Praveen Nettar: ಪ್ರವೀಣ್ ನೆಟ್ಟಾರು ಹತ್ಯೆ: ತನಿಖೆ ಚುರುಕು, ಪೊಲೀಸರ ವಶಕ್ಕೆ 3ನೇ ಆರೋಪಿ

ಪ್ರವೀಣ್ ನೆಟ್ಟಾರು ಹತ್ಯೆ ಆರೋಪದ ಮೇಲೆ ಪೊಲೀಸರು 3ನೇ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಅರಂಭಿಸಿದ್ದಾರೆ.

Praveen Nettar: ಪ್ರವೀಣ್ ನೆಟ್ಟಾರು ಹತ್ಯೆ: ತನಿಖೆ ಚುರುಕು, ಪೊಲೀಸರ ವಶಕ್ಕೆ 3ನೇ ಆರೋಪಿ
ಮೃತ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು
Edited By:

Updated on: Jul 29, 2022 | 12:02 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು  (Praveen Nettaru Murder) ಕೊಲೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಹತ್ಯೆ ಆರೋಪದ ಮೇಲೆ ಪೊಲೀಸರು 3ನೇ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಅರಂಭಿಸಿದ್ದಾರೆ. ಈ ಸಂಬಂಧ ಕಾಣಿಯೂರು ಗ್ರಾಮದಲ್ಲಿ ಸದ್ದಾಂ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಳ್ಳಾರೆ ಮೂಲದ ಈತನೂ ಚಿಕನ್ ಸೆಂಟರ್ ಇಟ್ಟುಕೊಂಡಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ‘ಉದಯವಾಣಿ’ ವರದಿ ಮಾಡಿದೆ.

ಈ ಬೆಳವಣಿಗೆಯೊಂದಿಗೆ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ ಒಟ್ಟು ಮೂವರನ್ನು ವಶಕ್ಕೆ ಪಡೆದುಕೊಂಡಂತೆ ಆಗಿದೆ. ಪ್ರಕರಣ ಸಂಬಂಧ ಈಗಾಗಲೇ ಬೆಳ್ಳಾರೆ ಗ್ರಾಮದ ಷಫೀಕ್ ಮತ್ತು ಸವಣೂರಿನ ಝಾಕೀರ್​ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಲೆ ಮಾಡಿದವರಿಗೆ ಸ್ಥಳೀಯರು ನೆರವು ನೀಡಿರುವ ಅನುಮಾನಗಳೂ ವ್ಯಕ್ತವಾಗಿದ್ದು ಪೊಲೀಸರು ಹಲವು ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಐದು ಪೊಲೀಸ್ ತಂಡ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Praveen Nettar Murder) ಹತ್ಯೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ.

ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಗ್ರಾಮದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ.