ಮಂಗಳೂರು: ಸುರತ್ಕಲ್ನಲ್ಲಿ ಭಾರೀ ಬೆಂಕಿ ಅವಘಡ (Fire Accident) ಸಂಭವಿಸಿದ್ದು, ಸ್ಪೋರ್ಟ್ಸ್ ಮತ್ತು ಹಾಸಿಗೆ ಮಾರಾಟ ಅಂಗಡಿ ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಎರಡು ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿನಂದಿಸಲಾಗಿದೆ. ಮತ ಎಣಿಕಾ ಕೇಂದ್ರದಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಘಟನೆ ಸಂಭವಿಸಿದೆ.
ಬೆಂಗಳೂರು: ತಡರಾತ್ರಿ 5 ರಿಂದ 6 ಗುಜರಿ ಗೋಡೌನ್‌ಗಳಲ್ಲಿ ಅಗ್ನಿ ಅವಘಡ ಸಂಭವಿಸಿ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ನಾಯಂಡಹಳ್ಳಿ ಬಳಿಯ ಪ್ರಮೋದ್ ಲೇಔಟ್‌ನಲ್ಲಿ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿಯನ್ನು ನಂದಿಸಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮೊತ್ತೊಂದು ಅಗ್ನಿ ಅವಘಡ: ಐದಾರು ಗುಜರಿ ಗೋಡೌನ್‌ಗಳಿಗೆ ಹೊತ್ತಿಕೊಂಡ ಬೆಂಕಿ
ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುಮಾರು 3-4 ಎಕರೆ ಜಾಗಕ್ಕೆ ಬೆಂಕಿ ವ್ಯಾಪಿಸಿತ್ತು. ತಡರಾತ್ರಿ ಗೋಡೌನ್ಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ಪಕ್ಕದಲ್ಲೆ ಕಾರ್ಯನಿರ್ವಹಿಸುತ್ತಿದ್ದ ಮಾರ್ಷಲ್ಗಳು ಸ್ಥಳಕ್ಕೆ ದೌಡಾಯಿಸಿ, ಗೌಡೌನಲ್ಲಿ ಮಲಗಿದ್ದ ಹಲವರನ್ನು ಎಬ್ಬಿಸಿ ಆಚೆ ಕಳುಹಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
ಗದಗ: ಗೋಧಿ ಜಮೀನಿಗೆ ಬೆಂಕಿ ಬಿದ್ದ ಪರಿಣಾಮ ಕಟಾವಿಗೆ ಬಂದಿದ್ದ 3 ಎಕರೆ ಗೋಧಿ ಭಸ್ಮವಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರನಾಗನೂರ ಗ್ರಾಮದಲ್ಲಿ ನಡೆದಿದೆ. ರೈತ ವೆಂಕನಗೌಡ್ರ ಗದ್ದಿಗೌಡ್ರ ಎಂಬುವರಿಗೆ ಸೇರಿದ 3 ಎಕರೆ ಜಮೀನಿಗೆ ವಿದ್ಯುತ್ ಶಾಟ್ ಸರ್ಕಿಟ್ನಿಂದ ಬೆಂಕಿ ತಗುಲಿರುವ ಆರೋಪ ಕೇಳಿ ಬಂದಿದೆ. ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ಟರು ಪ್ರಯೋಜನವಾಗಲಿಲ್ಲ. ಇದರಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ 40 ಕ್ವಿಂಟಾಲ್ ನಷ್ಟು ಗೋಧಿ ಸುಟ್ಟು ಹೋಗಿದೆ. ರೈತ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾನೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಚಾರ್ಮಾಡಿಘಾಟ್ನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ಅಪಾರ ಪ್ರಮಾಣದ ವನ್ಯಸಂಪತ್ತು ಬೆಂಕಿಗಾಹುತಿ
ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ಮೈದಾನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ನಡೆದಿತ್ತು. ಕಿಡಿಗೇಡಿಗಳು ಸಿಗರೇಟು ಸೇದುವ ವೇಳೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿತ್ತು. ಪಕ್ಕದಲ್ಲೇ ಇದ್ದ ವಿದ್ಯುತ್ ಘಟಕ, ವಾಲ್ಮೀಕಿ ಭವನ ಮತ್ತು ಜೆಎಸ್.ಎಸ್ ಮಂಗಳ ಮಂಟಪದ ಆವರಣಕ್ಕೆ ಬೆಂಕಿ ವ್ಯಾಪಿಸುವ ಭೀತಿ ಎದುರಾಗಿತ್ತು. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು, ಭಾರಿ ಅನಾಹುತ ತಪ್ಪಿದೆ. ಹೆಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ