ಮಂಗಳೂರು, (ನವೆಂಬರ್ 14): ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ಮಂಗಳೂರಿನ 23 ವರ್ಷದ ಉಪನ್ಯಾಸಕಿ ಮೃತಪಟ್ಟಿದ್ದಾರೆ. ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರಿಗೆ ಕೆಲವು ದಿನಗಳ ಹಿಂದೆ ಊಟ ಮಾಡಿದ ಬಳಿಕ ಅವರ ದೇಹದಲ್ಲಿ ಅಲರ್ಜಿ ಕಾಣಿಸಿಕೊಂಡಿತ್ತು. ಬಳಿಕ ಇದು ಉಲ್ಬಣಗೊಂಡ ಪರಿಣಾಮ ಮೆದುಳಿಗೆ ಹಾನಿಯಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಯುವತಿಯ ರಕ್ಷಣೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಕೂಡ ಫಲಕಾರಿಯಾಗದೇ ಅವರು ಇಂದು(ನವೆಂಬರ್ 14) ಕೊನೆಯುಸಿರೆಳೆದಿದ್ದಾರೆ. ಇನ್ನು ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳನ್ನು ಐದು ನಿರ್ಗತಿಕ ರೋಗಿಗಳಿಗೆ ದಾನ ಮಾಡಲಾಯಿತು.
ಬಜ್ಪೆ ಪಡು ಪೆರಾರ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿಯಾಗಿರುವ ಗ್ಲೋರಿಯಾ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿ ಕೆಲಸಕ್ಕೆ ಸೇರಿದ್ದರು. ಕೆಲವು ದಿನಗಳ ಹಿಂದೆ ಊಟ ಮಾಡಿದ ಬಳಿಕ ಅವರ ದೇಹದಲ್ಲಿ ಅಲರ್ಜಿ ಕಾಣಿಸಿಕೊಂಡಿತ್ತು. ಬಳಿಕ ಇದು ಉಲ್ಬಣಗೊಂಡ ಪರಿಣಾಮ ಮೆದುಳಿಗೆ ಹಾನಿಯಾಗಿದ್ದು, ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಯುವತಿಯ ರಕ್ಷಣೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೂ ಕೂಡ ಬದುಕುಳಿಯಲಿಲ್ಲ.
ಮೃತ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳನ್ನು ದಾನಮಾಡಲಾಗಿದೆ. ಗ್ಲೋರಿಯಾ ಅವರ ಮೆದುಳು ನಿಷ್ಕ್ರೀಯಗೊಂಡ ಕಾರಣ ಅವರ ಮನೆಯವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದು,ಅದರಂತೆ ಇಂದು(ಬುಧವಾರ) ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲೇ ಅಂಗಾಂಗ ಕಸಿ ಮಾಡಲಾಗಿದ್ದು, ರೋಡ್ರಿಗಸ್ ಅವರ ಯಕೃತ್ತನ್ನು ಎಜೆ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸಾಗಿಸಲಾಯಿತು.
ಇನ್ನು ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಮೂತ್ರಪಿಂಡವನ್ನು ಕೆಎಂಸಿ ಮಣಿಪಾಲಕ್ಕೆ ಮತ್ತು ಚರ್ಮ ಮತ್ತು ಕಾರ್ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ನೀಡಲಾಗಿದೆ. ಇನ್ನು ಉಪನ್ಯಾಸಕಿಯ ಅಕಾಲಿಕ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಉಪನ್ಯಾಸಕಿ ಗ್ಲೋರಿಯಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:32 pm, Thu, 14 November 24