ಪ್ರತ್ಯೇಕ ಪ್ರಕರಣ: 6 ಜನ ಗಾಂಜಾ ಪೆಡ್ಲರ್ ಮತ್ತು ವ್ಯಸನಿಗಳನ್ನು ಬಂಧಿಸಿದ ದಕ್ಷಿಣ ಕನ್ನಡ ಪೊಲೀಸರು
ಪ್ರತ್ಯೇಕ ಪ್ರಕರಣದಲ್ಲಿ ಆರು ಜನ ಗಾಂಜಾ ಸರಬರಾಜು ಮತ್ತು ವ್ಯಸನಿಗಳನ್ನು ಮಂಗಳೂರು, ಕಾರ್ಕಳಾ ಮತ್ತು ಮಣಿಪಾಲ್ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು/ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ ಆರು ಜನ ಗಾಂಜಾ (Ganja) ಸರಬರಾಜು ಮತ್ತು ವ್ಯಸನಿಗಳನ್ನು ಮಂಗಳೂರು (Mangaluru), ಕಾರ್ಕಳಾ ಮತ್ತು ಮಣಿಪಾಲ್ (Manipal) ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ತಮೀಮ್ (35), ಮಹಮ್ಮದ್ ಶಾಫಿ (25), ವೇಲುಮುರುಗನ್, ಗಿರೀಶ್, ಯತೀಶ್ ಕುಮಾರ್ ಪೈ (24) ಮತ್ತು ಶರಣ್ (26) ಬಂಧಿತ ಆರೋಪಿಗಳು.
ಮಲ್ಲೂರು ಬದ್ರಿಯಾ ನಗರದ ಬಳಿ ಗಾಂಜಾ ಸೇವಿಸಿದ ಆರೋಪದಡಿ ಮಲ್ಲೂರು ಬದ್ರಿಯಾ ನಗರದ ನಿವಾಸಿ ಮಹಮ್ಮದ್ ತಮೀಮ್ (35) ಹಾಗೂ ಕಸಬಾ ಬೆಂಗ್ರೆ ನಿವಾಸಿ ಮಹಮ್ಮದ್ ಶಾಫಿ (25) ಎಂಬುವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಠಾಣೆ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜಾ ಮತ್ತು ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಮಾಫಿಯಾ ವಿರುದ್ಧ ಮುಂದುವರಿದ ಮಂಗಳೂರು ಪೊಲೀಸರ ಕಾರ್ಯಾಚರಣೆ; ಆರೋಪಿಯ ಬಂಧನ
ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನೆಲ್ಲಿಗುಡ್ಡೆ ಕ್ರಾಸ್‌ರೋಡ್ ನಿವಾಸಿ ವೇಲುಮುರುಗನ್ ಮತ್ತು ಗಿರೀಶ್ ಎಂಬುವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಪಿಎಸ್ ಐ ಸಂದೀಪ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇದುತ್ತಿದ್ದ ಯತೀಶ್ ಕುಮಾರ್ ಪೈ (24) ಮತ್ತು ಶರಣ್ (26) ಎಂಬುವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:19 am, Fri, 11 August 23