ಮಂಗಳೂರು: ರಾಜ್ಯದಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳು ದುಸ್ಥಿತಿಯಿಂದ ಕೂಡಿವೆ. ಮೇಲ್ಛಾವಣಿ, ಕಂಬಗಳು ಆಗಲೋ ಈಗಲೋ ಬೀಳುವಂತಿವೆ. ಯಾವ ಸರ್ಕಾರ ಬಂದರೂ ಸರ್ಕಾರಿ ಶಾಲೆಗಳತ್ತ ಕಣ್ಣೆತ್ತಿ ಸಹಿತ ನೋಡುವುದಿಲ್ಲ. ಇನ್ನು ಜನಪ್ರತಿನಿಧಿಗಳಂತು ತಮ್ಮ ಮನೆಗಳನ್ನು ನವೀಕರಣಗೊಳುಸುತ್ತಾರೆ ಹೊರತು ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳನ್ನಲ್ಲ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡೇರಿಯ ಸರಕಾರಿ ಪ್ರಾಥಮಿಕ ಶಾಲೆ (Government School) ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, ದುಸ್ಥಿತಿಯಿಂದ ಕೂಡಿದೆ. ಇದರಿಂದ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಬಿಸಿಯೂಟ ತಯಾರಿಸುವ ಅಡುಗೆ ಮನೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ.
ಇನ್ನು ಈ ಅಡುಗೆ ಕೋಣೆ ಸಹಿತ 100 ಚದರ ಅಡಿಗಿಂತ ಕಡಿಮೆಯಿದೆ. ನಾಲ್ಕು ದಶಕಗಳಷ್ಟು ಹಳೆಯದಾದ ಶಾಲಾ ಕಟ್ಟಡದ ಬ್ಲಾಕ್‌ಗಳು ಶಿಥಿಲಗೊಂಡಿವೆ ಮತ್ತು ಗೋಡೆಗಳಿಗೆ ಮರದ ದಿಮ್ಮಿಗಳಿಂದ ಆಸರೆ ನೀಡಲಾಗಿದೆ. ಇನ್ನು ಸಂಪೂರ್ಣ ಹಾನಿಗೀಡಾಗಿದ್ದ ಮತ್ತೊಂದು ಕೊಠಡಿಯನ್ನು ಸಣ್ಣಪುಟ್ಟ ದುರಸ್ತಿಗೊಳಿಸಿ ಅಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ ಎಂದು ಎಸ್‌ಡಿಎಂಸಿ ಸದಸ್ಯರು ತಿಳಿಸಿದರು.
ಕಳೆದ ಮಾರ್ಚ್ನಲ್ಲಿ ನಮ್ಮ ಶಾಲೆಯ ದುರಸ್ತಿಗೆ ಸರ್ಕಾರ ಹಣ ಮಂಜೂರು ಮಾಡಿತ್ತು. ಆದರೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಲಿಲ್ಲ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹಣ ವಾಪಸ್ ಹೋಗಿದೆ. ಕಳೆದ ವರ್ಷ ತರಗತಿಯೊಂದರ ಗೋಡೆಗಳು ಹಾನಿಗೊಳಗಾಗಿದ್ದವು. ಅದಕ್ಕೂ ಮುನ್ನ ಇನ್ನೊಂದು ತರಗತಿ ಕೊಠಡಿ ಬಳಕೆಗೆ ಯೋಗ್ಯವಲ್ಲ ಎಂದು ಇಲಾಖೆ ಘೋಷಿಸಿ ಮುಚ್ಚಿತ್ತು ಎಂದು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಡಿ.ಕೆ ದಯಾನಂದ ಹೇಳಿದರು.
ಇದನ್ನೂ ಓದಿ: ಮಂಗಳೂರು: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಒಂದೇ ಕುಟುಂಬದ ಐದು ತಲೆಮಾರು
ಇದರಿಂದ ತರಗತಿಗಳಿಗೆ ಬೇರೆ ಸ್ಥಳ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳನ್ನು ಅಡುಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. ಸಂಪೂರ್ಣ ಹಾನಿಗೊಳಗಾದ ತರಗತಿಯನ್ನು ಸರಿಪಡಿಸಿ, ನೀರು ಸೋರಿಕೆಯಾಗದಂತೆ ತಾಡಪಲ್ ಹಾಕಿದ್ದೇವೆ. ಹೀಗಾಗಿ ಅಡುಗೆ ಇಲ್ಲೇ ತಯಾರಿಸಲಾಗುತ್ತಿದೆ. ನಂತರ ಒಂದರಿಂದ ಐದನೇ ತರಗತಿವರೆಗಿನ ಸುಮಾರು 12 ಮಕ್ಕಳನ್ನು ಅಡುಗೆ ಮನೆಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಳೆಗಾಲದಲ್ಲಿ ತಂಪಾದ ನೆಲದ ಮೇಲೆ ಕುಳಿತು ಪಾಠ ಕೇಳುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಖಾಯಂ ಶಿಕ್ಷಕರು ಮಾತ್ರ ಕಷ್ಟಗಳ ನಡುವೆಯೂ ಮಕ್ಕಳಿಗೆ ಕಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ ಎಂದರು.
ದಯಾನಂದ ಅವರು ಶಾಲೆಯ ದುರವಸ್ಥೆಯನ್ನು ನೋಡಿ ಹತ್ತಿರದಲ್ಲಿರುವ ಮತ್ತೊಂದು ಶಾಲೆಯಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವಂತೆ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರಿ ಶಾಲೆ ದುರಸ್ತಿಯಾಗುವವರೆಗು ವಿದ್ಯಾರ್ಥಿಗಳಿಗೆ ತಮ್ಮ ಕ್ಯಾಂಪಸ್ನಲ್ಲಿ ಪಾಠ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಎಸ್‌ಡಿಎಂಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಸುಳ್ಯದ ಬ್ಲಾಕ್ ಶಿಕ್ಷಣಾಧಿಕಾರಿ ಬಿ.ಇ.ರಮೇಶ್ ಮಾತನಾಡಿ, ಈ ಕುರಿತು ಇತ್ತೀಚೆಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿದೆ. “ಸದಸ್ಯರ ಪ್ರಕಾರ, ಶಾಲಾ ಕಟ್ಟಡವನ್ನು ದುರಸ್ತಿ ಮಾಡಲು ಸರ್ಕಾರವು ಹಣವನ್ನು ಮಂಜೂರು ಮಾಡಿ ಮತ್ತು ಬಿಡುಗಡೆ ಮಾಡಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಅದು ವಾಪಸ್ ಆಗಿದೆ. ಹಣ ಮರು ಮಂಜೂರು ಮಾಡಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.