ಮಂಗಳೂರು, ಜ.29: ದಕ್ಷಿಣ ಕನ್ನಡ ಜಿಲ್ಲೆಯ ಮೇಣೂರಿನ (Venoor) ತೋಟದ ಮನೆಯಲ್ಲಿದ್ದ ಪಟಾಕಿ ಗೋಡಾನ್ನಲ್ಲಿ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದ ಪ್ರಕರಣದ ನಂತರ ದಕ್ಷಿಣ ಕನ್ನಡ (Dakshina Kannada) ಜಿಲ್ಲಾಧಿಕಾರಿ (ಪ್ರಭಾರ) ಡಾ.ಆನಂದ ಕೆ. ಅವರು ಜಿಲ್ಲೆಯಲ್ಲಿರುವ ಎಲ್ಲಾ ಪಟಾಕಿ ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ನಿರ್ಬಂಧಿಸಿ ಅಮಾನತ್ತಿನಲಿಡಲು ಆದೇಶಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ, ಸರ್ಕಾರದ ಮಾರ್ಗಸೂಚಿ ಪಾಲನೆಯ ಮರುಪರಿಶೀಲನೆಗಾಗಿ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಪಟಾಕಿ ತಯಾರಿಕೆ, ಮಾರಾಟ ಘಟಕಗಳ ಮರುಪರಿಶೀಲನೆಗೆ ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ.
ಮಂಗಳೂರು ಮತ್ತು ಪುತ್ತೂರು ಎಸಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ತಕ್ಷಣ ಸೀಲ್ಡೌನ್ ಮಾಡಲು ಆದೇಶಿಸಲಾಗಿದೆ. ಬಳಿಕ ಸ್ಪೋಟಕ ಅಧಿನಿಯಮ ಮತ್ತು ಸರ್ಕಾರದ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಿ ಪೆಬ್ರವರಿ 5 ರ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜನವರಿ 28ರ ಸಂಜೆ 5.30 ಸುಮಾರಿಗೆ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟವಾಗಿತ್ತು. ಭಾರೀ ಶಬ್ಧದಿಂದ ಆದ ಸ್ಪೋಟದ ಸದ್ದು ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಬಂದಾಗ ಅಲ್ಲಿ ಇಡೀ ಗೋಡಾನ್ ಬ್ಲಾಸ್ಟ್ ಆಗಿ ಬೆಂಕಿ ಆವರಿಸಿತ್ತು.
ಇದನ್ನೂ ಓದಿ: ಮಂಗಳೂರು: ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣ, ಆರೋಪಿ ಸಯ್ಯದ್ ಬಶೀರ್ ಬಂಧನ
ಘಟನೆ ವೇಳೆ ಒಂಬತ್ತು ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಕೇರಳದ ವರ್ಗೀಸ್ (68), ಹಾಸನದ ಚೇತನ್(25) ಕೇರಳದ ಸ್ವಾಮಿ(60) ಮೃತಪಟ್ಟಿದ್ದರು. ಉಳಿದಂತೆ ಹಾಸನದವರಾದ ದಿನೇಶ, ಕಿರಣ, ಅರಸೀಕೆರೆಯ ಕುಮಾರ, ಚಿಕ್ಕಮಾರಹಳ್ಳಿಯ ಕಲ್ಲೇಶ, ಕೇರಳದವರಾದ ಪ್ರೇಮ್, ಕೇಶವ ಗಾಯಗೊಂಡಿದ್ದಾರೆ.
ಕುಚ್ಚೋಡಿ ನಿವಾಸಿ ಬಶೀರ್ ಎಂಬುವರು 2011-12 ರಲ್ಲಿ ಸ್ಟೋಟಕ ತಯಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದ್ದರು. ಕಳೆದ ಎರಡು ತಿಂಗಳ ಹಿಂದೆ 9 ಜನ ಕಾರ್ಮಿಕರು ಬಂದು ಕೆಲಸ ಮಾಡುತ್ತಿದ್ದರು. ಯಾರನ್ನೂ ಗೋದಾಮಿನ ಹತ್ತಿರ ಬಿಡದೆ, ರೋಡ್ನಲ್ಲಿ ವಾಚ್ ಮಾಡುತ್ತಾ ಕೆಲಸ ಮಾಡುತ್ತಿದ್ದರು. ಅದರೆ ಇಲ್ಲಿ ಬಾಂಬ್ ತಯಾರು ಮಾಡುತ್ತಿದ್ದರು ಅಂತ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಸರಿಯಾಗಿ ಕೆಲಸ ನಡೆಯುತ್ತಿತ್ತು. ಆದರೆ ಎರಡು ತಿಂಗಳಿಂದ ಬೇರೆ ಏನೋ ನಡೆಯುತ್ತಿದೆ. ಇಲ್ಲಿ ರವಿವಾರ ಯಾವುದೋ ಟ್ರಯಲ್ ಬ್ಲಾಸ್ಟ್ ನಡೆದಿದೆ. ಸುತ್ತಾಮುತ್ತಾ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಮಕ್ಕಳು ಊಟ ಮಾಡುತ್ತಿಲ್ಲ. ಇನ್ನುಮುಂದೆ ಇಲ್ಲಿ ಪಟಾಕಿ ತಯಾರಿಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ