ಸುವರ್ಣ ಮಹೋತ್ಸವ ಪ್ರಶಸ್ತಿ ಎಡವಟ್ಟು: ಮಂಗಳೂರಿನಿಂದ ಬೆಂಗಳೂರಿಗೆ ಕರೆಸಿ ಸಮಾಜ ಸೇವಕಗೆ ಅವಮಾನ

| Updated By: ರಮೇಶ್ ಬಿ. ಜವಳಗೇರಾ

Updated on: Nov 01, 2024 | 9:18 PM

ಸುವರ್ಣ ಮಹೋತ್ಸವ ಪ್ರಶಸ್ತಿಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಎಡವಟ್ಟು ಮಾಡಿದೆ. ಅಧಿಕಾರಿಗಳ ಈ ಎಡವಟ್ಟಿನಿಂದ ಮಂಗಳೂರಿನ ಸಮಾಜ ಸೇವಕರೊಬ್ಬರು ಬೆಂಗಳೂರಿಗೆ ಬಂದು ದಿಕ್ಕುತೋಚದೇ ಏಕಾಂಗಿಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಬನ್ನಿ ಎಂದು ಬೆಂಗಳೂರಿಗೆ ಕರೆಯಿಸಿಕೊಂಡು ಈಗ ಪ್ರಶಸ್ತಿ ನಿಮಗಿಲ್ಲ ಎಂದು ಕೈ ಎತ್ತಿರುವ ಘಟನೆ ನಡೆದಿದೆ.

ಸುವರ್ಣ ಮಹೋತ್ಸವ ಪ್ರಶಸ್ತಿ ಎಡವಟ್ಟು: ಮಂಗಳೂರಿನಿಂದ ಬೆಂಗಳೂರಿಗೆ ಕರೆಸಿ ಸಮಾಜ ಸೇವಕಗೆ ಅವಮಾನ
ಸಮಾಜ ಸೇವಕ ಬಾಬು ಪಿಲಾರ್
Follow us on

ಮಂಗಳೂರು/ಬೆಂಗಳೂರು, (ನವೆಂಬರ್ 01): ಸುವರ್ಣ ಮಹೋತ್ಸವ ಪ್ರಶಸ್ತಿಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕರೊಬ್ಬರಿಗೆ ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು ಹೋಗಬೇಕು ಎನ್ನುವಷ್ಟರಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಮಂಗಳೂರಿನ ಸಮಾಜ ಸೇವಕ ಬಾಬು ಪಿಲಾರ್ ಅವಮಾನ ಮಾಡಿದ್ದಾರೆ. ಖುದ್ದು ಇಲಾಖೆ ಅಧಿಕಾರಿ ನೀಲಮ್ಮ ಎನ್ನುವರು ನಿಮ್ಮನ್ನು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಂಗಳೂರಿನಿಂದ ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾರೆ. ಅಲ್ಲದೇ ಕುಮಾರಕೃಪಾ ಅತಿಥಿ ಗೃಹದಲ್ಲಿ ಅತಿಥ್ಯ ನೀಡಿ ಕೊನೆ ಕ್ಷಣದಲ್ಲಿ ನೀವು ಅವರಲ್ಲ. ನಿಮಗೆ ಪ್ರಶಸ್ತಿ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಬಂದಿರುವ ಸಮಾಜ ಸೇವಕ ಬಾಬು ಪಿಲಾರ್ ಕಂಗಾಲಾಗಿದ್ದಾರೆ.

ನೀವು ಸುವರ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಬೆಂಗಳೂರಿಗೆ ಬನ್ನಿ ಎಂದು ಮಂಗಳೂರಿನ ಸಮಾಜ ಸೇವಕ ಬಾಬು ಪಿಲಾರ್ ಅವರಿಗೆ ನಿನ್ನೆ (ಅಕ್ಟೋಬರ್ 31) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ಕರೆ ಮಾಡಿ ಹೇಳಿದ್ದಾರೆ. ಅದರಂತೆ ಬಾಬು ಪಿಲಾರ್ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಬಳಿಕ ಅವರಿಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೊಠಡಿ ಸಹ ನೀಡಿದ್ದಾರೆ. ಇಂದು(ನವೆಂಬರ್ 01) ಸಂಜೆ ಪ್ರಶಸ್ತಿ ವಿತರಣೆ ವೇಳೆ ಕೊನೇ ಕ್ಷಣದಲ್ಲಿ ಬಾಬು ಪಿಲಾರ್ ಗೆ ಪ್ರಶಸ್ತಿ ಇಲ್ಲ ಎಂದು ಹೇಳಿದ್ದಾರೆ. ಕಣ್ತಪ್ಪಿನಿಂದ ತಪ್ಪಾಗಿದೆ ಕ್ಷಮಿಸಿ. ಬಾಬು ಪಿಲಾರ್ ಬದಲು ಬಾಬು‌ ಕಿಲಾರ್ ಆಗಬೇಕಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೇರ ಪ್ರಸಾರ

ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಸಂಕೀರ್ಣ ವಿಭಾಗದಲ್ಲಿ ಬಾಬು ಕಿಲಾರ್ ಹೆಸರು ಘೋಷಣೆಯಾಗಿತ್ತು. ಅದು ಬಾಬು ಪಿಲಾರ್ ರದ್ದೇ ಎಂದು ಬಾಬು ಪಿಲಾರ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ನಿನ್ನೆ ಕರೆ ಮಾಡಿ ಬೆಂಗಳೂರು ಬರ ಹೇಳಿದ್ದರು. ಕೊಠಡಿ ಕೂಡ ಕೊಟ್ಟು ಇಂದು ಪ್ರಶಸ್ತಿ ಸ್ವೀಕರಿಸಲು ಮಾಹಿತಿ ನೀಡಿದ್ದರು. ಆದರೆ ಕುಮಾರ ಕೃಪಾ ಬಳಿ ಬಸ್ ಹತ್ತುವ ವೇಳೆ ನಿಮಗೆ ಪ್ರಶಸ್ತಿ ಇಲ್ಲ. ಮತ್ತೊಬ್ಬರು ಬಾಬು ಕಿಲಾರ್​ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೂ ಈ ಬಾಬು ಪಿಲಾರ್ ಆಯ್ಕೆಯಾಗಿದ್ದರು. ಆದರೆ ಜಿಲ್ಲಾ ಪ್ರಶಸ್ತಿ ಬಿಟ್ಟು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನೀಲಮ್ಮ ಕರೆ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಬಂದಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಹೆಸರು ಬದಲಾಗಿದೆ. ಇದರಿಂದ ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲ ಇತ್ತ ಸುವರ್ಣ ಮಹೋತ್ಸವ ಪ್ರಶಸ್ತಿಯೂ ಸ್ವೀಕರಿಸಲಾಗದೇ ಕಂಗಾಲಾಗಿದ್ದಾರೆ.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಕ್ಷೇತ್ರದ ಬಾಬು ಪಿಲಾರ್ ಸಮಾಜ ಸೇವಕರಾಗಿದ್ದಾರೆ. ಅಸಂಖ್ಯಾತರ ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬಾಬು ಪಿಲಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಈಗ ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲದೇ ರಾಜ್ಯ ಪ್ರಶಸ್ತಿಯೂ ಇಲ್ಲದೇ ಬಾಬು ಪಿಲಾರ್ ಬೆಂಗಳೂರಿನಲ್ಲಿ ಏಕಾಂಗಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ