ದಾವಣಗೆರೆ: ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಸನ್ಮಾನ ಮಾಡುವ ಉತ್ತಮ ಕಾರ್ಯವನ್ನು ದಾವಣಗೆರೆ ಜಿಲ್ಲಾಡಳಿತ ಕೈಗೊಂಡಿದೆ. ಈ ಮೂಲಕ, ದಾವಣಗೆರೆಯಲ್ಲಿ ವಿನೂತನವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಇಂದು ದೇಶಕ್ಕೆ ಸ್ವಾತಂತ್ರ ಸಿಕ್ಕು 75 ವರ್ಷವಾಯಿತು. ಸ್ವಾತಂತ್ರ್ಯ ಎಂಬುದು ಸುಮ್ಮನೇ ಸಿಕ್ಕಿಲ್ಲ. ಲಕ್ಷಾಂತರ ಜನರ ತ್ಯಾಗ ಬಲಿದಾನಗಳ ಮೂಲಕ ಲಭಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮನೆ ಬಿಟ್ಟು ಹೋರಾಟ ಮಾಡಿದ ಕೆಲವು ಹಿರಿಯರು ಈಗ ನಮ್ಮ ಜೊತೆಗೆ ಇದ್ದಾರೆ. ಅಂತಹವರ ಮನೆಗೆ ತೆರಳಿ ಅವರೊಂದಿಗೆ ಸಂಭ್ರಮ ಆಚರಣೆ ಮಾಡುವ ಕಾರ್ಯವನ್ನು ದಾವಣಗೆರೆ ಜಿಲ್ಲಾಡಳಿತ ಮಾಡಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ನಿವಾಸಿ ರುದ್ರಮುನಿಯಪ್ಪ, ಎಚ್. ವೀರಯ್ಯ ಹಾಗೂ ಚಂದ್ರ ರೆಡ್ಡಿ ಎಂಬ ಮೂರು ಜನ ಹಿರಿಯರು ದೇಶವನ್ನು ದಾಸ್ಯದಿಂದ ವಿಮೋಚನೆ ಮಾಡಲು ಮಹಾತ್ಮ ಗಾಂಧೀಜಿ ಆರಂಭಿಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಜಗಳೂರು ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿತ್ತು. ಈ ಜಿಲ್ಲೆಯ ಭಾಗವಾದ ಜಗಳೂರಿನಲ್ಲಿ ನೂರಾರು ಜನ ತಂಡ ಕಟ್ಟಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಅವರಲ್ಲಿ ಈ ಮೂವರು ಈಗ ನಮ್ಮ ಜೊತೆಗಿದ್ದಾರೆ. ಗಾಂಧಿಯ ಆದರ್ಶದಂತೆ ಸರಳ ಜೀವನ ನಡೆಸುತ್ತಿರುವ ಇವರ ಮನೆಗಳಿಗೆ ತೆರಳಿ ಜಿಲ್ಲಾಡಳಿತ ಇಂದು ಸ್ವಾತಂತ್ರ್ಯ ದಿನ ಆಚರಿಸಿದೆ.
ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಗಳೂರು ಶಾಸಕ ಎಸ್.ವಿ ರಾಮಚಂದ್ರ, ಎಸ್ಪಿ ಸಿ.ಬಿ ರಿಷ್ಯಂತ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ವಿಜಯ ಮಹಾಂತೇಶ ಭಾಗವಹಿಸಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ ಜಗಳೂರಿನ ಸ್ವಾತಂತ್ರ್ಯ ಹೋರಾಟಗಾರರಾದ ರುದ್ರಮುನಿಯಪ್ಪ, ಹೆಚ್.ವೀರಯ್ಯ, ಚಂದ್ರರೆಡ್ಡಿ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವ ಸಲ್ಲಿಸಲಾಗಿದೆ.
ಇದನ್ನೂ ಓದಿ: Independence Day: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಕರ್ನಾಟಕದ ವಿವಿಧೆಡೆ ಸಂಭ್ರಮಾಚರಣೆ
ದಾವಣಗೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನವೇ ಕಾರ್ಮಿಕರ ಪ್ರತಿಭಟನೆ!