ಮಂಗಳೂರು: ದೇಶವ್ಯಾಪಿ ಗಮನ ಸೆಳೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ (Praveen Nettar) ಕೊಲೆ ಪ್ರಕರಣಗಳ ಬೆನ್ನಿಗೇ ನಗರ ಹೊರವಲಯದ ಸುರತ್ಕಲ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆಯಾಗಿದೆ. ಫಾಜಿಲ್ ಮಂಗಲಪೇಟೆ (Fazil Murder) (23) ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸುರತ್ಕಲ್ನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹತ್ಯೆಯ ಹಿನ್ನೆಲೆಯಲ್ಲಿ ಸಾಮಾಜಿಕ ವಾತಾವರಣ ಕಾವೇರಿರುವುದರಿಂದ ಸುರತ್ಕಲ್, ಪಣಂಬೂರು, ಬಜ್ಪೆ, ಮುಲ್ಕಿ ಸುತ್ತಮುತ್ತಲ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಜೆ ಕೊಡುವಂತೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ವಿನಂತಿಸಿದ್ದರು.
ನಿಷೇಧಾಜ್ಞೆ ಇರುವ ಸೂಕ್ಷ್ಮ ಪ್ರದೇಶಗಳ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ಬೇಡ ಎಂದು ಮುಸ್ಲಿಮರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಅಥವಾ ನಿಷೇಧಾಜ್ಞೆ ಇಲ್ಲದ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿ ಪ್ರಾರ್ಥನೆ ಮಾಡುವಂತೆ ಪೊಲೀಸರು ವಿನಂತಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ
ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಹಿನ್ನೆಲೆ ಘಟನಾ ಸ್ಥಳದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಫಾಜಿಲ್ ಹತ್ಯೆಗೆ ನಿಖರ ಕಾರಣ ಗೊತ್ತಿಲ್ಲ. ಕೊಲೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದೇವೆ. ಕೊಲೆ ಸಂಬಂಧ ಯಾರೂ ವದಂತಿಗಳಿಗೆ ಕಿವಿಗೊಡಬಾರದು. ಶಾಂತಿ ಕದಡುವ ಪ್ರಯತ್ನ ನಡೆಸಬಾರದು ಎಂದು ಸಾರ್ವಜನಿಕರಿಗೆ ತಿಳಿಹೇಳಿದರು.
Published On - 6:51 am, Fri, 29 July 22