Guru Sevalal Jayanti 2021 |ಸಂತ ಸೇವಾಲಾಲ್ ಜಯಂತ್ಯುತ್ಸವಕ್ಕೆ ಕ್ಷಣಗಣನೆ.. ಇಂದಿನಿಂದ 2 ದಿನ ನಡೆಯಲಿದೆ ಜಾತ್ರೆ

| Updated By: shruti hegde

Updated on: Feb 14, 2021 | 10:13 AM

ಅದೊಂದು ವರ್ಣರಂಜಿತ ಜಾತ್ರೆ. ಬಣ್ಣಬಣ್ಣದ ವೇಷದಲ್ಲಿ ಸಾವಿರಾರು ಜನ ಅಲ್ಲಿಗೆ ಬರ್ತಾರೆ. ಜೊತೆಯಲ್ಲೇ ಭಜನೆ, ವಾದ್ಯದ ಸದ್ದು. ಹೀಗೆ ಹತ್ತು ಹಲವು ಕಾರಣಕ್ಕೆ ರಾಜ್ಯದ ಗಮನ ಸೆಳೆವ ಜಾತ್ರೆ ಅದು. ಸಂತನೊಬ್ಬನ ಜಾತ್ರೆಗೆ ಸಿಎಂ, ಮಾಜಿ ಸಿಎಂ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಲಿದ್ದಾರೆ.

Guru Sevalal Jayanti 2021 |ಸಂತ ಸೇವಾಲಾಲ್ ಜಯಂತ್ಯುತ್ಸವಕ್ಕೆ ಕ್ಷಣಗಣನೆ.. ಇಂದಿನಿಂದ 2 ದಿನ ನಡೆಯಲಿದೆ ಜಾತ್ರೆ
ಸಂತ ಸೇವಾಲಾಲ್ ಜಯತ್ಯುತ್ಸವ: ಪಾದಯಾತ್ರೆ ಮೂಲಕ ಬರ್ತಾ ಇರುವ ಭಕ್ತರು
Follow us on

ದಾವಣಗೆರೆ: ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಇಂದಿನಿಂದ ಸಂತ ಸೇವಾಲಾಲ್ ಜಾತ್ರೆ ನಡೆಯಲಿದೆ. ಸಿಎಂ ತವರು ಶಿಕಾರಿಪುರ ಸಮೀಪವೇ ಇರುವ ಗ್ರಾಮವಿದು. ಇದೇ ಗ್ರಾಮದಲ್ಲಿ ಸಂತ ಸೇವಾಲಾಲ್ ಅವರು ಜನ್ಮ ತಾಳಿದ್ದರು. ಹೀಗೆ ಸಂತ ಸೇವಾಲಾಲ್​ರ 282ನೇ ಜಯಂತ್ಯುತ್ಸವ ಇಂದಿನಿಂದ 2 ದಿನಗಳ ಕಾಲ ನಡೆಯಲಿದೆ. ಬಂಜಾರಾ ಸಮಾಜ ಸಾಗರೋಪಾದಿಯಲ್ಲಿ ಇಲ್ಲಿಗೆ ಬರುತ್ತೆ. ರಾಜ್ಯದ ವಿವಿಧ ಭಾಗಗಳಿಂದ ನಿರಂತರವಾಗಿ ಪಾದಯಾತ್ರೆ ಮೂಲಕ ಸಾವಿರಾರು ಜನ ಬರ್ತಾರೆ. ಮದ್ಯ, ಮಾಂಸ ಬಿಟ್ಟು ಸುಮಾರು 1 ತಿಂಗಳ ಕಾಲ ಸೇವಾಲಾಲ್ ಹೆಸರಿನಲ್ಲಿ ಮಾಲೆ ಧರಿಸುತ್ತಾರೆ. ಪಾದಯಾತ್ರೆ ಮೂಲಕ ಬಂದು ಪುಣ್ಯಕ್ಷೇತ್ರ ಸಂತ ಸೇವಾಲಾಲ್​ರ ಜನ್ಮ ಸ್ಥಳವನ್ನ ಸೇರ್ತಾರೆ.

ಸಂತ ಸೇವಾಲಾಲ್ ಜಾತ್ರೆಗೆ ಸಿಎಂ ಯಡಿಯೂರಪ್ಪ ಆಗಮಿಸಲಿದ್ದಾರೆ. ಕಳೆದ ವರ್ಷ ಘೋಷಣೆ ಮಾಡಿದಂತೆ ಬಂಜಾರ ಭಾಷಾ ಅಕಾಡಮಿ ಈಗ ಆರಂಭವಾಗಿದೆ. ಇದೇ ರೀತಿ ಸಮಾಜದ ಅಭಿವೃದ್ಧಿಗಾಗಿ ಸಿಎಂ ಬಿಎಸ್​ವೈ ಕೆಲವು ಯೋಜನೆಗಳನ್ನ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಬಂಜಾರಾ ಸಮಾಜಕ್ಕಿದೆ. ಇಂದು ಬೆಳಗ್ಗೆ ದೂದಿಯಾ ತಳಾವ್ ತೀರ್ಥದೊಂದಿಗೆ ಜಾತ್ರೆ ಆರಂಭವಾಗುತ್ತದೆ. ಸಪ್ತ ತಾಯಂದಿರ ಕೊಳದ ದರ್ಶನ ಪಡೆದು ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ.

ದೂದಿಯಾ ತಳಾವ್ ತೀರ್ಥ ಅಂದ್ರೆ ಲಂಬಾಣಿ ಭಾಷೆಯಲ್ಲಿ ಪುಣ್ಯಕ್ಷೇತ್ರದ ತೀರ್ಥ ಎಂಬುದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಲಂಬಾಣಿ ಸಮುದಾಯದ ಭಕ್ತರು ವರ್ಷಕ್ಕೆ ಒಮ್ಮೆ ಆದ್ರು ಈ ಪುಣ್ಯ ಕ್ಷೇತ್ರಕ್ಕೆ ಬಂದು ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಸ್ಥಾನದ ದರ್ಶನ ಪಡೆದುಕೊಂಡು ಹೋಗ್ತ್ತಾರೆ. ಸಿಎಂ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಜಾತ್ರೆಗೆ ಆಗಮಿಸಿ, ದರ್ಶನ ಪಡೆಯಲಿದ್ದಾರೆ.

ಹೀಗೆ ಸಂತ ಸೇವಾಲಾಲ್ ಜಾತ್ರೆ ಅಂದ್ರೆ ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿರುತ್ತದೆ. ಲಂಬಾಣಿ ಸಂಸ್ತೃತಿ ಅನಾವರಣಕ್ಕೆ ಜಾತ್ರೆ ವೇದಿಕೆ ಕಲ್ಪಿಸುತ್ತೆ. ಜಾತ್ರೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕ್ಷಣಗಣನೆ ಆರಂಭವಾಗಿದೆ.

ಸಂತ ಸೇವಾಲಾಲ್ ಜಯತ್ಯುತ್ಸವ: ಪಾದಯಾತ್ರೆ ಮೂಲಕ ಬರ್ತಾ ಇರುವ ಭಕ್ತರು

ಸಂತ ಸೇವಾಲಾಲ್ ಜಯತ್ಯುತ್ಸವ: ಪಾದಯಾತ್ರೆ ಮೂಲಕ ಬರ್ತಾ ಇರುವ ಭಕ್ತರು

ಇದನ್ನೂ ಓದಿ: ಸಂತ ಸೇವಾಲಾಲ್ ಜಯಂತಿಗೆ ಹೊಸ ಮೆರುಗು: ಡಿಜೆ ಸದ್ದಿಗೆ ಲಲನೆಯರ ಸ್ಟೆಪ್ಸ್​

Published On - 10:03 am, Sun, 14 February 21