಾರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಸುಳ್ಯದಲ್ಲಿ ಮೊದಲ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಅಂಗಾರ ಅವರು ಬಳಿಕ 6 ಬಾರಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಇದೀಗ ಇವರ ಬದಲಿಗೆ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದರಿಂದ ಅಸಮಾಧಾನಗೊಂಡ ಅಂಗಾರ, ನನ್ನ ಬಳಿ ಮಾತುಕತೆ ನಡೆಸದೇ ಈ ರೀತಿ ನಡೆದುಕೊಂಡದ್ದು ಸರಿಯಲ್ಲ. ನಾನು ಪಕ್ಷ, ಪಕ್ಷದ ನಾಯಕರನ್ನು ದೂರುವುದಿಲ್ಲ. ನನ್ನ ನಡೆಯೇ ನನಗೆ ಮುಳ್ಳಾಯಿತು. ಇಲ್ಲಿಗೆ ರಾಜಕೀಯ ಸಾಕು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಬಗ್ಗೆ ಮಾತನಾಡಿದ ಸುಳ್ಯ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಸಚಿವ ಅಂಗಾರ ಅವರನ್ನು ಹೋಗಿ ಭೇಟಿಯಾಗುತ್ತೇನೆ. ಅಂಗಾರ ರಾಜಕೀಯ ನಿವೃತ್ತಿ ಘೋಷಣೆ ವಿಚಾರವನ್ನು ಸಂಘ, ಪಕ್ಷದ ಹಿರಿಯರು ನಿಭಾಯಿಸುತ್ತಾರೆ. ಅವರ ಸಪೋರ್ಟ್ ಇದ್ದೆ ಇರುತ್ತದೆ. ಬೇಸರದಲ್ಲಿ ಆ ರೀತಿ ಹೇಳಿರಬಹುದು. ಖಂಡಿತಾ ಅವರ ಸಪೋರ್ಟ್ ಇದೆ ಎಂಬ ಭರವಸೆಯಿದೆ ಎಂದರು.
ಇದನ್ನೂ ಓದಿ: ಬಿಜೆಪಿಯ ಮತ್ತೋರ್ವ ನಾಯಕ ನಿವೃತ್ತಿ ಘೋಷಣೆ: ಸಕ್ರಿಯ ರಾಜಕಾರಣಕ್ಕೆ ಸಚಿವ ಎಸ್ ಅಂಗಾರ ಗುಡ್ ಬೈ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಾತನಾಡಿದ ಅವರು, ಕ್ಷೇತ್ರದ ಅಭ್ಯರ್ಥಿಯಾಗಿ ನನ್ನನ್ನು ಪಕ್ಷ ಮತ್ತು ಸಂಘಟನೆ ಆಯ್ಕೆ ಮಾಡಿದೆ. ಮುಂದೆ ಅವರ ಅನುಗ್ರಹ, ಆಶೀರ್ವಾದ, ಮಾರ್ಗದರ್ಶನದಲ್ಲಿ ಒಳ್ಳೆ ಕೆಲಸ ಮಾಡುತ್ತೇನೆ. ಟಿಕೇಟ್ ಸಿಗುವ ನೀರಿಕ್ಷೆ ಇರಲಿಲ್ಲ. ಅನೀರಿಕ್ಷಿತವಾಗಿ ಟಿಕೇಟ್ ಸಿಕ್ಕಿದೆ. ಸಾಮಾನ್ಯ ಕಾರ್ಯಕರ್ತೆಯಾದ ನನ್ನ ಕಾರ್ಯವೈಖರಿ ಗಮನಿಸಿ ಅವಕಾಶ ಕೊಟ್ಟಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಲು ಪ್ರಯತ್ನ ಪಡುತ್ತೇನೆ. ಸರ್ಕಾರ, ಶಾಸಕ ಸಚಿವರು ಮಾಡಿದ ಸಾಧನೆಯನ್ನು ಜನರ ಮುಂದಿಟ್ಟು ಪ್ರಚಾರ ಕಾರ್ಯ ನಡೆಸುತ್ತೇನೆ ಎಂದರು.
ಬಿಜೆಪಿಯ ಭಿನ್ನಮತ ಕಾಂಗ್ರೆಸ್ಗೆ ಲಾಭ?
ಬಿಜೆಪಿಯ ಭದ್ರಕೋಟೆ ಕರಾವಳಿ ಭಾಗದಲ್ಲಿ ಬಿಜೆಪಿಯೊಳಗೆ ಭಿನ್ನಮತ ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಲಾಭವಾಗುವ ಸಾಧ್ಯತೆ ಇದೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಹಿಂದೂ ಸಂಘಟನೆಗಳ ಮತ ಒಡೆದು ಬಿಜೆಪಿ ಅಭ್ಯರ್ಥಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಸುಳ್ಯದಲ್ಲಿ ಅಂಗಾರ ಮುನಿಸುಗೊಂಡಿದ್ದಾರೆ. ಪ್ರಚಾರಕ್ಕೂ ಹೋಗುವುದಿಲ್ಲ ಎಂದಿದ್ದಾರೆ. ಸದ್ಯ ಈ ಬೆಳವಣಿಗೆಯನ್ನು ಬಿಜೆಪಿ ಯಾವ ರೀತಿ ನಿಭಾಯಿಸಿಕೊಂಡು ಹೋಗುತ್ತದೆ ಎಂಬುದನ್ನು ನೋಡಬೇಕಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:29 pm, Wed, 12 April 23