ಮಂಗಳೂರು, (ಆಗಸ್ಟ್ 12): ಕರಾವಳಿಯ ತುಳುನಾಡು ಎಂದು ಕರೆಸಿಕೊಳ್ಳುವ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ ನಾಗಾರಾಧನೆ, ಭೂತರಾಧನೆಯ ನೆಲ. ಇಲ್ಲಿನ ಸಂಸ್ಕೃತಿ, ಆಚಾರ,ವಿಚಾರ,ಆಹಾರ ಪದ್ದತಿ ಎಲ್ಲವೂ ಭಿನ್ನ. ಅದರಂತೆ ಈ ತುಳುನಾಡಿನಲ್ಲಿ ಜೀವಂತ ಇರುವವರಿಗೆ ಮಾತ್ರವಲ್ಲದೇ ಪ್ರೇತಾತ್ಮಗಳಿಗೂ ಮದುವೆ ನಡೆಸುವ ಸಂಪ್ರದಾಯವೊಂದಿದೆ. ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರ ಪ್ರೇತಾತ್ಮಕ್ಕೆ ನಡೆಯುವ ಮದುವೆ ಕಾರ್ಯಕ್ರಮ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆಯಿತು. ವೇಣೂರು ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಧರ್ಮದರ್ಶಿ ರಮೇಶ್ ಅವರ ಪೌರೋಹಿತ್ಯದಲ್ಲಿ ನಡೆದ ಪ್ರೇತಗಳ ಮದುವೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾಕ್ಷಿಗಳಾಗಿದ್ದರು. 35 ವರ್ಷಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಪ್ರೇತಾತ್ಮಕ್ಕೆ ಮದುವೆ ನೆರವೇರಿಸಲಾಯಿತು.
ಸಾಮಾನ್ಯವಾಗಿ ಪ್ರೇತ ಮದುವೆ ತುಳುನಾಡಿನ ಆಟಿ ಅಂದ್ರೆ ಆಷಾಢ ಮಾಸದಲ್ಲಿ ನಡೆಯುತ್ತೆ. ಇಲ್ಲಿ ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ ವಧು ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಎಂಬ ವರನ ಕುಟುಂಬದ ನಡುವೆ ಮದುವೆ ನಡೆದ್ರೆ ಇನ್ನೊಂದು ಜಾರಗುಡ್ಡೆಯ ಯಾದವ ಹಾಗೂ ಬಂಟ್ವಾಳ ತಾಲೂಕಿನ ನಯನಾಡ್ ನ ಯಶೋಧ ಎಂಬ ವಧುವಿನ ಕುಟುಂಬದ ನಡುವೆ ನಡೆಯಿತು. ಬೆಳ್ಳಿಯ ತಗಡಿನ ಮೂಲಕ ವರ ಹಾಗೂ ವಧುವಿನ ಮೂರ್ತಿ ತಯಾರಿಸಿ ಆ ಮೂರ್ತಿಗೆ ಧಾರೆ ಎರೆಯಲಾಯಿತು.
ಇದನ್ನೂ ಓದಿ: ಕರಾವಳಿಯಲ್ಲಿ ನಡೆಯುತ್ತೆ ಪ್ರೇತಾತ್ಮಗಳ ವಿವಾಹ; ಏನಿದು ಅಂತೀರಾ? ಇಲ್ಲಿದೆ ನೋಡಿ
ಪ್ರೇತ ಮದುವೆಯೆಂದರೆ ಇದು ಕಾಟಾಚಾರದ ಮದುವೆಯಲ್ಲ. ಜೀವಂತ ಇರುವವರ ಮದುವೆ ಹೇಗೆ ನಡೆಯುತ್ತೋ ಅದೇ ರೀತಿ ಪ್ರೇತಗಳ ಮದುವೆಯು ನಡೆಯುತ್ತೆ. ಇಲ್ಲಿ ಹೆಣ್ಣು – ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗುತ್ತದೆ. ಧಾರೆಯ ಬಳಿಕ ಸೇರಿದವರಿಗೆ ಮದುವೆ ಊಟವನ್ನು ಬಡಿಸಲಾಗುತ್ತೆ.
ಮದುವೆಯಾಗದೆ ಮೃತಪಟ್ಟರೆ ಅವರಿಗೆ ಸದ್ಗತಿಯಿಲ್ಲ ಎಂಬುದು ತುಳುವರ ಬಲವಾದ ನಂಬಿಕೆ. ಹೀಗಾಗಿ ಮದುವೆಯಾಗದೆ ಅಕಾಲಿಕವಾಗಿ ಸತ್ತವರಿಗೆ ಪ್ರಾಯ ಪ್ರಬುದ್ಧವಾಗುವ ಹೊತ್ತಿಗೆ ಮದುವೆ ಮಾಡುವ ಸಂಪ್ರದಾಯ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಒಟ್ಟಿನಲ್ಲಿ ಪ್ರೇತ ಮದುವೆ ಮಾಡಿದ ಬಳಿಕ ಕುಟಂಬದಲ್ಲಿ ನೆಮ್ಮದಿ ಕಂಡುಕೊಂಡವರು ಸಾಕಷ್ಟು ಜನ ನಮ್ಮ ಮುಂದೆ ಇರುವುದರಿಂದ ಇಂದಿಗೂ ಈ ನಂಬಿಕೆ ಜೀವಂತ ಉಳಿದಿದೆ ಎಂಬುದಂತು ಸತ್ಯ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ