ದಾವಣಗೆರೆ: ಕೇಂದ್ರ ಸರ್ಕಾರದ ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆಯಾದ ದಾವಣಗೆರೆಯಲ್ಲೊಂದು ಬೃಹತ್ ಸ್ಮಾರಕವೊಂದು ನಿರ್ಮಾಣವಾಗುತ್ತಿದ್ದು, ರಾಜ್ಯದ ಜನರನ್ನ ತನ್ನತ್ತ ಸೆಳೆಯಲು ಸಜ್ಜಾಗುತ್ತಿದೆ. ಕುಂದವಾಡ ಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿ 48ರಿಂದ ಕಂಡು ಬರುವಂತೆ ಸುಮಾರ 25 ಕೋಟಿ ವೆಚ್ಚದಲ್ಲಿ ವಿಶೇಷ ಗಾಜಿನ ಅರಮನೆ ನಿರ್ಮಾಣವಾಗಿದೆ. ಬೆಂಗಳೂರಿನ ಲಾಲ್ಬಾಗ್ನಲ್ಲಿ ಇರುವ ಗಾಜಿನ ಮನೆಗಿಂತ ಐದು ಪಟ್ಟು ದೊಡ್ಡದಾಗಿದೆ. ಸುಮಾರು 13 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಗಾಜಿನ ಮನೆ ಸ್ಮಾರ್ಟ್ಸಿಟಿಗೆ ಹೆಗ್ಗುರುತಾಗಿ ನಿಂತಿದೆ. ದಾವಣಗೆರೆ ಜನಕ್ಕೆ ಇದೊಂದು ಪ್ರವಾಸಿ ಕೇಂದ್ರವಾಗಿದೆ. ರಾಜ್ಯೋತ್ಸವದ ಹಿನ್ನೆಲೆ ಗಾಜಿನ ಮನೆಗೆ ಜೀಲಕಳೆ ಬಂದಿದೆ. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇಲ್ಲಿ ಕನ್ನಡ ಹಬ್ಬಕ್ಕಾಗಿ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದ್ದು, ನಿಜಕ್ಕೂ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.
ಸ್ಮಾರಕದ ಕೆಳಗಡೆ ಗ್ರಾನೇಟ್ ಹಾಕಲಾಗಿದೆ. ಮಳೆಗಾಲ ಬೇಸಿಗೆ ಅನ್ವಯ ಆಗುವಂತೆ ಅಂತಾರಾಷ್ಟ್ರೀಯ ಗುಣ ಮಟ್ಟದ ಗ್ಲಾಸ್ಗಳನ್ನ ಇಡಿ ಅರಮನೆಗೆ ಅಳವಡಿಸಲಾಗಿದೆ. ಈಗ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ಲಾವರ್ ಶೋ ನಡೆಯುತ್ತಿದೆ. ಉಳಿದಂತೆ ಬೆಂಗಳೂರಿನಲ್ಲಿ ನಡೆಯುವ ಪ್ಲಾವರ್ ಶೋ ರೀತಿ ಜನವರಿ 26 ಹಾಗೂ ಅಗಸ್ಟ್ 15ರಂದು ನಡೆಯಲಿದೆ. ದೇಶ ಮಾತ್ರವಲ್ಲ ಪ್ರಪಂಚದ ಬಹುತೇಕ ಕಡೆ ಹುಡುಕಾಡಿದರೂ ಇಷ್ಟು ದೊಡ್ಡದಾದ ಗಾಜಿನ ಮನೆ ಕಾಣಸಿಗುವುದು ಅನುಮಾನ. ಈ ಗಾಜಿನ ಮನೆ ತೋಟಗಾರಿಕಾ ಇಲಾಖೆಯ ಅಡಿ ಬರುತ್ತದೆ. ಸಂಜೆ ಆಗುತ್ತಿದ್ದಂತೆ ವಿಶೇಷ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತದೆ. ಈ ವಿಶಿಷ್ಟ ದೀಪಾಲಾಂಕರಾವು ಹೊಸದೊಂದು ಲೋಕ ಸೃಷ್ಟಿಸಿದಂತೆ ಗೋಚರಿಸುತ್ತದೆ.
ಇಷ್ಟರಲ್ಲಿಯೇ ಹೈದ್ರಾಬಾದ್ ಯುನಿಕ್ ಟ್ರೀ ಸಂಸ್ಥೆಯವರಿಗೆ ಗಾಜಿನ ಮನೆ ಸುತ್ತಲಿನಲ್ಲಿ ಮರಗಳನ್ನು ಹಾಕಲು ಗುತ್ತಿಗೆ ನೀಡಲಾಗಿದೆ. ಅದರಂತೆ ಸುಮಾರು 10-15 ವರ್ಷದ ಮರಗಳನ್ನ ನೇರವಾಗಿ ಗಾಜಿನ ಮನೆಯ ಅಂಗಳದಲ್ಲಿ ನೆಡಲಾಗುತ್ತದೆ. ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸಹ ಗಾಜಿನ ಮನೆ ಅಂಗಳಲ್ಲಿಯೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಪ್ರವಾಸಿಗರನ್ನ ತನ್ನತ್ತ ಸೆಳೆಯಲು ನಿರಂತರವಾಗಿ ಜಿಲ್ಲಾಡಳಿತ ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರೆ ತಪ್ಪಾಗಲಾರದು.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sun, 13 November 22