ಮಂಗಳೂರು, ನವೆಂಬರ್ 17: ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರು ಒಂದು ಹಳ್ಳಿಯ ಸೊಸೈಟಿ ಅಧ್ಯಕ್ಷರು. ಅಹಮದಾಬಾದ್ ಜಿಲ್ಲಾ ಬ್ಯಾಂಕ್, ಗುಜರಾತ್ ಅಫೆಕ್ಸ್ ಬ್ಯಾಂಕ್ ನಿರ್ದೇಶಕರು. ಸಹಕಾರ ಇಲಾಖೆಯ ಎಲ್ಲಾ ವಿಚಾರಗಳು ಸಹ ಅಮಿತ್ ಶಾಗೆ ಗೊತ್ತಿದೆ. ಅಂಥವರು ಸಹಕಾರ ಇಲಾಖೆ ಸಚಿವರಾಗಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಅಮಿತ್ ಶಾರನ್ನು ಸಚಿವ ಕೆ.ಎನ್.ರಾಜಣ್ಣ ಹಾಡಿಹೊಗಳಿದ್ದಾರೆ. ನಗರದಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಸಹಕಾರ ಸಚಿವರಾದ ಮೊದಲ ದಿನವೇ ನಾನು ಸ್ವಾಗತಿಸಿದ್ದೇನೆ. ಪಕ್ಷದ ದೃಷ್ಟಿಯಲ್ಲಿ ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಆದರೆ ನಾನೊಬ್ಬ ಸಹಕಾರ ಇಲಾಖೆ ಸಚಿವನಾಗಿ ಸ್ವಾಗತಿಸಿದ್ದೇನೆ ಎಂದು ಹೇಳಿದ್ದಾರೆ.
ಯಾರೋ ಗೊತ್ತಿಲ್ಲದ ಸಚಿವರು ಇಲಾಖೆಗೆ ಬಂದಾಗ ಪಾಠ ಮಾಡಿ ತಿಳಿಸಬೇಕು. ಅಷ್ಟೊತ್ತಿಗೆ ಅವರ ಅಧಿಕಾರವಧಿ ಮುಗಿದು ಹೋಗಿರುತ್ತೆ. ಅಮಿತ್ ಶಾ ಬಂದಿದ್ದರಿಂದ ಅನುಕೂಲವಾಗುತ್ತೆ ಅಂತಾ ಅವತ್ತೇ ಸ್ವಾಗತಿಸಿದ್ದೆ. ಸಹಕಾರಿ ಆಂದೋಲನಕ್ಕೆ ಪೂರಕ ಸಲಹೆ ನೀಡಿದರೆ ನಾವು ತೆಗೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ತುಮಕೂರು ಲೋಕಸಭೆ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದೇನೆ: ಸಚಿವ ಕೆಎನ್ ರಾಜಣ್ಣ
ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಅಂತಾ ನಾನು ಹೇಳಿಲ್ಲ, ಅಸಮಾಧಾನ ಇದ್ದೇ ಇರುತ್ತದೆ. ಒಂದು ಮನೆಯಲ್ಲಿ ಅಸಮಾಧಾನ ಇರಲ್ವಾ. ಆದರೆ ಪಕ್ಷಕ್ಕೆ ಮಾರಕವಾಗುವ ರೀತಿಯಲ್ಲಿ ಅಸಮಾಧಾನ ಇಲ್ಲ. ಸಾತ್ವಿಕ ವಿರೋಧ ಅಷ್ಟೇ. ಇನ್ನೂ ಯಾರ್ಯಾರು ಕಾಂಗ್ರೆಸ್ಗೆ ಬರುತ್ತಾರೆ ಅಂತಾ ಮುಂದೆ ನೋಡಿ ಎಂದು ಹೇಳಿದ್ದಾರೆ.
ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ಅಂದರೆ ಭಯ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಭಯವಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಕರ್ನಾಟಕದ ಬಗ್ಗೆ ಮೋದಿ ಮಾತಾಡ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನ ಜಾರಿಗೆ ತಂದಿದೆ. ಮೋದಿ ಕೂಡ ಪಂಚರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:10 pm, Fri, 17 November 23