ಕರೋನಾ ರೀತಿಯ ಮಾರಣಾಂತಿಕ ರೋಗ: ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಬಂದ್

ಕೆಲ ದಿನಗಳ ಹಿಂದೆ ಬೆಳಗಾವಿ ಮೃಗಾಲಯದೊಂದರಲ್ಲಿ ರಾಶಿ ರಾಶಿ ಜಿಂಕೆಗಳು ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ದಾವಣಗೆರೆಯ ಆನಗೋಡು ಮೃಗಾಲಯದಲ್ಲಿ ಏಕಾಏಕಿ ಚುಕ್ಕೆ ಜಿಂಕೆಗಳು ಸಾಯುತ್ತಿದ್ದಾವೆ. ವಿಚಿತ್ರ ಸಾಂಕ್ರಾಮಿಕ ರೋಗ ಹರಡಿದ್ದು ವೈದ್ಯರ ತಂಡ ಬಿಡು ಬಿಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯವನ್ನು ಬಂದ್ ಮಾಡಲಾಗಿದೆ. ಹಾಗಾದ್ರೆ, ಜಿಂಕೆ ಯಾವ ರೋಗದಿಂದ ಸಾವನ್ನಪ್ಪುತ್ತಿವೆ? ಎನ್ನುವ ವಿವರ ಇಲ್ಲಿದೆ.

ಕರೋನಾ ರೀತಿಯ ಮಾರಣಾಂತಿಕ ರೋಗ: ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಬಂದ್
Indira Priyadarshini Zoo
Edited By:

Updated on: Jan 19, 2026 | 7:59 PM

ದಾವಣಗೆರೆ, (ಜನವರಿ 19):  ದಾವಣಗೆರೆ ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ (indira Priyadarshini zoo )ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಅಲ್ಲದೆ ಇಡೀ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯ ಮೃಗಾಲಯದಲ್ಲಿ ಇರುವ ಇತರೆ ಜಿಂಕೆಗಳಿಗೂ ಸೋಂಕು ಹರಡದಂತೆ ತಡೆಯಲು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.‌ ಉಳಿದ ಜಿಂಕೆಗಳ ಮೇಲೆ ಅಧಿಕಾರಿಗಳು, ವೈದ್ಯರು ನಿಗಾವಹಿಸಿದ್ದಾರೆ.

ಕರೋನಾ ರೀತಿಯ ಮಾರಣಾಂತಿಕ ರೋಗ

ಇದೇ ಜನವರಿ 16ರಂದು ಒಂದು ಚುಕ್ಕೆ ಜಿಂಕೆ ಸಾವನ್ನಪ್ಪಿತ್ತು. ನಂತರ ಜ. 17 ರಂದು ಮತ್ತೆರಡು ಜಿಂಕೆಗಳು ಮೃತಪಟ್ಟಿದ್ದವು. ಹಾಗೂ ಜ.18 ರಂದು ಮತ್ತೊಂದು ಜಿಂಕೆ ಮೃತಪಟ್ಟಿರುವುದು ಕಂಡುಬಂದಿದೆ. ಕರೋನಾ ರೀತಿಯಲ್ಲಿ ಮಾರಣಾಂತಿಕ ರೋಗ ಹರಡಿದ್ದು.ಇಡಿ ಪಾರ್ಕ ಕ್ವಾರಟೈನ್ ಮಾಡಲಾಗಿದೆ. ಇನ್ನು ಮೇಲಿಂದ ಮೇಲೆ ಜಿಂಕೆ ಸಾವನ್ನಪ್ಪಿತ್ತಿರುವುದರಿಂದ ತಕ್ಷಣವೇ ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರು ಮೃಗಾಲಯಕ್ಕೆ ದೌಡಾಯಿಸಿದ್ದಾರೆ. ಪ್ರಾಥಮಿಕವಾಗಿ ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗವಿರಬಹುದು ಶಂಕೆ ವ್ಯಕ್ತವಾಗಿದೆ. ಸದ್ಯ ಜಿಂಕೆಗಳ ಸರಣಿ ಸಾವಿಗೆ ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ.​

ಇದನ್ನೂ ಓದಿ: ದಾವಣಗೆರೆ ಕಿರು ಮೃಗಾಲಯದಲ್ಲಿ 4 ಚುಕ್ಕೆ ಜಿಂಕೆಗಳು ಸಾವು: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಜಿಂಕೆಗಳು ಇದೇ ಸಾಂಕ್ರಾಮಿಕ ಕಾಯಿಲೆಯಿಂದ ಸಾವನ್ನಪ್ಪಿದ್ದವು. ಈಗ ಇಂದಿರಾ ಪ್ರಿಯದರ್ಶಿನಿ ಜಿಂಕೆಗಳ ಸಾವಿನಲ್ಲೂ ಸಾಮ್ಯತೆ ಕಂಡುಬಂದಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಶಾಸಕ ಕೆಎಸ್ ಬಸವಂತಪ್ಪ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಆಹಾರ ನೀಡುತ್ತಿಲ್ಲ. ಮೇಲಾಗಿ ದಾವಣಗೆರೆಯಲ್ಲಿ ಇದೊಂದು ಮೃಗಾಲಯ ಬಿಟ್ಟರೇ ಬೇರೆ ಪ್ರವಾಸಿ ಸ್ಥಳಗಳು ಸಹ ಇಲ್ಲ. ಇಲ್ಲಿನ ಪ್ರಾಣಿಗಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಬೇಕಾದ ತಜ್ಞರನ್ನ ತಕ್ಷಣಕ್ಕೆ ಕರೆಸಿ ಇನ್ನಷ್ಟು ಜಿಂಕೆಗಳು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

​ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ​ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಮೃಗಾಲಯದಲ್ಲಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಇದರಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳಿವೆ. ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ