ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ ಗಿರಿ; ಖಾಸಗಿ ಸುದ್ದಿ ವೆಬ್​ಸೈಟ್ ವರದಿಗಾರನ ಮೇಲೆ ಹಲ್ಲೆ ಯತ್ನ

| Updated By: ಗಣಪತಿ ಶರ್ಮ

Updated on: Jul 31, 2023 | 6:04 PM

ಅಭಿಜಿತ್ ಅವರನ್ನು ಮುಸ್ಲಿಂ ಯುವಕ ಎಂದು ಭಾವಿಸಿದ ಗುಂಪು, ಹಿಂದೂ ಹುಡುಗಿ ಜೊತೆ ಏನು ಕೆಲಸ ಎಂದು ಪ್ರಶ್ನಿಸಿದ್ದು, ಹಲ್ಲೆಗೆ ಮುಂದಾಗಿದೆ. ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಗೆ ಅಭಿಜಿತ್ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ ಗಿರಿ; ಖಾಸಗಿ ಸುದ್ದಿ ವೆಬ್​ಸೈಟ್ ವರದಿಗಾರನ ಮೇಲೆ ಹಲ್ಲೆ ಯತ್ನ
ಬಂಧಿತ ಆರೋಪಿಗಳು
Follow us on

ಮಂಗಳೂರು, ಜುಲೈ 31: ಬಿಸಿ ರೋಡ್​​ನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆಯೇ ನೈತಿಕ ಪೊಲೀಸ್ ಗಿರಿ (Moral Policing) ನಡೆಸಿ ಹಲ್ಲೆಗೆ ಯತ್ನಿಸಿರುವ ಘಟನೆಯ ಬೆನ್ನಲ್ಲೇ ಮಂಗಳೂರಿನಲ್ಲಿಯೂ (Mangaluru) ಅಂಥದ್ದೇ ಕೃತ್ಯ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ಸ್ಥಳೀಯ ಖಾಸಗಿ ವೆಬ್​ಸೈಟೊಂದರ ವರದಿಗಾರನ ಮೇಲೆ ನಗರದ ಕಾವೂರಿನಲ್ಲಿ ಜುಲೈ 28ರ ರಾತ್ರಿ ಹಲ್ಲೆ ನಡೆದಿತ್ತು. ಘಟನೆ ಸಂಬಂಧ ಇದೀಗ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಸ್ಥಳೀಯ ಖಾಸಗಿ ವೆಬ್​ಸೈಟೊಂದರ ವರದಿಗಾರ ಅಭಿಜಿತ್ ಎಂಬವರು ಸ್ನೇಹಿತೆ ಜೊತೆ ಕಾವೂರು ಬಳಿಯ ರೆಸ್ಟೋರೆಂಟ್​ಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಕೆಲ ಯುವಕರು ಅವರನ್ನು ಪ್ರಶ್ನಿಸಿದ್ದಾರೆ. ‘ನೀನು ಮುಸ್ಲಿಂ ಅಲ್ಲವೇ’ ಎಂದು ಪ್ರಶ್ನಿಸಿದ್ದ ಯುವಕರ ಗುಂಪು ಶಬ್ದಗಳಿಂದ ನಿಂದನೆ ಮಾಡಿದೆ.

ಅಭಿಜಿತ್ ಅವರನ್ನು ಮುಸ್ಲಿಂ ಯುವಕ ಎಂದು ಭಾವಿಸಿದ ಗುಂಪು, ಹಿಂದೂ ಹುಡುಗಿ ಜೊತೆ ಏನು ಕೆಲಸ ಎಂದು ಪ್ರಶ್ನಿಸಿದ್ದು, ಹಲ್ಲೆಗೆ ಮುಂದಾಗಿದೆ. ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಗೆ ಅಭಿಜಿತ್ ದೂರು ನೀಡಿದ್ದು, ಎಫ್ಐಆರ್ ದಾಖಲಿಸಲಾಗಿದೆ.

ಘಟನೆ ಸಂಬಂಧ ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್(43) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಟುಂಬದೊಂದಿಗೆ ಹೊಟೇಲ್​ಗೆ ಹೋಗಿ ವಾಪಸ್ ಆಗುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬಿಸಿ ರೋಡ್​​ನಲ್ಲಿ ಅದೇ ದಿನ (ಜುಲೈ 28) ನಡೆದಿತ್ತು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Mangaluru News: ಬಿಸಿ ರೋಡ್​ನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ, ಇಬ್ಬರ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಉಳ್ಳಾಲದಲ್ಲಿ ನೈತಿಕ ಪೊಲೀಸ್ ಗಿರಿ ನಡೆದ ಬಗ್ಗೆ ವರದಿಯಾಗಿತ್ತು. ನಂತರ, ಅಂಥ ಘಟನೆಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದರು. ಅದಾಗ್ಯೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್​​ ಗಿರಿ ಮುಂದುವರಿದಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ