
ದಾವಣಗೆರೆ, ಮೇ 16: ದಾವಣಗೆರೆ (Davanagere) ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐದು ಮಂದಿ ಕಿಲಾಡಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಹಣ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂಬವರೇ ಹನಿಟ್ರ್ಯಾಪ್ ಕೇಸ್ನಲ್ಲಿ ಬಂಧಿತರಾದವರು. ಈ ಕಿಲಾಡಿ ಗ್ಯಾಂಗ್ ಮೊದಲು ಶ್ರೀಮಂತ ಹಿನ್ನೆಲೆಯುಳ್ಳ ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು. ಗ್ಯಾಂಗ್‌ನ ಸದಸ್ಯೆ ಪಂಚಮಿ (34) ಎಂಬಾಕೆ ಶ್ರೀಮಂತ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಹರಿಹರ ತಾಲೂಕಿನ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಜಗದೀಶ, ಗಂಗಾ ಮಲ್ಲೇಶ್ ನಾಯ್ಕ, ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿ ಧಾವಿಸಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ಅನ್ನು ಜೈಲಿಗಟ್ಟಿದ್ದಾರೆ. ಈ ತಂಡ ಇನ್ನೂ ಹಲವು ಯುವಕರಿಗೆ ವಂಚಿಸಿರುವ ಶಂಕೆ ಇದ್ದು, ತನಿಖೆ ಚುರುಕುಗೊಂಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅತಾವುಲ್ಲಾ (46) ಎಂಬುವವರನ್ನು ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಡಿಕೆ ಕತ್ತರಿಸುವ ಕತ್ತಿ ಹಾಗೂ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಳೇ ಕಾರುಗಳ ವ್ಯಾಪಾರ ಮಾಡುತ್ತಿದ್ದ ಅತಾವುಲ್ಲಾ, ಭದ್ರಾವತಿ ತಾಲೂಕಿನ ಕಾಗೆಕೋಡುಮಗ್ಗಿ ಗ್ರಾಮದ ತನ್ನ ಸೋದರತ್ತೆಯ ಮಗಳ ಬಳಿ 2 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಇಡೀ ಕರ್ನಾಟಕವನ್ನೇ ನಡುಗಿಸಿದ 4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್ ಮಾಲೀಕ ಅರೆಸ್ಟ್
ಸಾಲದ ಹಣದ ವಿವಾದ ಒಂದೆಡೆಯಾದರೆ, ಸೋದರತ್ತೆಯ ಮಗಳನ್ನು ಬಿಟ್ಟು ಅತಾವುಲ್ಲಾ ಬೇರೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಸೋದರತ್ತೆ ತೀವ್ರ ದ್ವೇಷ ಸಾಧಿಸುತ್ತಿದ್ದಳು. ಇದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಶೇಖ್ ದಸ್ತುಗಿರಿ ಹಾಗೂ ಜಬೀವುಲ್ಲಾ ಎಂಬ ಹಂತಕರಿಗೆ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಸದ್ಯ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ